ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಚೌಕಿ ಕೆಡವಿದ ಆರೋಪ: ಕಾರ್ಪೊರೇಟರ್ ವಿರುದ್ಧ ಎಫ್ಐಆರ್

Last Updated 16 ಜನವರಿ 2019, 19:20 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಲಾಂಪುರ ವೃತ್ತದಲ್ಲಿದ್ದ ಪೊಲೀಸ್ ಚೌಕಿಯನ್ನು ಕೆಡವಿದ ಆರೋಪದಡಿ ಎಚ್‌ಎಎಲ್ ವಿಮಾನ ನಿಲ್ದಾಣ ವಾರ್ಡ್‌ನ ಕಾಂಗ್ರೆಸ್ ಕಾರ್ಪೊರೇಟರ್ ಮಂಜುನಾಥ್ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಎಚ್‌ಎಎಲ್ ಪೊಲೀಸರು ಇಸ್ಲಾಂಪುರಕ್ಕೆ ಗಸ್ತು ಹೋಗಿದ್ದರು. ಆಗ ಚೌಕಿ ಧ್ವಂಸವಾಗಿರುವುದು ಅವರ ಕಣ್ಣಿಗೆ ಬಿದ್ದಿದೆ. ಈ ಸಂಬಂಧ ಸ್ಥಳೀಯರನ್ನು ವಿಚಾರಿಸಿದಾಗ, ‘ಕಾರ್ಪೊರೇಟರ್ ಮಂಜುನಾಥ್, ಬಿಬಿಎಂಪಿ ಎಂಜಿನಿಯರ್ ಹಾಗೂ ಇಕ್ತಿಯಾರ್ ಎಂಬುವರು ಚೌಕಿ ಕೆಡವಿದರು’ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮೂವರಿಗೂ ನೋಟಿಸ್ ಕೊಟ್ಟಿದ್ದಾರೆ.

ನಾನು ಕೆಡವಿಲ್ಲ: ‘ಪೊಲೀಸರು ಹಲವು ವರ್ಷಗಳಿಂದ ಆ ಚೌಕಿಯನ್ನು ಬಳಸುತ್ತಿರಲಿಲ್ಲ. ಅಲ್ಲಿ ಸ್ಥಳೀಯರು ಕುಳಿತು ಹರಟೆ ಹೊಡೆಯುತ್ತಿದ್ದರು. ಸಣ್ಣ–ಪುಟ್ಟ ಜಗಳಗಳೂ ಸಾಮಾನ್ಯವಾಗಿದ್ದವು. ಹೀಗಾಗಿ, ಸ್ಥಳೀಯರೇ ಅದನ್ನು ಕೆಡವಿದ್ದರು. ಈ ಬಗ್ಗೆ ಅವರನ್ನು ವಿಚಾರಿಸಿದಾಗ, ಚೌಕಿ ಕಟ್ಟಿಸಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ಈಗ ನನ್ನ ಮೇಲೆಯೇ ಆರೋಪ ಹೊರಿಸಿದ್ದಾರೆ’ ಎಂದು ಕಾರ್ಪೊರೇಟರ್ ಪ್ರತಿಕ್ರಿಯಿಸಿದರು.

‘ಇಸ್ಲಾಂಪುರದಲ್ಲಿ ಹಿಂದೆ ಕೋಮು ಗಲಭೆಗಳು ನಡೆದಿದ್ದವು. ಹೀಗಾಗಿ, ಇದನ್ನು ಸೂಕ್ಷ್ಮಪ್ರದೇಶವೆಂದು ಪರಿಗಣಿಸಿ 2013ರಲ್ಲಿ ಚೌಕಿ ಸ್ಥಾಪಿಸಲಾಗಿತ್ತು. ವಿದ್ಯುತ್ ಸೌಲಭ್ಯ ಒದಗಿಸದ ಕಾರಣ ಅದನ್ನು ಬಳಕೆ ಮಾಡಿರಲಿಲ್ಲ. ಈಗ ಸರಗಳವು ಹಾಗೂ ದರೋಡೆ ಪ್ರಕರಣ
ಗಳು ಹೆಚ್ಚಾಗಿರುವುದರಿಂದ ಚೌಕಿ ಬಳಸಲು ನಿರ್ಧರಿಸಿದ್ದೇವೆ. ಇದರ ಜತೆಗೆ ಇನ್ನೂ ಎರಡು ಚೌಕಿ ನಿರ್ಮಾಣಕ್ಕೂ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ’ ಎಂದು ಎಚ್‌ಎಎಲ್ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT