ನೀಲಿ ಚಿತ್ರ ಕಳಿಸಿದ್ದವನಿಗೆ ಹಿಗ್ಗಾಮುಗ್ಗಾ ಥಳಿತ

7
ಭೇಟಿಯ ನೆಪದಲ್ಲಿ ಆರೋಪಿಯನ್ನು ಕರೆಸಿಕೊಂಡು ಪೊಲೀಸರಿಗೆ ಒಪ್ಪಿಸಿದ ಯುವತಿ

ನೀಲಿ ಚಿತ್ರ ಕಳಿಸಿದ್ದವನಿಗೆ ಹಿಗ್ಗಾಮುಗ್ಗಾ ಥಳಿತ

Published:
Updated:

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಯುವತಿಗೆ ನೀಲಿ ಚಿತ್ರ ಹಾಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಮೈಸೂರಿನ ಸಿದ್ದುಗೌಡ ಎಂಬಾತನನ್ನು, ಯುವತಿಯೇ ನಗರದ ಹೋಟೆಲ್‌ಗೆ ಕರೆಸಿಕೊಂಡು ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ.

‘ರಮ್ಯಾ ಗೌಡ’ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದಿದ್ದ ಆರೋಪಿ, ಆರು ತಿಂಗಳ ಹಿಂದೆ ಯುವತಿಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿದ್ದ. ಹುಡುಗಿಯ ಹೆಸರಿದ್ದ ಕಾರಣ ಆಕೆ ಸ್ನೇಹವನ್ನು ಒಪ್ಪಿಕೊಂಡಿದ್ದಳು. ನಂತರ ಇಬ್ಬರೂ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಕೆಲ ದಿನಗಳ ಬಳಿಕ ಆರೋಪಿ ಅಶ್ಲೀಲ ವಿಡಿಯೊಗಳನ್ನು ಕಳುಹಿಸಲಾರಂಭಿಸಿದ್ದ. ಇದರಿಂದ ಅನುಮಾನಗೊಂಡ ಯುವತಿ, ಮಾತುಕತೆ ನಿಲ್ಲಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಎಷ್ಟೇ ಸಂದೇಶ ಕಳುಹಿಸಿದರೂ ಉತ್ತರ ಬಾರದಿದ್ದಾಗ ಆರೋಪಿ ತನ್ನ ನಿಜವಾದ ಹೆಸರು ಹಾಗೂ ವಿವರ ಹೇಳಿ ಕ್ಷಮೆಯಾಚಿಸಿದ್ದ. ಆ ನಂತರವೂ ಪ್ರತಿಕ್ರಿಯೆ ಬಾರದಿದ್ದಾಗ ಕುಪಿತಗೊಂಡ ಆತ, ಯುವತಿಯ ಫೋಟೊ ಹಾಗೂ ಮೊಬೈಲ್ ಸಂಖ್ಯೆಯನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದ. ಅಲ್ಲದೆ, ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದ.

ಇದರಿಂದ ಬೇಸರಗೊಂಡ ಯುವತಿ, ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಳು. ದೂರು ಕೊಟ್ಟು ವಾರ ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸದಿದ್ದಾಗ, ತಾನೇ ಉಪಾಯ ಮಾಡಿ ಆತನನ್ನು ಕರೆಸಿಕೊಳ್ಳಲು ನಿರ್ಧರಿಸಿದಳು.

ಸಂಚಿನಂತೆಯೇ ಆತನೊಂದಿಗೆ ಸಲುಗೆಯಿಂದ ಮಾತನಾಡಲು ಪ್ರಾರಂಭಿಸಿದ ಆಕೆ, ‘ನಿನ್ನನ್ನು ಭೇಟಿ ಮಾಡಬೇಕು’ ಎಂದಿದ್ದಳು. ಅದಕ್ಕೆ ಆತ, ‘ನಾನು ಬಿಯರ್ ತೆಗೆದುಕೊಂಡು ನಿಮ್ಮ ಮನೆಗೇ ಬರುತ್ತೇನೆ. ಮಟನ್ ಅಡುಗೆ ಮಾಡಿ ಇಟ್ಟಿರು’ ಎಂದು ಪ್ರತಿಕ್ರಿಯಿಸಿದ್ದ. ಈ ಹಂತದಲ್ಲಿ ಯುವತಿ ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರ ನೆರವು ಕೋರಿದ್ದಳು.

ಆಕೆಯ ಸೂಚನೆಯಂತೆ ಸಿದ್ದುಗೌಡ ಶುಕ್ರವಾರ ಮಧ್ಯಾಹ್ನ ಬಸವೇಶ್ವರನಗರಕ್ಕೆ ಬಂದಿದ್ದ. ಈ ವೇಳೆ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಕಾರ್ಯಕರ್ತರು, ನಂತರ ಠಾಣೆಗೆ ಎಳೆದೊಯ್ದರು.

‘ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕಾರಣ ಆರೋಪಿಯನ್ನು ಸೈಬರ್ ಪೊಲೀಸರ ವಶಕ್ಕೆ ಕೊಡಲಾಗಿದೆ. ಆರೋಪಿ ಕೆಲ ದಿನಗಳಿಂದ ಕುಂಬಳಗೋಡಿನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ’ ಎಂದು ಬಸವೇಶ್ವರನಗರ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !