‘ನೀರು ಕೊಡಿ, ನಂತರ ಮತ ಕೇಳಿ’

ಸೋಮವಾರ, ಏಪ್ರಿಲ್ 22, 2019
31 °C
ಅಥಣಿಯಲ್ಲಿ ಸ್ಥಳೀಯರಿಂದ ಪ್ರತಿಭಟನೆ

‘ನೀರು ಕೊಡಿ, ನಂತರ ಮತ ಕೇಳಿ’

Published:
Updated:
Prajavani

ಅಥಣಿ: ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಸ್ಥಳೀಯರು ಇಲ್ಲಿನ ತಹಶೀಲ್ದಾರ್‌ ಕಚೇರಿ ಎದುರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

‘ಭೀಕರ ಬರಗಾಲದಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಇಲ್ಲಿನ ಜನರಿಗೆ ಮೊದಲು ಕುಡಿಯಲು ನೀರು ಕೋಡಿ. ಬಳಿಕ ಮತ ಕೇಳಿ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ಆಗ್ರಹಿಸಿದರು.

‘ತಾಲ್ಲೂಕಿನಲ್ಲಿ 80 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಜಾನುವಾರುಗಳಿಗೂ ಕುಡಿಯುವ ನೀರು ಸರಿಯಾಗಿ ದೊರೆಯುತ್ತಿಲ್ಲ. ಕೆಲವು ಹಳ್ಳಿಗಳಿಗೆ ತಾಲ್ಲೂಕು ಆಡಳಿತದಿಂದ ಪೂರೈಸುವ ನೀರು ಯಾವುದಕ್ಕೂ ಸಾಲುತ್ತಿಲ್ಲ. ಮುಂದಿನ ದಿನಗಳಲ್ಲಿ ಎದುರಾಗುವ ನೀರಿನ ಅಭಾವಕ್ಕೆ ಜಿಲ್ಲಾಡಳಿತ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದಿಂದ ಕನಿಷ್ಠ 2 ಟಿಎಂಸಿ ನೀರು ಬಿಡಿಸುವ ವ್ಯವಸ್ಥೆ ಮಾಡಬೇಕು. ಬರಗಾಲದ ಸಂದರ್ಭದಲ್ಲಿ ರಾಜಕೀಯ ಮಾಡದೇ ರಾಜ್ಯ ಸರ್ಕಾರ ಕೂಡ ಜನರಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನಲ್ಲಿ 5 ಸಕ್ಕರೆ ಕಾರ್ಕಾನೆಗಳಿವೆ. 5 ತಿಂಗಳಿಂದ ಕಬ್ಬಿನ ಬಿಲ್‌ ಅನ್ನು ರೈತರ ಖಾತೆಗೆ ನೀಡಿಲ್ಲ. ಸರ್ಕಾರದ ನಿಯಮದಂತೆ 15 ದಿನಗಳಲ್ಲಿ ನೀಡಬೇಕು. ಆದರೆ, ಇದನ್ನು ಪಾಲಿಸುತ್ತಿಲ್ಲ’ ಎಂದು ದೂರಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ, ‘ಪ್ರತಿ ವರ್ಷ ಬೇಸಿಗೆಯಲ್ಲಿ ಈ ಪರಿಸ್ಥಿತಿ ಉಂಟಾಗುತ್ತಿದೆ. ಆದರೆ, ತಾಲ್ಲೂಕು ಆಡಳಿತ ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರ ರೂಪಿಸುತ್ತಿಲ್ಲ. ತಾಲ್ಲೂಕಿನ ಪೂರ್ವ ಮತ್ತು ಉತ್ತರ ಭಾಗದ 70ಕ್ಕೂ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ಅಧಿಕಾರಿಗಳು ಚುನಾವಣೆ ಪದಲ್ಲಿ ಬರಗಾಲವನ್ನು ನಿರ್ಲಕ್ಷಿಸುವುದು ಸರಿಯಲ್ಲ’ ಎಂದರು.

‘ಜನರು ರೊಚ್ಚಗೆದ್ದು ಪ್ರತಿಭಟನೆ ನಡೆಸುವ ಮೊದಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಟ್ಯಾಂಕರ್‌ಗಳಲ್ಲಾದರೂ ನೀರು ಪೂರೈಸಲು ಕ್ರಮ ವಹಿಸಬೇಕು’ ಎಂದು ಕೋರಿದರು.

ಮುಖಂಡರಾದ ಮೋದಿನ ಮೋಳೆ, ಜಗನ್ನಾಥ ಬಾಮನೆ, ಸಿದ್ದು ಹಂಡಗಿ, ಶಿವಲಿಂಗಯ್ಯ ಹಿರೇಮಠ, ಚನ್ನಗೌಡ ಇಮಗೌಡರ, ಅಡಿವೆಪ್ಪ ಅಜೂರ, ಬಸು ತಳವಾರ, ರಮೇಶ ಮಡಿವಾಳ, ಪಾರೀಶ ಯಳಗೂಡ, ಕುಮಾರ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !