ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಮಹಿಳೆಗೆ ನಿಂದಿಸಿದ್ದಕ್ಕೆ ಕುಟುಂಬದ ಸದಸ್ಯರಿಂದ ಕೃತ್ಯ

ಮೀನು ವ್ಯಾಪಾರಿಯ ಹತ್ಯೆ

Published:
Updated:
Prajavani

ಬೆಂಗಳೂರು: ತಮ್ಮ ಮನೆಯ ಮಹಿಳೆ ಯೊಂದಿಗೆ ಅನುಚಿತವಾಗಿ ವರ್ತಿಸಿದ ಎಂಬ ಕಾರಣಕ್ಕೆ ನೆರೆಮನೆಯ ಮೀನು ವ್ಯಾಪಾರಿ ಜರಾರ್ (38) ಎಂಬುವರನ್ನು ಸಂತ್ರಸ್ತೆಯ ಕುಟುಂಬ ಸದಸ್ಯರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ದೇವರಜೀವನಹಳ್ಳಿ ಸಮೀಪದ ರೋಷನ್‌ ನಗರದಲ್ಲಿ ಬುಧವಾರ ನಸುಕಿನ ವೇಳೆ (4.30ರ ಸುಮಾರಿಗೆ) ಈ ಘಟನೆ ನಡೆದಿದೆ. ಸಂತ್ರಸ್ತೆಯ ಸೋದರರಾದ ಮಹಮದ್ ಐಸಾಕ್, ಮಹಮದ್ ಘೋಷ್, ಸಾದಿಕ್, ಅವರ ಪತಿ ರಿಜ್ವಾನ್, ಸಂಬಂಧಿಕರಾದ ಸೈಯದ್ ಅಹಮದ್ ಹಾಗೂ ಸಲ್ಮಾನ್ ಅಲಿಯಾಸ್ ಗುಂಡ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಹಮದ್ ಐಸಾಕ್ ಸೋದರಿ ಹಾಗೂ ಜರಾರ್ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜರಾರ್ ಪ್ರತಿದಿನ ಪಾನಮತ್ತನಾಗಿ ಮನೆ ಬಳಿ ಬಂದು ಕೂಗಾಡುತ್ತಿದ್ದರು. ಮಂಗಳವಾರ ರಾತ್ರಿ ಕೂಡ ಮನೆಯಲ್ಲಿ ಒಬ್ಬರೇ ಇದ್ದ ಸಂತ್ರಸ್ತೆಯನ್ನು ನಿಂದಿಸಿದ್ದರು ಎನ್ನಲಾಗಿದೆ.

ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಕುಟುಂಬ ಸದಸ್ಯರು, ನಸುಕಿನ ವೇಳೆ ಮನೆಗೆ ಮರಳಿದ್ದರು. ಜರಾರ್‌ ದುರ್ವರ್ತನೆ ತೋರಿದ ವಿಚಾರ ತಿಳಿದು ಕೆರಳಿದ ಅವರು, ಆ ಕೂಡಲೇ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿ ಕೊಂದು ಹಾಕಿದ್ದರು. ರಾತ್ರಿಯೇ ಎಲ್ಲರನ್ನೂ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ದ್ವೇಷಕ್ಕೆ ತಿರುಗಿದ ಆತ್ಮೀಯತೆ: ಪಕ್ಕದ ಮನೆಯಲ್ಲೇ ಇದ್ದುದರಿಂದ ಜರಾರ್‌ಗೆ ಐಸಾಕ್ ಕುಟುಂಬದ ಜತೆ ಆತ್ಮೀಯತೆ ಬೆಳೆದಿತ್ತು. ಮೀನು ವ್ಯಾಪಾರದಲ್ಲಿ ನಷ್ಟ ಹೊಂದಿದ್ದ ಅವರು, ಬೇರೆ ಕೆಲಸದ ಹುಡುಕಾಟದಲ್ಲಿದ್ದರು. ಕೌಟುಂಬಿಕ ಕಲಹದಿಂದ ಈ ನಡುವೆ ಅವರ ಪತ್ನಿಯೂ ದೂರಾಗಿದ್ದರು.

ಸಂತ್ರಸ್ತೆ ಕೂಡ ಜರಾರ್‌ ಅವರನ್ನು ಸಲುಗೆಯಿಂದಲೇ ಮಾತನಾಡಿಸುತ್ತಿದ್ದರು. ಆದರೆ, ಸ್ಥಳೀಯರು ಅದಕ್ಕೆ ನಾನಾ ಅರ್ಥ ಕಲ್ಪಿಸಿ ಮಾತನಾಡುತ್ತಿದ್ದರಿಂದ ಬೇಸರಗೊಂಡಿದ್ದ ಐಸಾಕ್‌, ‘ಜರಾರ್‌ನಿಂದ ದೂರ ಇರು’ ಎಂದು ಸೋದರಿಗೆ ಬುದ್ಧಿ ಹೇಳಿದ್ದರು. ಅಂತೆಯೇ ಅವರು ಅಂತರ ಕಾಯ್ದುಕೊಂಡಿದ್ದರು.‌

ಈ ಬೆಳವಣಿಗೆಯಿಂದ ಕುಪಿತಗೊಂಡ ಜರಾರ್, ಪ್ರತಿದಿನ ಮನೆ ಬಳಿ ಹೋಗಿ ಇಡೀ ಕುಟುಂಬವನ್ನು ನಿಂದಿಸುತ್ತಿದ್ದರು. ಇದೇ ವಿಷಯವಾಗಿ ಮೂರು ಸಲ ದೊಡ್ಡಮಟ್ಟದ ಗಲಾಟೆಯಾಗಿತ್ತು ಎಂದು ಪೊಲೀಸರು ಹೇಳಿದರು.

Post Comments (+)