ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಗ ಒಡೆದಿದ್ದ ದೇವೇಗೌಡರೂ ಗೂಂಡಾನಾ: ರೈತ ನಾಯಕಿ ಜಯಶ್ರೀ ಪ್ರಶ್ನೆ

ಮುರಗುಂಡಿಯಲ್ಲಿ ಮುಂದುವರಿದ ಪ್ರತಿಭಟನೆ
Last Updated 20 ನವೆಂಬರ್ 2018, 20:36 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ‘ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಇದ್ದಾಗ ಎಚ್‌.ಡಿ. ದೇವೇಗೌಡರು ವಿಧಾನಸೌಧದ ಮುಂದೆ ಗಲಾಟೆ ಮಾಡಿದ್ದರು. ಆದರೆ, ನಾವು ಬೆಳಗಾವಿ ಸುವರ್ಣ ವಿಧಾನಸೌಧದ ಗೇಟ್ ಮುರಿದದ್ದು ತಪ್ಪಂತೆ. ರೈತರು ಗೂಂಡಾಗಳು ಎನ್ನುವುದಾದರೆ ದೇವೇಗೌಡರು ಏನು’ ಎಂದು ರೈತ ನಾಯಕಿ ಜಯಶ್ರೀ ಗುರಣ್ಣವರ ಪ್ರಶ್ನಿಸಿದರು.

ತಾಲ್ಲೂಕಿನ ಮುರಗುಂಡಿ ಗ್ರಾಮದ ಬಳಿ ಸಂಕೇಶ್ವರ–ಜೇವರ್ಗಿ ರಸ್ತೆಯಲ್ಲಿ 5 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಆ ಸ್ಥಳದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬೆಳಗಾವಿಗೆ ಬಂದು ರೈತರ ಕಬ್ಬಿನ ಬಿಲ್‌ ಬಾಕಿ ಕುರಿತು ಚರ್ಚಿಸಿದ್ದರೆ, ಸಮಸ್ಯೆಯನ್ನು ಪರಿಹರಿಸಿದ್ದರೆ ರೈತರು ಬೀದಿಗಿಳಿದು ಹೋರಾಡುವ ಸ್ಥಿತಿ ಬರುತ್ತಿರಲಿಲ್ಲ’ ಎಂದರು.

ಸಕ್ಕರೆ ಅಭಿವೃದ್ಧಿ ಆಯುಕ್ತರ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದೂ ಆಗ್ರಹಿಸಿದರು.

ರೈತ ಸಂಘದ ಅಥಣಿ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ, ‘ಹೋರಾಟಕ್ಕೆ ಸಂಘ– ಸಂಸ್ಥೆಗಳು, ವಕೀಲರ ಸಂಘದವರು ಬೆಂಬಲ ನೀಡಿದ್ದಾರೆ. ಆದರೆ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ’ ಎಂದು ದೂರಿದರು.

ಹೋರಾಟಕ್ಕೆ ಬೆಂಬಲ ಸೂಚಿಸಿದ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ರೈತರಿಗೆ ಪ್ರಸಾದ ವ್ಯವಸ್ಥೆ ಮಾಡಿಸಿದ್ದರು. ಅಥಣಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎ. ವನಜೋಳಿ, ರೈತರಿಗೆ ಉಚಿತವಾಗಿ ಕಾನೂನು ನೆರವು ಒದಗಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT