ಬುಧವಾರ, ನವೆಂಬರ್ 20, 2019
25 °C
ಯಾವತ್ತೂ ಹೀಗಾಗಿರಲಿಲ್ಲ: ಬೇಸರ ತೋಡಿಕೊಂಡ ಮಾಜಿ ಮೇಯರ್‌ಗಳು

ಗಂಟೆಗಟ್ಟಲೆ ಕಾಯಿಸಿದ ಮೇಯರ್‌ ಎಂ.ಗೌತಮ್‌ ಕುಮಾರ್‌

Published:
Updated:
Prajavani

ಬೆಂಗಳೂರು: ಬಿಬಿಎಂಪಿ ಆಡಳಿತಕ್ಕೆ ಸಂಬಂಧಿಸಿ ಸಲಹೆ ‍ಪಡೆಯಲು ಮಾಜಿ ಮೇಯರ್‌ಗಳನ್ನು ಸೋಮವಾರ ತಮ್ಮ ಕಚೇರಿಗೆ ಆಹ್ವಾನಿಸಿದ್ದ ಮೇಯರ್‌ ಎಂ.ಗೌತಮ್‌ ಕುಮಾರ್‌, ಅವರನ್ನು ತಾಸುಗಟ್ಟಲೆ ಕಾಯಿಸಿದರು. ಕಾದು ಸುಸ್ತಾದ ಮಾಜಿ ಮೇಯರ್‌ಗಳು ಸಭೆ ಆರಂಭವಾಗುವುದಕ್ಕೆ ಮುನ್ನವೇ ನಿರ್ಗಮಿಸುವ ಮೂಲಕ ಪಕ್ಷಭೇದ ಮರೆತು ಪ್ರತಿಭಟನೆ ವ್ಯಕ್ತಪಡಿಸಿದರು.

ಮಧ್ಯಾಹ್ನ 12.30ಕ್ಕೆ ಕರೆಯಲಾದ ಈ ಸಭೆಗೆ ಮಾಜಿ ಮೇಯರ್‌ಗಳಾದ ಸಂಪತ್‌ರಾಜ್‌, ಜಿ.ಪದ್ಮಾವತಿ, ಪದ್ಮನಾಭ ರೆಡ್ಡಿ, ಶಾಂತಕುಮಾರಿ, ಎಸ್‌.ಕೆ.ನಟರಾಜ್‌, ಬಿ.ಎಸ್‌.ಸತ್ಯನಾರಾಯಣ, ಹುಚ್ಚಪ್ಪ, ರಾಮ ಚಂದ್ರಪ್ಪ, ಲಕ್ಕಣ್ಣ ಮುಂತಾದವರು ಬಂದಿದ್ದರು. ಅವರ ಮಧ್ಯಾಹ್ನ 1.45ರವರೆಗೆ ಕಾದರೂ ಮೇಯರ್‌ ಬಂದಿರಲಿಲ್ಲ. ಈ ಬಗ್ಗೆ ಮಾಜಿ ಮೇಯರ್‌ಗಳು ‘ಪ್ರಜಾವಾಣಿ’ ಜೊತೆ ಅಸಮಾಧಾನ ತೋಡಿಕೊಂಡರು.

ಯಾವತ್ತೂ ಹೀಗಾಗಿರಲಿಲ್ಲ: ‘ಮೇಯರ್‌ ಹುದ್ದೆಗೆ ಅದರದ್ದೇ ಆದ ಘನತೆ ಇದೆ. ಬಿಬಿಎಂಪಿಯ ಇತಿಹಾಸದಲ್ಲಿ ಯಾವತ್ತೂ ಯಾವ ಮೇಯರ್‌ ಕೂಡಾ ಮಾಜಿ ಮೇಯರ್‌ಗಳನ್ನು ಈ ರೀತಿ ನಡೆಸಿ ಕೊಂಡಿರಲಿಲ್ಲ. ನಮ್ಮನ್ನು ಸಭೆಗೆ ಆಹ್ವಾನಿಸಿ ಅವಮಾನ ಮಾಡಲಾಗಿದೆ’ ಎಂದು ಮಾಜಿ ಮೇಯರ್‌ ಹುಚ್ಚಪ್ಪ ತಿಳಿ ಸಿದರು.

‘ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಗಾಂಧಿ ಜಯಂತಿಯಂದು ನಡೆದ ಸರ್ವಧರ್ಮ ಪ್ರಾರ್ಥನೆಯ ಸಂದರ್ಭದಲ್ಲೂ ಮೇಯರ್‌ ಇದೇ ರೀತಿ ವರ್ತಿಸಿದ್ದರು. ಆ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದು ಅಲ್ಲದೇ ಅರ್ಧದಲ್ಲೇ ನಿರ್ಗಮಿಸಿದ್ದರು‌. ಅವರು ಹುದ್ದೆಯ ಘನತೆಯನ್ನು ಅರಿತು ವರ್ತಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಮಾಜಿ ಮೇಯರ್‌ಗಳಿಂದ ಮೇಯರ್‌ ಸಲಹೆ ಪಡೆಯುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ನಮ್ಮನ್ನು ಸಭೆಗೆ ಕರೆಸಿ ಕಾಯಿಸಬಾರದಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆದ ಸಭೆಯಲ್ಲಿ ಭಾಗವಹಿಸುವುದಾದರೆ ನಮಗೆ ಈ ಬಗ್ಗೆ ಮಾಹಿತಿ ನೀಡಿ, ಸಭೆಯನ್ನು ಮುಂದೂಡಬಹುದಿತ್ತು. ಕನಿಷ್ಠ ಪಕ್ಷ ತಮ್ಮ ಆಪ್ತಸಹಾಯಕರ ಮೂಲಕವಾದರೂ ಸಂದೇಶ ತಲುಪಿಸಬಹುದಿತ್ತು’ ಎಂದು ಜಿ.ಪದ್ಮಾವತಿ ತಿಳಿಸಿದರು.

‘ಮುಖ್ಯಮಂತ್ರಿ ಕರೆದ ಸಭೆಯಲ್ಲಿ ಭಾಗವಹಿಸಬೇಕಾಗಿ ಬಂದಿದ್ದರಿಂದ ಈ ರೀತಿ ಆಗಿದೆ. ಇನ್ನೊಮ್ಮೆ ಸಭೆ ಕರೆಯು ವುದಾಗಿ ಮೇಯರ್‌ ತಿಳಿಸಿದ್ದಾರೆ. ಇಂತಹ ಪ್ರಸಂಗ ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ಬಿ.ಎಸ್‌.ಸತ್ಯನಾರಾಯಣ ಹೇಳಿ ದರು.

‘ಕೆಲವು ಮಾಜಿ ಮೇಯರ್‌ಗಳಿಗೆ ಮಧುಮೇಹ ಕಾಯಿಲೆಯೂ ಇತ್ತು. ಮೇಯರ್‌ ಈಗ ಬರುತ್ತಾರೆ ಎಂದು ಅವರ ಕಚೇರಿ ಸಿಬ್ಬಂದಿ ಹೇಳುತ್ತಲೇ ಇದ್ದರು. ಮಧ್ಯಾಹ್ನ 1.45ರವರೆಗೆ ಉಪಾಹಾರವನ್ನೂ ನೀಡಲಿಲ್ಲ. ನಾವೆಲ್ಲ ನಿರ್ಗಮಿಸಲು ಮುಂದಾದ ಬಳಿಕ ಊಟವನ್ನು ತರಿಸಿದರು. ಸೌಜನ್ಯಕ್ಕೂ ಕ್ಷಮೆ ಕೇಳಲಿಲ್ಲ’ ಎಂದು ಹೆಸರು ಹೇಳಿಕೊಳ್ಳಲು ಬಯಸದ ಮಾಜಿ ಮೇಯರ್‌ ಒಬ್ಬರು ಬೇಸರ ವ್ಯಕ್ತಪಡಿಸಿದರು.

‘ಸಿ.ಎಂ. ಸಭೆ ತಡವಾಗಿದ್ದಕ್ಕೆ ಸಮಸ್ಯೆ’

‘ಕಸ ವಿಲೇವಾರಿ ಸೇರಿದಂತೆ ಬಿಬಿಎಂಪಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರು ಸಭೆ ಕರೆದಿದ್ದರು. ಈ ಸಭೆಯೂ ಮುಂಚಿತವಾಗಿಯೇ ನಿಗದಿಯಾಗಿತ್ತು. 12.30ಕ್ಕೆ ಸಭೆ ಮುಗಿಯಬಹುದು ಎಂದು ಭಾವಿಸಿ ಮಾಜಿ ಮೇಯರ್‌ಗಳ ಸಭೆಯನ್ನು 1 ಗಂಟೆಗೆ ನಿಗದಿಪಡಿಸಿದ್ದೆ. ಮುಖ್ಯಮಂತ್ರಿ ನೇತೃತ್ವದ ಸಭೆ ವಿಳಂಬವಾಗಿದ್ದರಿಂದ ಸಮಸ್ಯೆಯಾಯಿತು’ ಎಂದು ಗೌತಮ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)