ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರತ್ತು ಉಲ್ಲಂಘಿಸಿ ಚಿತ್ರೀಕರಣ

ಪರವಾನಗಿ ನೀಡಿದ್ದ ಸಹಾಯಕ ಚುನಾವಣಾಧಿಕಾರಿ
Last Updated 30 ಮಾರ್ಚ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ತಾಯಿ– ಮಗಳ ದುರ್ಮರಣಕ್ಕೆ ಕಾರಣವಾದ ‘ರಣಂ’ ಕನ್ನಡ ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣಕ್ಕೆ ಬ್ಯಾಟರಾಯನಪುರದ ಸಹಾಯಕ ಚುನಾವಣಾಧಿಕಾರಿಯಿಂದ ಪರವಾನಗಿ ಪಡೆಯಲಾಗಿತ್ತು.

ಪರವಾನಗಿಗೆ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ಕಾರು ಸ್ಫೋಟಿಸಲು ಮುಂದಾಗಿದ್ದೇ ದುರಂತಕ್ಕೆ ಕಾರಣವಾಯಿತು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಬಾಗಲೂರು ಬಳಿಯ ಮಹದೇವಕೊಡಿಗೇಹಳ್ಳಿ ಸಮೀಪದ ಕೆಐಎಡಿಬಿಯ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸಿಲಿಂಡರ್‌ ಸ್ಫೋಟಗೊಂಡು ಸುಮೇರಾ ಬಾನು (28) ಹಾಗೂ ಅವರ ಮಗಳು ಆಯೇರಾ ಬಾನು (5) ಮೃತಪಟ್ಟ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

‘ಲೋಕಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಸಿನಿಮಾ ಚಿತ್ರೀಕರಣಕ್ಕೆ ಪರವಾನಗಿ ನೀಡುವ ಅಧಿಕಾರ ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಇರುತ್ತದೆ. ನಟ ಚೇತನ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಸಿನಿಮಾ ಚಿತ್ರೀಕರಣಕ್ಕೆ ಪರವಾನಗಿ ನೀಡುವಂತೆ ಕೋರಿ ಬ್ಯಾಟರಾಯನಪುರದ ಸಹಾಯಕ ಚುನಾವಣಾಧಿಕಾರಿ ಚಂದ್ರಕಾಂತ್‌ ಅವರಿಗೆ ಚಿತ್ರತಂಡ ಅರ್ಜಿ ಸಲ್ಲಿಸಿತ್ತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೈಗಾರಿಕಾ ಪ್ರದೇಶದ ಮುಖ್ಯರಸ್ತೆಯಲ್ಲಿ ಸಾಮಾನ್ಯವಾದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತೇವೆ’ ಎಂದು ಚಿತ್ರತಂಡ ಹೇಳಿತ್ತು. ಅದಕ್ಕೆ ಒಪ್ಪಿದ್ದಸಹಾಯಕ ಚುನಾವಣಾಧಿಕಾರಿ, ‘ಮನುಷ್ಯರ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಿತ್ರೀಕರಣ ಮಾಡಬಾರದು’ ಎಂಬ ಷರತ್ತು ವಿಧಿಸಿಪರವಾನಗಿ ಮಂಜೂರು ಮಾಡಿದ್ದರು’ ಎಂದರು.

‘ನೆಪಕ್ಕಷ್ಟೇ ಪರವಾನಗಿ ಪಡೆದಿದ್ದ ಚಿತ್ರತಂಡ, ಅದರಲ್ಲಿದ್ದ ನಿಯಮಗಳನ್ನು ಉಲ್ಲಂಘಿಸಿ ಕಾರು ಸ್ಫೋಟಿಸುವ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿತ್ತು. ಅದೇ ವೇಳೆ ಅವಘಡ ಸಂಭವಿಸಿದೆ. ಚುನಾವಣಾಧಿಕಾರಿಯಿಂದ ಪರವಾನಗಿ ಪತ್ರವನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಪೊಲೀಸ್‌ ಅನುಮತಿ ಪಡೆಯದ ಚಿತ್ರತಂಡ: ‘ಕೆಐಎಡಿಬಿಯ ಕೈಗಾರಿಕಾ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಅದು ಅತೀ ಸೂಕ್ಷ್ಮ ಪ್ರದೇಶ. ಈ ಸ್ಥಳದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಬಾಗಲೂರು ಪೊಲೀಸ್ ಠಾಣಾಧಿಕಾರಿ ಅವರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ’ ಎಂದು ಅಧಿಕಾರಿ ತಿಳಿಸಿದರು.

’ಸಹಾಯಕ ಚುನಾವಣಾಧಿಕಾರಿ ನೀಡಿದ್ದ ಪರವಾನಗಿ ಪತ್ರದೊಂದಿಗೆ ಚಿತ್ರೀಕರಣದ ವಿವರಗಳ ಸಮೇತ ಠಾಣಾಧಿಕಾರಿಗೆ ಮನವಿ ಸಲ್ಲಿಸಬೇಕಿತ್ತು. ಚಿತ್ರೀಕರಣಕ್ಕೆ ಪೊಲೀಸರಿಂದ ಎನ್‌ಒಸಿ (ನಿರಾಕ್ಷೇಪಣಾ) ಪಡೆಯಬೇಕಿತ್ತು. ಅಂಥ ಯಾವುದೇ ಪ್ರಕ್ರಿಯೆಯನ್ನು ಚಿತ್ರತಂಡ ಪಾಲಿಸಿಲ್ಲ’ ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.

‘ಸ್ಫೋಟಕ ಹಾಗೂ ಗುಂಡುಗಳನ್ನು ಬಳಸಿಕೊಂಡು ಚಿತ್ರೀಕರಣ ಮಾಡಲು ಅನುಮತಿ ಇಲ್ಲ. ‘ರಣಂ’ ಚಿತ್ರತಂಡವು ಚಿತ್ರೀಕರಿಸುತ್ತಿದ್ದ ದೃಶ್ಯಗಳು ಸಹ ನಿಯಮಬಾಹಿರ. ಆ ಸಂಬಂಧ ಪ್ರತ್ಯೇಕ ಪ್ರಕರಣಗಳನ್ನು ಚಿತ್ರತಂಡದ ವಿರುದ್ಧ ದಾಖಲಿಸುವ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದೇವೆ’ ಎಂದರು.

ನಿರ್ಮಾಪಕ, ನಿರ್ದೇಶಕ ನಾಪತ್ತೆ

ತಾಯಿ–ಮಗಳ ಸಾವಿಗೆ ಕಾರಣವಾದ ಆರೋಪದಡಿ ‘ರಣಂ’ ಸಿನಿಮಾದ ನಿರ್ಮಾಪಕ ಆರ್‌. ಶ್ರೀನಿವಾಸ್, ನಿರ್ದೇಶಕ ವಿ. ಸಮುದ್ರಂ, ವ್ಯವಸ್ಥಾಪಕ ಕಿರಣ್, ಸಾಹಸ ನಿರ್ದೇಶಕ ವಿಜಯನ್ ಹಾಗೂ ತಂತ್ರಜ್ಞರ ವಿರುದ್ಧ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ (ಐಪಿಸಿ 304), ನಿರ್ಲಕ್ಷ್ಯ (ಐಪಿಸಿ 338) ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ 1908 ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಳೆಲ್ಲರೂ ಸದ್ಯ ತಲೆಮರೆಸಿಕೊಂಡಿದ್ದಾರೆ. ‘ಚಿತ್ರೀಕರಣ ಸಂಬಂಧ ನಟ ಚೇತನ್ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿದೆ. ಆರೋಪಿಗಳ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT