ಬಿಬಿಎಂಪಿಯಿಂದ ಗಸ್ತು: ರಸ್ತೆಗೆ ಕಸ ಎಸೆದ ವೈದ್ಯ, ವಕೀಲೆಗೆ ದಂಡ

7
ವಾರದಲ್ಲಿಯೇ ₹ 4 ಲಕ್ಷ ವಸೂಲಿ

ಬಿಬಿಎಂಪಿಯಿಂದ ಗಸ್ತು: ರಸ್ತೆಗೆ ಕಸ ಎಸೆದ ವೈದ್ಯ, ವಕೀಲೆಗೆ ದಂಡ

Published:
Updated:
Deccan Herald

ಬೆಂಗಳೂರು: ನಡುರಾತ್ರಿ ರಸ್ತೆಗೆ ಕಸ ಎಸೆದ ‘ಮಹನೀಯರನ್ನು’ ಪತ್ತೆ ಹಚ್ಚಿದ ಬಿಬಿಎಂಪಿ ಅಧಿಕಾರಿಗಳು ಅವರಿಂದ ₹ 8,380 ದಂಡ ವಸೂಲು ಮಾಡಿದ್ದಾರೆ.

ಹೀಗೆ ಕಸ ಎಸೆಯುತ್ತಿದ್ದವರಲ್ಲಿ ಪ್ರತಿಷ್ಠಿತ ಆಸ್ಪತ್ರೆಯೊಂದರ ಶಸ್ತ್ರಚಿಕಿತ್ಸಾ ತಜ್ಞ, ವಕೀಲೆ, ಐ.ಟಿ ಉದ್ಯೋಗಿ, ಇಬ್ಬರು ಹೋಟೆಲ್‌ ಹುಡುಗರು ಸೇರಿದ್ದಾರೆ. ಇಂಥವರನ್ನು ಪತ್ತೆ ಹಚ್ಚಲೆಂದೇ ಗಸ್ತು ತಿರುಗುತ್ತಿದ್ದ ಬಿಬಿಎಂಪಿ ಆರೋಗ್ಯ ನಿರೀಕ್ಷಕ ಮಹೇಶ್‌ ಅವರ ತಂಡಕ್ಕೆ ಮಂಗಳವಾರ ರಾತ್ರಿ ಇವರು ಸಿಕ್ಕಿಬಿದ್ದರು. ಸಾರಕ್ಕಿ ಕೆರೆ ಬಳಿ ಈ ಕಾರ್ಯಾಚರಣೆ ನಡೆದಿದೆ. 

ಜೆ.ಪಿ ನಗರದ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಿಗೆ ₹ 2 ಸಾವಿರ ದಂಡ ವಿಧಿಸಲಾಯಿತು. ವಕೀಲೆಗೆ ದಂಡ ವಿಧಿಸಲು ಮುಂದಾದಾಗ ಆರೋಗ್ಯ ನಿರೀಕ್ಷಕರಿಗೇ ಬೆದರಿಕೆಯೊಡ್ಡಿದ ಪ್ರಸಂಗ ನಡೆಯಿತು. ಅವರನ್ನೇ ಜೈಲಿಗೆ ಕಳುಹಿಸುವುದಾಗಿ ವಕೀಲೆ ಬೆದರಿಕೆಯೊಡ್ಡಿದರು. ಆದರೂ ದಂಡದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. 

ಕಸ ಹಾಕಲು ಮುಂದಾದ ಕೆಲವರು ಬಿಬಿಎಂಪಿ ಕಾರ್ಯಾಚರಣೆ ನೋಡಿ ಅದನ್ನು ವಾಪಸ್‌ ಒಯ್ದರು. ಒಂದು ವಾರದಿಂದ ಕಾರ್ಯಾಚರಣೆ ನಡೆದಿದೆ. ರಸ್ತೆಗೆ ಕಸ ಎಸೆಯುವ 2,900 ಮಂದಿ ಸಿಕ್ಕಿಬಿದ್ದಿದ್ದಾರೆ. ಒಟ್ಟು ₹ 4 ಲಕ್ಷ ದಂಡ ವಸೂಲು ಮಾಡಲಾಗಿದೆ. ಮಾತ್ರವಲ್ಲ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪಾಲಿಕೆಯ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಹೇಳಿದರು.

‘ಇಂಥವರಿಗೆ ಕೇವಲ ₹ 200ರಿಂದ 300 ದಂಡ ವಿಧಿಸಿ ಬಿಟ್ಟರೆ ಸಾಲದು. ಮತ್ತೆ ಅದೇ ತಪ್ಪು ಮರುಕಳಿಸುವ ಪ್ರವೃತ್ತಿಯೂ ಇದೆ. ಹೀಗಾಗಿ ಇಂಥವರ ಮೇಲೆ ನಿಗಾ ವಹಿಸಲು ಪ್ರತಿ ವಾರ್ಡ್‌ಗೆ ಮಾರ್ಷಲ್‌ಗಳನ್ನು ನೇಮಿಸಲಾಗುವುದು. ಪ್ರಹರಿ ವಾಹನಗಳನ್ನು ಹೆಚ್ಚಿಸಬೇಕಿದೆ. ಅದಕ್ಕಾಗಿ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಕಾಯುತ್ತಿದ್ದೇವೆ’ ಎಂದು ಖಾನ್‌ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 36

  Happy
 • 1

  Amused
 • 1

  Sad
 • 3

  Frustrated
 • 0

  Angry

Comments:

0 comments

Write the first review for this !