ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲೂ ‘ಫೋನಿ’ ಅಬ್ಬರ; ಯುವಕ ಸಾವು

ಜಲಾವೃತವಾದ ರಸ್ತೆಗಳು * ಗೋಶಾಲೆ ಕಾಂಪೌಂಡ್ ಕುಸಿದು ದುರಂತ
Last Updated 30 ಏಪ್ರಿಲ್ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ‘ಫೋನಿ’ ಚಂಡಮಾರುತ ಹಾಗೂ ಸ್ಥಳೀಯ ಮಟ್ಟದ ಸುಳಿಗಾಳಿಯ ಪರಿಣಾಮದಿಂದ ನಗರದಲ್ಲೂ ಮಂಗಳವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಕೆಲವೆಡೆ ಮರಗಳು ಧರೆಗೆ ಉರುಳಿದರೆ, ಗರುಡಾಚಾರಪಾಳ್ಯದಲ್ಲಿ ಕಾಂಪೌಂಡ್ ಕುಸಿದು ಶಿವಕೈಲಾಶ್‌ ರೆಡ್ಡಿ (30) ಎಂಬುವರು ಮೃತಪಟ್ಟರು.

ಆಂಧ್ರಪ್ರದೇಶದ ರೆಡ್ಡಿ, ದೊಡ್ಡನೆಕ್ಕುಂದಿಯ ಖಾಸಗಿ ಕಂಪನಿ ಒಂದರಲ್ಲಿ ಉದ್ಯೋಗಿಯಾಗಿದ್ದರು. ಕೆಲಸ ಮುಗಿಸಿಕೊಂಡು ಸಂಜೆ 7.45ರ ಸುಮಾರಿಗೆ ಮನೆಗೆ ನಡೆದು ಹೋಗುತ್ತಿದ್ದಾಗ, ಗೋಶಾಲೆಗೆ ಸೇರಿದ ಕಾಂಪೌಂಡ್ ಕುಸಿದು ಅವರ ಮೇಲೆ ಬಿದ್ದಿತು. ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು ಎಂದು ‍ಪೊಲೀಸರು ಹೇಳಿದ್ದಾರೆ.

‘ಅದು ಎಂಟು ಅಡಿ ಎತ್ತರದ ಕಾಂಪೌಂಡ್. ಕೆಲ ದಿನಗಳ ಹಿಂದಷ್ಟೇ ಸಿಮೆಂಟ್ ಇಟ್ಟಿಗೆಗಳಿಂದ ನಿರ್ಮಿಸಲಾಗಿತ್ತು. ‌ಸಂಜೆ ಸುರಿದ ಮಳೆಗೆ ನೆನೆದಿದ್ದ ಗೋಡೆ, ಏಕಾಏಕಿ ಕುಸಿಯಿತು. ರೆಡ್ಡಿ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದ್ದೇವೆ’ ಎಂದು ಮಹದೇವಪುರ ಪೊಲೀಸರು ತಿಳಿಸಿದರು.

ಗುಡುಗು–ಸಿಡಿಲಿನ ಆರ್ಭಟ: ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ಮೋಡ ಮತ್ತಷ್ಟು ದಟ್ಟವಾಗಿ ಮಳೆ ಹನಿಯಿತು. ಗುಡುಗು ಸಿಡಿಲಿನ ಆರ್ಭಟ, ನಗರವಾಸಿಗಳ ಎದೆ ನಡುಗಿಸಿತು. ಕಚೇರಿಗಳು ಬಿಡುವ ಸಮಯಕ್ಕೇ ಸರಿಯಾಗಿ ಮಳೆ ಸುರಿದಿದ್ದರಿಂದ, ವಾಹನ ದಟ್ಟಣೆ ಉಂಟಾಗಿ ಸವಾರರು ಪಡಿಪಾಟಲು ಅನುಭವಿಸಿದರು. ಜನ ಮೊಣಕಾಲುದ್ದದ ನೀರಿನಲ್ಲಿಯೇ ವಾಹನ ಚಲಾಯಿಸಿಕೊಂಡು ಮನೆ ಕಡೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದಾಸನಪುರ, ಹೆಸರಘಟ್ಟ, ಉಸ್ಕೂರು, ಗೋಪಾಲಪುರ, ನಂದಿನಿ ಬಡಾವಣೆ, ನಾಗಸಂದ್ರ, ರಾಜಾಜಿ
ನಗರ, ಪುಲಕೇಶಿನಗರ, ಕೋಣನಕುಂಟೆ, ಪಟ್ಟಾಭಿರಾಮನಗರ, ಸಂಪಂಗಿರಾಮನಗರ, ಶಾಂತಿನಗರ, ವಿಲ್ಸನ್‌ ಗಾರ್ಡನ್‌, ಮೈಸೂರು ರಸ್ತೆ, ಹನುಮಂತನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ರಸ್ತೆ ಮೇಲೆ ಮಳೆ ನೀರಿನ ಜೊತೆ ಚರಂಡಿ ನೀರು ಸೇರಿ ಹೊಳೆಯಂತೆಹರಿಯಿತು.

ಮಳೆಯ ಹೊಡೆತಕ್ಕೆ ಬಾಣಸವಾಡಿಯ ಬಳಿ ಮರವೊಂದು ನೆಲಕ್ಕುರಿಳಿತು. ಜೆ.ಪಿ.ನಗರದಲ್ಲಿ
ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ವಾಹನ ದಟ್ಟಣೆ ಉಂಟಾಯಿತು. ಲಾಲ್‌ಬಾಗ್‌ ಸುತ್ತಮುತ್ತಲ ಪ್ರದೇಶಗಳ ಮನೆಗಳಿಗೆ ಚರಂಡಿ ನೀರು ನುಗ್ಗಿತು.

ಲಾಲ್‌ ಬಾಗ್‌ ಬಳಿಯ ನಿವಾಸಿ ದೀಪ್ತಿ ಶೇಖರ್, ‘ಮಳೆಯಾದ್ದರಿಂದ ಚರಂಡಿ ನೀರು ಮನೆಗೆ ನುಗ್ಗಿದೆ. ಜಲಮಂಡಳಿಯವರು ಹಾಗೂ ಬಿಬಿಎಂಪಿಯರು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಹೇಳಿದರು.

‘ಫೋನಿ ಚಂಡಮಾರುತವು ಬಂಗಾಳಕೊಲ್ಲಿಯಿಂದ ದಕ್ಷಿಣ ಭಾರತದತ್ತ ಬೀಸುತ್ತಿರುವುದರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ನೀರು ತೆರವಿಗೆ ಮೇಯರ್‌ ಸೂಚನೆ

ನಗರದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಸ್ವತಃ ಮೇಯರ್‌ ಎಲ್ಲಾ ವಿಭಾಗಿಯ ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡಿ ಎಲ್ಲೆಲ್ಲಿ ರಸ್ತೆಗಳಲ್ಲಿ ನೀರು ನಿಂತಿದೆ ಎನ್ನುವ ಮಾಹಿತಿ ಪಡೆದು ಅದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT