ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಝಳ–ಕಣ್ಣಿನ ಸಮಸ್ಯೆ ಹೆಚ್ಚಳ

ಆಸ್ಪತ್ರೆಗಳಲ್ಲಿ ರೋಗಿಗಳ ಪ್ರಮಾಣದಲ್ಲಿ ಭಾರಿ ಏರಿಕೆ
Last Updated 16 ಮೇ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ಮಾಲಿನ್ಯ, ಬಿಸಿಲಿನ ಝಳಸೇರಿದಂತೆ ವಿವಿಧ ಕಾರಣದಿಂದ ನಗರದ ನಿವಾಸಿಗಳಲ್ಲಿ ಕಣ್ಣಿನ ಸಮಸ್ಯೆ ಉಲ್ಬಣಿಸಿದೆ. ಕಣ್ಣಿನ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.

ಈ ವರ್ಷ ನಗರದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ. ಏಪ್ರಿಲ್‌ ತಿಂಗಳಿನಲ್ಲಂತೂ ಬಹುತೇಕ ದಿನಗಳಲ್ಲಿ 35ರಿಂದ 36 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು. ಇದರ ಪರಿಣಾಮ ಕಣ್ಣಿನ ಆರೋಗ್ಯದ ಮೇಲೂ ತಟ್ಟಿದೆ.ಉಷ್ಣ ವಾತಾವರಣದಲ್ಲಿ ಬೀಸುವ ಗಾಳಿಯಿಂದ ಕಣ್ಣಿನ ಪೊರೆಗೆ ಹಾನಿ ಉಂಟಾಗುತ್ತದೆ. ಈ ಬೆಳವಣಿಗೆ ಅಂಧಕಾರದ ಪ್ರಮಾಣ ಹೆಚ್ಚಳಕ್ಕೂ ಆಹ್ವಾನ ನೀಡಿದೆ.

ಮೊಬೈಲ್‌ನಂತಹ ಆಧುನಿಕ ಉಪಕರಣದ ಅತಿಯಾದ ಬಳಕೆ ಕೂಡ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತಿದೆ. ಕಣ್ಣುರಿ, ಕಣ್ಣಿನಲ್ಲಿ ಗೀರು, ತುರಿಕೆ, ಕೆಂಪಾಗುವುದು ಮುಂತಾದ ಸಮಸ್ಯೆಗಳಿಂದಾಗಿ ಜನ ಆಸ್ಪತ್ರೆಯತ್ತ ಮುಖಮಾಡುತ್ತಿದ್ದಾರೆ.

ಕಳೆದ ವರ್ಷದ ಈ ಅವಧಿಗೆಹೋಲಿಸಿದರೆ ಕಣ್ಣಿನ ಸಮಸ್ಯೆಗೆ ಒಳಪಟ್ಟವರ ಸಂಖ್ಯೆ ಈ ವರ್ಷ ಶೇ 20ರಷ್ಟು ಏರಿಕೆಯಾಗಿದೆ. ನಗರದ ಪ್ರಮುಖ ಆಸ್ಪತ್ರೆಗಳಾದ ಮಿಂಟೊ, ನಾರಾಯಣ ನೇತ್ರಾಲಯ, ಡಾ. ಅಗರವಾಲ್ಸ್ ಐ ಹಾಸ್ಪಿಟಲ್, ಶಂಕರ ಕಣ್ಣಿನ ಆಸ್ಪತ್ರೆ, ಬೆಂಗಳೂರು ನೇತ್ರಾಲಯಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ.

‘ಏಪ್ರಿಲ್‌ ತಿಂಗಳಿಂದ ಕಣ್ಣಿನ ಸಮಸ್ಯೆಯ ಚಿಕಿತ್ಸೆಗೆ ಬಂದವರ ಸಂಖ್ಯೆ ದುಪ್ಪಟ್ಟಾಗಿದೆ. ಕೇವಲ ಒಂದು ವಾರದಲ್ಲಿ 600ಕ್ಕೂ ಅಧಿಕ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಅದೇ ರೀತಿ, ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಕೂಡ ಅಧಿಕವಾಗಿದೆ. ನಮ್ಮಲ್ಲಿ 300 ಹಾಸಿಗೆ ಸೌಲಭ್ಯವಿದ್ದು, ಶಸ್ತ್ರಚಿಕಿತ್ಸೆ ಅಗತ್ಯ ಇರುವವರನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುತ್ತಿದ್ದೇವೆ. ಕಣ್ಣಿನ ಸಮಸ್ಯೆಗೆ ಬಂದವರಲ್ಲಿ ಬಹುತೇಕರು ಮಕ್ಕಳೇ ಆಗಿದ್ದಾರೆ’ ಎಂದು ಮಿಂಟೊ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚುತ್ತಿರುವ ವಾಯು ಮಾಲಿನ್ಯವೂ ಕಣ್ಣಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ದೂಳು ಮತ್ತು ಹೊಗೆ ಕಣ್ಣಿನ ಪೊರೆಗೆ ಹಾನಿ ಮಾಡುತ್ತದೆ. ಚಿಕಿತ್ಸೆಗೆ ಪ್ರತಿನಿತ್ಯಸರಾಸರಿ 10ರಿಂದ 15 ಮಂದಿ ಬರುತ್ತಿದ್ದರು. ಇತ್ತೀಚೆಗೆ ನಿತ್ಯ 25ರಿಂದ 30 ಮಂದಿ ಬರುತ್ತಿದ್ದಾರೆ. ಬೇಸಿಗೆಯಲ್ಲಿ ಕಣ್ಣಿನ ಆರೋಗ್ಯವನ್ನು ಬಹುತೇಕರು ಕಡೆಗಣಿಸಿ, ಸಮಸ್ಯೆ ತಂದುಕೊಳ್ಳುತ್ತಿದ್ದಾರೆ. ಮಕ್ಕಳು ಆಡುವಾಗ ಕಣ್ಣಿನಲ್ಲಿ ದೂಳು ಹೋದಾಗ ಉಜ್ಜಿಕೊಳ್ಳುವುದರಿಂದ ಕೂಡ ಕಣ್ಣಿನ ಪೊರೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ’ ಎಂದು ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ತಿಳಿಸಿದರು.

ಕಣ್ಣಿನ ಸಮಸ್ಯೆ ಹೆಚ್ಚಳಕ್ಕೆ ಕಾರಣ

l ವಾಯುಮಾಲಿನ್ಯ ಹೆಚ್ಚಳ

l ಬೇಸಿಗೆಯಲ್ಲಿನ ದೂಳಿನ ಪ್ರಮಾಣ ಹೆಚ್ಚುವುದು

l ಹವಾನಿಯಂತ್ರಿತ ಯಂತ್ರದ (ಎ.ಸಿ) ಅತಿಬಳಕೆ

l ಅತಿಯಾದ ಮೊಬೈಲ್ ವೀಕ್ಷಣೆ

l ಈಜುಕೊಳದ ನೀರು ಶುದ್ಧೀಕರಣಕ್ಕೆ ರಾಸಾಯನಿಕ ಬಳಕೆ

l ಸೂರ್ಯನ ಕಿರಣ ನೇರವಾಗಿ ಕಣ್ಣಿಗೆ ತಾಕುವುದು

l ಗಿಡಗಳಿಗೆ ಕೀಟನಾಶಕ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT