ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಸ್ವಾಮೀಜಿಗಳ ಸೆರೆ, ‘ಮಹಾರಾಜ’ನಿಗೆ ಶೋಧ!

ವಿಶೇಷ ಪೂಜೆ ನೆಪದಲ್ಲಿ ಐದು ಮನೆಗಳಲ್ಲಿ ನಗ–ನಾಣ್ಯ ದೋಚಿದ್ದ ಗ್ಯಾಂಗ್
Last Updated 26 ಏಪ್ರಿಲ್ 2019, 20:55 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮ್ಮ ಕುಟುಂಬಕ್ಕೆ ಗಂಡಾಂತರವಿದೆ’ ಎಂದು ಜನರಲ್ಲಿ ಭಯ ಹುಟ್ಟಿಸಿ, ವಿಶೇಷ ಪೂಜೆಯ ನೆಪದಲ್ಲಿ ಅವರ ಮನೆಯಿಂದ ನಗ–ನಾಣ್ಯ ದೋಚುತ್ತಿದ್ದ ನಕಲಿ ಸ್ವಾಮೀಜಿಗಳ ಪೈಕಿ ಇಬ್ಬರು ವಿ.ವಿ.ಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹುಬ್ಬಳ್ಳಿಯ ರಿಯಲ್ ಎಸ್ಟೇಟ್ ಏಜೆಂಟ್‌ ಚೇತನ್ ಚಂದ್ರಕಾಂತ್ ಧಾಗೆ (37) ಹಾಗೂ ಆಂಧ್ರಪ್ರದೇಶದ ರಾಜೇಶ್ ಗಣಪತ್‌ ರಾವ್ ಥಾಂಬೆ (55) ಎಂಬುವರನ್ನು ಬಂಧಿಸಿ 925 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿಯಾದ ಮಹಾರಾಷ್ಟ್ರದ ಅವಿನಾಶ್ಸುರೇಶ್ ಕಾನ್ವಿಲ್ಕರ್ ಅಲಿಯಾಸ್ ‘ಮಹಾರಾಜ’ನ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುಲಿಗೆಯೇ ಖಯಾಲಿ: ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದ ಚಂದ್ರಕಾಂತ್, ಪರಿಚಿತರ ಸಲಹೆ ಮೇರೆಗೆ ಮಹಾರಾಷ್ಟ್ರದ ಅವಿನಾಶ್‌ನನ್ನೇ ಕಚೇರಿ ಪೂಜೆಗೆ ಕರೆದಿದ್ದ. ಹಣ ಪಡೆಯದೆ ಪೂಜೆ ಮಾಡಿಕೊಟ್ಟಿದ್ದ ಆತ, ‘ನನ್ನದೊಂದು ಗ್ಯಾಂಗ್ ಇದೆ. ಪೂಜೆ ನೆಪದಲ್ಲಿ ಮನೆಗಳಿಗೆ ಹೋಗಿ, ಒಡವೆಗಳನ್ನು ದೋಚುತ್ತೇವೆ. ಅವುಗಳ ವಿಲೇವಾರಿಗೆ ಜನ ಬೇಕು. ನೀನು ಸಹಕರಿಸಿದರೆ
ಶೇ 20ರಷ್ಟು ಕಮಿಷನ್ಕೊಡುತ್ತೇನೆ’ ಎಂದಿದ್ದ. ಆ ಕೆಲಸಕ್ಕೆ ಒಪ್ಪಿಕೊಂಡ ಆತ, ತನ್ನೊಟ್ಟಿಗೆ ಆಂಧ್ರದ ಗೆಳೆಯ ರಾಜೇಶ್‌ನನ್ನೂ ಸೇರಿಸಿಕೊಂಡಿದ್ದ.

ಮಹಾರಾಷ್ಟ್ರದಲ್ಲಿ ಜನರನ್ನು ವಂಚಿಸಿ ಆಭರಣ ದೋಚುತ್ತಿದ್ದ ಅವಿನಾಶ್, ಅವುಗಳನ್ನು ಇವರಿಬ್ಬರ ಮೂಲಕವೇ ‘ಮಣಪ್ಪುರಂ ಫೈನಾನ್ಸ್‌’ ಸೇರಿದಂತೆ ಬೆಂಗಳೂರಿನ ವಿವಿಧ ಮಳಿಗೆಗಳಲ್ಲಿ ಗಿರವಿ ಇಡಿಸುತ್ತಿದ್ದ. ಬಂದ ಹಣದಲ್ಲಿ ಚದ್ರಕಾಂತ್ ಹಾಗೂ ರಾಜೇಶ್‌ಗೆ ಪಾಲು ಕೊಡುತ್ತಿದ್ದ. ಕ್ರಮೇಣ ಇವರೂ ಆತನ ಜತೆ ಸೇರಿ ನಗರದಲ್ಲಿ ಜನರನ್ನು ವಂಚಿಸಲು ಶುರು ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಕುಟುಂಬದ ಹಿನ್ನೆಲೆ ತಿಳಿಯುತ್ತಾರೆ: ‘ಪ್ರತಿಷ್ಠಿತ ರಸ್ತೆಗಳಲ್ಲಿ ಸುತ್ತಾಡಿ ಜನರ ಚಲನವಲನಗಳನ್ನು ಗಮನಿಸುತ್ತಿದ್ದ ಚಂದ್ರಕಾಂತ್ ಹಾಗೂ ರಾಜೇಶ್, ಸೌಮ್ಯ ಸ್ವಭಾವವುಳ್ಳವರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಅಕ್ಕ–ಪಕ್ಕದ ಮನೆಯವರ ಮೂಲಕ ಅವರ ಕುಟುಂಬದ ಹಿನ್ನೆಲೆ ಹಾಗೂ ಪ್ರಸ್ತುತ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಕೊನೆಗೆ ಆ ಸಮಸ್ಯೆಗಳನ್ನೇ ಹೊತ್ತುಕೊಂಡು ಅವರ ಮನೆಗೆ ತೆರಳುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

‘ನಿಮ್ಮ ತಾಯಿಯ ಆರೋಗ್ಯ ಸರಿಯಿಲ್ಲ ಅಲ್ವಾ? ನಿಮ್ಮ ಮಗ ಚೆನ್ನಾಗಿ ಓದುತ್ತಿಲ್ಲ ಅಲ್ವಾ? ಸಂಸಾರದಲ್ಲಿ ತೊಂದರೆ ಇದೆ ಅಲ್ವಾ?... ಎಂಬಂತಹ ಕಾರಣಗಳನ್ನು, ಮನೆ ಮಾಲೀಕರು ಹೇಳುವ ಮೊದಲು ತಾವೇ ಹೇಳಿ ಅವರ ವಿಶ್ವಾಸ ಗಿಟ್ಟಿಸಿಕೊಳ್ಳುತ್ತಿದ್ದರು. ಕೊನೆಗೆ, ‘ವಿಶೇಷ ಪೂಜೆ ಮಾಡಿಸಿದರೆ ಗಂಡಾಂತರ ದೂರ ಆಗುತ್ತದೆ. ನಮ್ಮ ‘ಮಹಾರಾಜ’ರು ಒಮ್ಮೆ ನಿಮ್ಮ ಮನೆಗೆ ಬರುತ್ತಾರೆ. ಅವರ ಹತ್ತಿರ ಸಮಸ್ಯೆಗಳನ್ನು ಹೇಳಿಕೊಳ್ಳಿ’ ಎಂದು ಹೇಳಿ ಹೋಗುತ್ತಿದ್ದರು. ಅದಾದ ನಾಲ್ಕೈದು ದಿನಗಳಲ್ಲೇ ಅವಿನಾಶ್ ಸ್ವಾಮೀಜಿಯ ವೇಷಾಧಾರಿಯಾಗಿ ಮನೆಗೆ ಹೋಗುತ್ತಿದ್ದ.’

‘ನಿಮ್ಮ ಕುಟುಂಬದ ಹಿರಿಯರ ಆತ್ಮಗಳಿಗೆ ಇನ್ನೂ ಶಾಂತಿ ಸಿಕ್ಕಿಲ್ಲ. ಅವರು ಬಳಸಿದ್ದಂತಹ ಒಡವೆಗಳನ್ನು ಹಾಗೂ ಮನೆಯಲ್ಲಿರುವ ನಗದನ್ನು ನನಗೆ ಕೊಡಿ. ರಾಜಸ್ಥಾನದ ಮೌಂಟ್ ಅಬು, ಗುಜರಾತ್‌ನ ಸೋಮನಾಥ ದೇವಸ್ಥಾನ ಹಾಗೂ ಗೋಕರ್ಣಕ್ಕೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗುವುದರ ಜತೆಗೆ, ನಿಮ್ಮ ಸಮಸ್ಯೆಗಳೂ ಬಗೆಹರಿಯುತ್ತವೆ’ ಎಂದು ನಂಬಿಸಿ ನಗ–ನಾಣ್ಯಗಳೊಂದಿಗೆ ಪರಾರಿಯಾಗುತ್ತಿದ್ದ. ತಿಂಗಳು ಕಳೆದರೂ ಆತ ಸಂಪರ್ಕಕ್ಕೆ ಸಿಗದಿದ್ದಾಗ
ಜನ ಠಾಣೆಗಳಿಗೆ ದೂರು ಕೊಡಲಾರಂಭಿಸಿದರು’ ಎಂದು ಮಾಹಿತಿ ನೀಡಿದರು.

ಒಂದೇ ತಿಂಗಳಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿದ್ದರಿಂದ ನಕಲಿ ಸ್ವಾಮೀಜಿಗಳ ಪತ್ತೆಗೆ ಡಿಸಿಪಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಇದರ ಬೆನ್ನಲ್ಲೇ ಫೆ.28ರಂದು ಉತ್ತರಹಳ್ಳಿಯಲ್ಲಿ ಶ್ರೀನಿವಾಸ ಎಂಬುವರಿಂದಲೂ ನಕಲಿ ಸ್ವಾಮೀಜಿಗಳು ಒಡವೆ ದೋಚಿದ್ದರು. ಇತ್ತೀಚೆಗೆ ವಿ.ವಿ.ಪುರ ಠಾಣೆ ವ್ಯಾಪ್ತಿಯ ಗಿರವಿ ಅಂಗಡಿ ಬಳಿ ಓಡಾಡುತ್ತಿದ್ದ ಚಂದ್ರಕಾಂತ್ ಹಾಗೂ ರಾಜೇಶ್ ಅವರನ್ನು ಇನ್‌ಸ್ಪೆಕ್ಟರ್ ಕೆ.ಶಿವಶಂಕರ್ ನೇತೃತ್ವದ ತಂಡ ಸಂಶಯದ ಮೇಲೆ ವಶಕ್ಕೆ ಪಡೆದಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ತಮ್ಮ ಕೃತ್ಯಗಳನ್ನು ಬಾಯ್ಬಿಟ್ಟಿದ್ದಾರೆ.

ಯಾರ‍್ಯಾರಿಗೆ ವಂಚಿಸಿದ್ದರು

ಫೆ.1: ಕತ್ರಿಗುಪ್ಪೆ 2ನೇ ಮುಖ್ಯರಸ್ತೆಯ ಮಂಜುಳಾ ಎಂಬುವರ ಮನೆಯಿಂದ ₹ 1.75 ಲಕ್ಷ ನಗದು ಹಾಗೂ 170 ಗ್ರಾಂ ಚಿನ್ನ ಕದ್ದೊಯ್ದಿದ್ದರು.

ಫೆ.2: ಗಿರಿನಗರ 2ನೇ ಹಂತದ ವ್ಯಾಪಾರಿಯೊಬ್ಬರಿಗೆ ಬೆದರಿಸಿ, ₹ 4.52 ಲಕ್ಷ ನಗದು ಹಾಗೂ 420 ಗ್ರಾಂ ಚಿನ್ನ ತೆಗೆದುಕೊಂಡು ಹೋಗಿದ್ದರು.

ಫೆ.15ರಂದು: ಬನಶಂಕರಿ 3ನೇ ಹಂತದ ರೆವಿನ್ಯೂ ಲೇಔಟ್‌ನಲ್ಲಿ ನೆಲೆಸಿರುವ ವಿಮಾನ ನಿಲ್ದಾಣದ ನೌಕರ ಎಂ.ಕಾರ್ತಿಕ್ ಎಂಬುವರ ಮನೆಯಿಂದ ₹ 50 ಸಾವಿರ ನಗದು 292 ಗ್ರಾಂ ಚಿನ್ನಾಭರಣ ದೋಚಿದ್ದರು.

ಫೆ.15: ತಮ್ಮ ಪಕ್ಕದ ಮನೆಯ ಕಾರ್ತಿಕ್ ಕುಟುಂಬ ಮಾಡಿಸಿದ ಪೂಜೆಯಿಂದ ಆಕರ್ಷಿತರಾಗಿ, ಖಾಸಗಿ ಕಂಪನಿ ವ್ಯವಸ್ಥಾಪಕ ಸೂರಜ್ ಸಹ ಅದೇ ‘ಸ್ವಾಮೀಜಿ’ಗಳನ್ನು ತಮ್ಮ ಮನೆಗೂ ಪೂಜೆಗೆ ಕರೆದಿದ್ದರು. ಆರೋಪಿಗಳು ಅಲ್ಲಿಂದಲೂ ₹ 18 ಸಾವಿರ ನಗದು ಹಾಗೂ 60 ಗ್ರಾಂ ಒಡವೆ ತೆಗೆದುಕೊಂಡು ಹೋಗಿದ್ದರು.

ಫೆ.28: ಉತ್ತರಹಳ್ಳಿಯ ಮುನಿವೆಂಕಟಪ್ಪ ಲೇಔಟ್‌ನಲ್ಲಿ ಕೆ.ಶ್ರೀನಿವಾಸ ಎಂಬುವರ ಕುಟುಂಬವನ್ನು ನಂಬಿಸಿ, ಐದು ಚಿನ್ನದ ಸರಗಳು, ನಾಲ್ಕು ಉಂಗುರಗಳು, ₹ 55 ಸಾವಿರ ನಗದು ದೋಚಿಕೊಂಡು ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT