ವಿಜಯ್ ತಾತಾ ವಿರುದ್ಧದ ಎಫ್ಐಆರ್ ರದ್ದು

7

ವಿಜಯ್ ತಾತಾ ವಿರುದ್ಧದ ಎಫ್ಐಆರ್ ರದ್ದು

Published:
Updated:

ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ತಾತಾ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಇದರಿಂದಾಗಿ ಮಾಧ್ಯಮಗೋಷ್ಠಿ ನಡೆಸಿದ ಹಾಗೂ ಪತ್ರಿಕಾ ಪ್ರಕಟಣೆ ಬರೆದುಕೊಟ್ಟ ಆರೋಪ ಹೊತ್ತಿದ್ದ ಪತ್ರಕರ್ತ ಅಶೋಕ ಸೇರಿದಂತೆ ಎಲ್ಲರ ವಿರುದ್ಧದ ಎಫ್‌ಐಆರ್‌ ರದ್ದುಗೊಂಡಂತಾಗಿದೆ. ಈ ಕುರಿತಂತೆ ವಿಜಯ್ ತಾತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಕರ್ತವ್ಯನಿರತ ಸರ್ಕಾರಿ ನೌಕರರ ವಿರುದ್ಧ ದೈಹಿಕವಾಗಿ ಹಲ್ಲೆ ಅಥವಾ ಬಲವಂತ ಮಾಡಿದ್ದರೆ ಮಾತ್ರ ಈ ಕಲಂ ಅನ್ವಯ ಆಗುತ್ತದೆ’ ಎಂದರು.

’ಅರ್ಜಿದಾರರು ಪತ್ರಿಕಾ ಗೋಷ್ಠಿ ನಡೆಸಿದ್ದಾರೆಯೇ ಹೊರತು ಪೊಲೀಸರ ಮೇಲೆ ಯಾವುದೇ ರೀತಿ ಹಲ್ಲೆ ನಡೆಸಿಲ್ಲ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ. ದುರುದ್ದೇಶದಿಂದ ಈ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ರದ್ದುಗೊಳಿಸಬೇಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಆರೋಪಿ ವಿರುದ್ಧ ಪೊಲೀಸರು ದಾಖಲಿಸಿರುವ ಕಲಂಗಳು ಸಮರ್ಪಕವಾಗಿಲ್ಲ ಮತ್ತು ಇಂತಹ ಪ್ರಕರಣ ದಾಖಲಿಸಿರುವುದು ದುರದೃಷ್ಟಕರ’ ಎಂಬ ಅಭಿಪ್ರಾಯದೊಂದಿಗೆ ಎಫ್ಐಆರ್ ರದ್ದುಪಡಿಸಿದೆ.

‘ಆರೋಪಿಗಳಿಂದ ವಶಪಡಿಸಿಕೊಂಡಿರುವ ಲ್ಯಾಪ್‌ಟಾಪ್‌, ಕಂಪ್ಯೂಟರ್, ಪುಸ್ತಕಗಳು ಹಾಗೂ ಇತರೆ ವಸ್ತುಗಳನ್ನು ಕೂಡಲೇ ಹಿಂದಿರುಗಿಸಬೇಕು’ ಎಂದೂ ಆದೇಶಿಸಲಾಗಿದೆ.

ಪ್ರಕರಣವೇನು?: ‘ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ) ಅಲೋಕ್‌ ಕುಮಾರ್, ಆ್ಯಂಬಿಡೆಂಟ್ ಕಂಪನಿಯ ಫರೀದ್‌ ರಕ್ಷಣೆಗೆ ನಿಂತಿದ್ದಾರೆ’ ಎಂದು 2018ರ ಡಿಸೆಂಬರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಲಾಗಿತ್ತು.

‘ಇದು ಸರ್ಕಾರಿ ನೌಕರರ (ಪೊಲೀಸರ) ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣವಾಗಿದೆ‘ ಎಂಬ ಫಿರ್ಯಾದಿನ ಅಡಿಯಲ್ಲಿ ವಿಜಯ್ ತಾತಾ, ಜಯೀದ್‌ ಖಾನ್‌ ಹಾಗೂ ಸಿರಾಜುದ್ದೀನ್‌ ವಿರುದ್ಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ನಂತರ ಇದನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !