ಪರಿಸರ ಸ್ನೇಹಿ ಬೈಕ್‌ ಅಭಿವೃದ್ಧಿ

ಗುರುವಾರ , ಜೂನ್ 27, 2019
30 °C
ಎಂ.ಎಸ್‌.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಪರಿಸರ ಸ್ನೇಹಿ ಬೈಕ್‌ ಅಭಿವೃದ್ಧಿ

Published:
Updated:
Prajavani

ಬೆಂಗಳೂರು: ವಾಯುಮಾಲಿನ್ಯವನ್ನು ನಿಯಂತ್ರಿಸುವುದರ ಜೊತೆಗೆ ಸವಾರರ ದೈಹಿಕ ಆರೋಗ್ಯ ಸಂರಕ್ಷಣೆಗೂ ನೆರವಾಗುವ ಪರಿಸರಸ್ನೇಹಿ ದ್ವಿಚಕ್ರ ವಾಹನವನ್ನು (ಫಿಟ್ ಸ್ಟೆಪ್‌ ಇ–ಬೈಕ್‌) ನಗರದ ಎಂ.ಎಸ್‌.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ವಿದ್ಯುತ್‌ ಬಳಸಿ ಓಡಿಸಬಹುದಾದ ಬೈಕ್‌ಗೆ ಟ್ರೆಡ್‌ ಮಿಲ್‌ ಅಳವಡಿಸಿ ಇದನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯುತ್‌ ಬ್ಯಾಟರಿ ಸಹಾಯದಿಂದ ಈ ವಾಹನವನ್ನು ಚಲಾಯಿಸಬಹುದು ಅಥವಾ ಇದರಲ್ಲಿ ಅಳವಡಿಸಿರುವ ಟ್ರೆಡ್ ಮಿಲ್‌ ಮೇಲೆ ಓಡಿದರೂ ಇದು ವೇಗವಾಗಿ ಮುಂದಕ್ಕೆ ಸಾಗುತ್ತದೆ.

ವಿದ್ಯುತ್‌ ಬ್ಯಾಟರಿ ಅಳವಡಿಸಿರುವ ಈ ವಾಹನವು ಹೊಗೆ ಉಗುಳುವುದಿಲ್ಲ. ಹಾಗಾಗಿ ಇದರ ಬಳಕೆಯಿಂದ ವಾಯು ಮಾಲಿನ್ಯ ಉಂಟಾಗುವುದಿಲ್ಲ. ಟ್ರೆಡ್ ಮಿಲ್‌ ಮೇಲೆ ಓಡುವ ಮೂಲಕ ಈ ವಾಹನವನ್ನು ಚಲಾಯಿಸಿದರೆ, ದೈಹಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಈ ವಾಹನದ ಪುಟ್ಟ ವಿನ್ಯಾಸವು ವಾಹನ ದಟ್ಟಣೆ ನಡುವೆಯೂ ಸುಲಭವಾಗಿ ಮುಂದಕ್ಕೆ ಚಲಿಸುವುದಕ್ಕೆ ಅನುಕೂಲಕರವಾಗಿದೆ.

ಕಾರ್ಯನಿರ್ವಹಣೆ ಹೇಗೆ: ವಿದ್ಯುತ್‌ ಬ್ಯಾಟರಿ, ಮೋಟಾರ್‌, ನಿಯಂತ್ರಣ ಘಟಕ ಹಾಗೂ ಗೇರ್‌ ಸಿಸ್ಟಮ್‌ಗಳನ್ನು ಈ ವಾಹನ ಹೊಂದಿದೆ. ಟ್ರೆಡ್ ಮಿಲ್‌ ಮೇಲೆ ಓಡುವಾಗ ವಾಹನದ ಚಕ್ರವು ಚಲನಾ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಅದರ ಸಹಾಯದಿಂದ ಬೈಕ್‌ ಮುಂದಕ್ಕೆ ಚಲಿಸುತ್ತದೆ. ಓಡಿ ಸುಸ್ತಾದರೆ, ಬ್ಯಾಟರಿ ಚಾಲು ಮಾಡಿಕೊಂಡು ವಾಹನ ಚಲಾ ಯಿಸಬಹುದು.

ಸತತ ಐದು ಗಂಟೆ ಬ್ಯಾಟರಿ ಚಾರ್ಜ್‌ ಮಾಡಿದರೆ, ಐದು ತಾಸು ಸಂಚರಿಸಬಹುದು. ಗಂಟೆಗೆ ಗರಿಷ್ಠ 20 ಕಿ.ಮೀ. ವೇಗದಲ್ಲಿ ಸಾಗಬಹುದು. 120 ಕೆ.ಜಿ.ವರೆಗೆ ತೂಕ ಹೊರುವ ಸಾಮರ್ಥ್ಯವನ್ನು ಇದು ಹೊಂದಿದೆ. 

ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಎಸ್‌.ಮನೋಜ್‌ ಪ್ರಕಾಶ, ಬಿ.ಹೇಮಲತಾ, ಕೆ.ಅಂಜನಾ, ಅಮೃತ ವರ್ಷಿಣಿ ರಾವ್‌ ಅವರನ್ನು ಒಳಗೊಂಡ ತಂಡ ಶೈಕ್ಷಣಿಕ ಯೋಜನೆಯ ಭಾಗವಾಗಿ ‘ಇ–ಬೈಕ್‌’ ಅಭಿವೃದ್ಧಿಪಡಿಸಿದೆ. ಇದನ್ನು ವಿನ್ಯಾಸಗೊಳಿಸಲು ₹40ಸಾವಿರ ವ್ಯಯಿಸಿದೆ.

‘ಈ ವಾಹನವನ್ನು ಶಾಲಾ–ಕಾಲೇಜು ಪ್ರಾಂಗಣಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರಕು ಸಾಗಣೆಗೆ ಬಳಸಬಹುದು. ರಸ್ತೆಯ ಮೇಲೂ ಇದನ್ನು ಓಡಿಸಬಹುದು. ದೂರದ ಪ್ರಯಾಣಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪುಟ್ಟ ಆಸನ ವ್ಯವಸ್ಥೆಯನ್ನೂ ಕಲ್ಪಿಸಿದ್ದೇವೆ’ ಎಂದು ಎಸ್‌.ಮನೋಜ್‌ ಪ್ರಕಾಶ ತಿಳಿಸಿದರು.

‘ಸೈಕಲ್‌ನಂತೆಯೇ ಇರುವ ಇ–ವಾಹ ನವನ್ನು ಚಲಾಯಿಸಲು ಯಾವುದೇ ವಿಶೇಷ ಜ್ಞಾನದ ಅಗತ್ಯವಿಲ್ಲ’ ಎಂದು  ಅವರು ಹೇಳಿದರು.

**

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಸ್ವಲ್ಪ ಮಟ್ಟಿಗಾದರೂ ತಡೆಗಟ್ಟಲು ಏನಾದರೂ ಮಾರ್ಗೋಪಾಯ ಕಂಡುಕೊಳ್ಳಬೇಕು ಎನಿಸಿತು. ಅದಕ್ಕಾಗಿ ಫಿಟ್ ಸ್ಟೆಪ್‌ ಇ–ಬೈಕ್‌ ಅಭಿವೃದ್ಧಿಪಡಿಸಿದೆವು
- ಕೆ.ಅಂಜನಾ, ವಿದ್ಯಾರ್ಥಿನಿ

***

ಅಂಕಿ–ಅಂಶಗಳು

5 ತಿಂಗಳು - ವಿನ್ಯಾಸಗೊಳಿಸಲು ತೆಗೆದುಕೊಂಡ ಸಮಯ

₹40,000 - ವಾಹನ ತಯಾರಿಸಲು ಖರ್ಚಾದ ಹಣ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !