ಶುಕ್ರವಾರ, ಆಗಸ್ಟ್ 23, 2019
21 °C

ದರೋಡೆಗೆ ಹೊಂಚು ಹಾಕಿದವರ ಸೆರೆ

Published:
Updated:
Prajavani

ಬೆಂಗಳೂರು: ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ರೌಡಿಶೀಟರ್‌ ದಡಿಯಾ ಉಮೇಶ್‌ ಮತ್ತು ಆತನ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ಉಮೇಶ್‌ ಅಲಿಯಾಸ್‌ ದಡಿಯಾ ಉಮೇಶ್‌ ಅಲಿಯಾಸ್‌ ಲಗ್ಗೆರೆ ಉಮೇಶ್‌ (35), ಆತನ ಸಹಚರರಾದ ಉಲ್ಲಾಳು ಉಪನಗರದ ಸಿದ್ಧಾರ್ಥ ಗೌಡ (23), ಸುಂಕದಕಟ್ಟೆ ನಿವಾಸಿ ನಾಗೇಶ (23), ಕಮಲಾನಗರದ ಮನು (25) ಬಂಧಿತರು.

ಆರೋಪಿಗಳಿಂದ ಎರಡು ಲಾಂಗ್‌, ಖಾರದ ಪುಡಿ ಮತ್ತು ದೊಣ್ಣೆ ವಶಪಡಿಸಿಕೊಳ್ಳಲಾಗಿದೆ.

ದಾರಿಹೋಕರನ್ನು ಅಡ್ದಗಟ್ಟಿ ದರೋಡೆ ನಡೆಸುವ ಉದ್ದೇಶದಿಂದ ತನ್ನ ಸಹಚರರ ಜೊತೆ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳ ಸಹಿತ ಉಮೇಶ್ ಹೊಂಚು ಹಾಕಿ ನಿಂತಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿಗಳ ಪಟ್ಟಿಯಲ್ಲಿ ಉಮೇಶ್‌ ಹೆಸರಿದೆ. ಈತನ ವಿರುದ್ಧ ಅನ್ನಪೂರ್ಣೆಶ್ವರಿ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ದರೋಡೆ ಯತ್ನ, ಅಪಹರಣ ಪ್ರಕರಣಗಳು ದಾಖಲಾಗಿವೆ.

ಆತನ ಸಹಚರರಾದ ಸಿದ್ಧಾರ್ಥ ಗೌಡ ಮತ್ತು ನಾಗೇಶನ ಹೆಸರು ಕೂಡಾ ಅನ್ನಪೂರ್ಣೇಶ್ವರಿ ಠಾಣೆಯ ರೌಡಿ ಪಟ್ಟಿಯಲ್ಲಿದೆ. ಇದೇ ಠಾಣೆಯಲ್ಲಿ ಮನು ವಿರುದ್ಧ ಕೂಡಾ ಅಪಹರಣ ಪ್ರಕರಣ ದಾಖಲಾಗಿದೆ.

Post Comments (+)