ಅಗ್ನಿಶಾಮಕ ತಂಡಕ್ಕೆ ಸ್ತ್ರೀ ಶಕ್ತಿ

ಸೋಮವಾರ, ಮಾರ್ಚ್ 25, 2019
28 °C
ಫೈರ್‌ ಪೈಟಿಂಗ್‌ಗಾಗಿ ಸ್ತ್ರೀಶಕ್ತಿ ಹೊಂದಿದ ಏಷ್ಯಾದ ಮೊದಲ ವಿಮಾನ ನಿಲ್ದಾಣ ಕೆಐಎ

ಅಗ್ನಿಶಾಮಕ ತಂಡಕ್ಕೆ ಸ್ತ್ರೀ ಶಕ್ತಿ

Published:
Updated:
Prajavani

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಏರ್‌ಕ್ರಾಫ್ಟ್‌ ಆ್ಯಂಡ್ ಫೈರ್‌ ಫೈಟಿಂಗ್ (ಎಆರ್‌ಎಫ್‌ಎಫ್‌) ಅಗ್ನಿಶಾಮಕ ತಂಡಕ್ಕೆ 14 ಮಹಿಳೆಯರು ಸೇರ್ಪಡೆಗೊಂಡಿದ್ದು, ಆ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಹೊಸ ಮೈಲುಗಲ್ಲು ಸಾಧಿಸಿದ್ದಾರೆ.

 ನಿಲ್ದಾಣ ಹಾಗೂ ವಿಮಾನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದ ವೇಳೆ ಕಾರ್ಯಾಚರಣೆ ನಡೆಸುವುದಕ್ಕಾಗಿ ಎಆರ್‌ಎಫ್‌ಎಫ್‌ ತಂಡವನ್ನು ರಚಿಸಲಾಗಿದೆ. ಏಷ್ಯಾದ ಬಹುತೇಕ ನಿಲ್ದಾಣಗಳಲ್ಲಿ ಎಆರ್‌ಎಫ್‌ಎಫ್‌ ತಂಡಗಳಿದ್ದು, ಅಲ್ಲೆಲ್ಲ ಪುರುಷ ಸಿಬ್ಬಂದಿಯಷ್ಟೇ ಇದ್ದಾರೆ. ಎಲ್ಲಿಯೂ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ.

ಇದೀಗ ಕೆಐಎ, ತನ್ನ ಎಆರ್‌ಎಫ್‌ಎಫ್‌ ತಂಡದಲ್ಲಿ ಮಹಿಳೆಯರನ್ನು ಸೇರಿಸಿಕೊಂಡಿದೆ. ಈ ಸಾಧನೆ ಮಾಡಿದ ಏಷ್ಯಾದ ಮೊದಲ
ನಿಲ್ದಾಣವೆಂಬ ಹಿರಿಮೆಗೆ ಕೆಐಎ ಪಾತ್ರವಾಗಿದೆ.

‘ವಿಮಾನ ನಿಲ್ದಾಣದಲ್ಲಿ ಈಗಾಗಲೇ ಎಆರ್‌ಎಫ್‌ಎಫ್‌ ತಂಡ ಕೆಲಸ ಮಾಡುತ್ತಿದೆ. ಫೆ. 19ರಂದು ರಾಜ್ಯದ ವಿವಿಧೆಡೆಯಿಂದ 14 ಮಹಿಳೆಯರನ್ನು ತಂಡಕ್ಕೆ ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ನಿಲ್ದಾಣದಲ್ಲಿ ಪ್ರಾಥಮಿಕ ತರಬೇತಿ ನೀಡಲಾಗುತ್ತಿದೆ’ ಎಂದು ಕೆಐಎಪ್ರತಿನಿಧಿಯೊಬ್ಬರು ತಿಳಿಸಿದರು.

‘ಕೋಲ್ಕತ್ತದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಗ್ನಿಶಾಮಕ ಸೇವಾ ತರಬೇತಿ ಕೇಂದ್ರವಿದ್ದು, ಅಲ್ಲಿಯೇ ಮಾರ್ಚ್ 11ರಿಂದ ನಾಲ್ಕು ತಿಂಗಳವರೆಗೆ ಮಹಿಳೆಯರಿಗೆ ತರಬೇತಿ ಕೊಡಿಸಲಾಗುವುದು. ನಂತರ, ಅವರು ನಿಲ್ದಾಣಕ್ಕೆ ಬಂದು ಸೇವೆ
ಮುಂದುವರಿಸಲಿದ್ದಾರೆ’ ಎಂದು ತಿಳಿಸಿದರು.

‘ಪುರುಷರಿಗಷ್ಟೇ ಸೀಮಿತವಾಗಿದ್ದ ಅಗ್ನಿಶಾಮಕ ದಳಕ್ಕೆ ಮಹಿಳೆಯರು ಸೇರ್ಪಡೆಗೊಂಡಿರುವುದು ದೊಡ್ಡ ಮೈಲುಗಲ್ಲಾಗಿದೆ’ ಎಂದು ಅವರು ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !