ಗುರುವಾರ , ಆಗಸ್ಟ್ 22, 2019
27 °C
ಪ್ರವಾಹ ಸಂಕಷ್ಟದ ಅನುಭವ ಹಂಚಿಕೊಂಡ ಸಂತ್ರಸ್ತ

ಸಂಭ್ರಮದಲ್ಲಿದ್ದವರಿಗೆ ಬರಡಿಸಿಲು ಬಡಿಯಿತು...

Published:
Updated:
Prajavani

ಬೆಳಗಾವಿ: ಮಲಪ್ರಭಾ ನದಿ ಪ್ರವಾಹದಿಂದ ಆದ ಅನುಭವವನ್ನು ಸವದತ್ತಿ ತಾಲ್ಲೂಕಿನ ಮುನವಳ್ಳಿ ನಿವಾಸಿ ಕಿರಣ ಯಲಿಗಾರ ಅನುಭವ ಹಂಚಿಕೊಂಡಿದ್ದಾರೆ.

‘ಆ.6ರಂದು ಪಂಚಮಿ ಹಬ್ಬದ ಸಡಗರದಲ್ಲಿದ್ದೆವು. ಸಿಹಿ ಉಂಡೆಗಳನ್ನು ತಿಂದು, ಜೋಕಾಲಿ ಆಡುತ್ತಿದ್ದೆವು. ಮಲಪ್ರಭಾ ಜಲಾಶಯ ಭರ್ತಿಯಾಗಿದ್ದು ಸಂತಸ ಇಮ್ಮಡಿಗೊಳಿಸಿತ್ತು. ಅಂದು 200 ಕ್ಯುಸೆಕ್‌ ನೀರನ್ನಷ್ಟೇ ನದಿಗೆ ಬಿಟ್ಟಿದ್ದರಿಂದ ಮಹಿಳೆಯರು ಸೇರಿದಂತೆ ಎಲ್ಲರೂ ಹೂಸ ಬಟ್ಟೆ ಧರಿಸಿ ನದಿಗೆ ಪೂಜೆ ಸಲ್ಲಿಸಲು ಹೊರಟಿದ್ದರು. ಅದೇ ಮಲಪ್ರಭೆ ನಮ್ಮ ಹೊಸ ಬಟ್ಟೆಗಳನ್ನು ಮತ್ತು ಮನೆಗಳನ್ನು ಆಹುತಿ ತೆಗೆದುಕೊಳ್ಳುತ್ತದೆ ಎನ್ನುವ ಸುಳಿವಿರಲಿಲ್ಲ.

ಅಂದೇ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಬಗ್ಗೆ ಆಟೊರಿಕ್ಷಾದ ಧ್ವನಿವರ್ಧಕದಲ್ಲಿ ಬಿತ್ತರಿಸಲಾಯಿತು. ಜನರು ಇದಕ್ಕೆ ಭಯಪಡಲಿಲ್ಲ. ಏಕೆಂದರೆ ಪ್ರವಾಹದ ಅನುಭವ ಮುನವಳ್ಳಿ ಜನರಿಗೆ ಹಿಂದೆಂದೂ ಆಗಿರಲಿಲ್ಲ. ಜಲಾಶಯದಿಂದ 30ಸಾವಿರ ಕ್ಯುಸೆಕ್‌ ನೀರು ಬಿಡಲಾಯಿತು. ಇಲ್ಲಿನ ಹಳೇ ಸೇತುವೆ ಮುಳುಗಿ ಯಲಿಗಾರ ಓಣಿಯ ಮನೆಯ ಬಾಗಿಲುಗಳಿಗೆ ನೀರು ನುಗ್ಗಿತು. ಈ ಹಿಂದೆ ನೀರು ನದಿ ದಂಡೆಯ ಮನೆಗಳ ಹೊಸ್ತಿಲ ಬಳಿ ಬಂದು ಕಡಿಮೆ ಆಗುತಿತ್ತು. ಆದರೆ, ಈ ಬಾರಿ ಅರ್ಧ ಮನೆಗಳನ್ನು ಮುಳಗಿಸಿತು. ಜನರು ಎಲ್ಲವನ್ನೂ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿ ಜೀವ ಉಳಿಸಿಕೊಂಡರು. ಕೆಲವರು ಬೇರೆ ಊರುಗಳಲ್ಲಿನ ನೆಂಟರ ಮನೆಗಳಿಗೆ ಹೋದರು. ಕೆಲವರು ಮಠ, ದೇವಸ್ಥಾನಗಳಲ್ಲಿ ಆಶ್ರಯ ಪಡೆದರು.

ಮತ್ತೆ ನದಿ ನೀರಿನ ಮಟ್ಟ ಹೆಚ್ಚಾಯಿತು. ಅಂಬಾಭವಾನಿ, ಬನಶಂಕರಿ, ವಿಠ್ಠಲಮಂದಿರ ಮತ್ತು ನದಿ ದಂಡೆಯ ಮೇಲಿರುವ ಆಲೂರ ಮಠವನ್ನೂ ಮಲಪ್ರಭೆ ಬಿಡಲಿಲ್ಲ. ಹುಬ್ಬಳ್ಳಿ-ಗೋಕಾಕ ರಸ್ತೆ ಬಂದ್ ಆಯಿತು. ಮರು ದಿನ ಬಸ್ ನಿಲ್ದಾಣದವರೆಗೆ ನೀರು ನುಗ್ಗಿತು. ಶೇ 70ರಷ್ಟು ಮನೆಗಳು ಮುಳುಗಿದವು. ಪಂಚಲಿಂಗೇಶ್ವರ ದೇವಸ್ಥಾನದ ಪಂಚಲಿಂಗಗಳನ್ನೂ ಮಲಪ್ರಭೆ ಮುಳುಗಿಸಿದಳು. ಬ್ಯಾಂಕ್, ಬಂಗಾರದ ಅಂಗಡಿ, ಕಿರಾಣಿ ಅಂಗಡಿ, ಮೆಡಿಕಲ್‌ ಸ್ಟೋರ್‌, ಶ್ರೀಮಂತರು–ಬಡವರೆನ್ನದೇ ಎಲ್ಲರ ಮನೆಗಳೂ ಆಹುತಿಯಾದವು.

2 ದಿನಗಳ ಬಳಿಕ ಪ್ರವಾಹ ಸ್ವಲ್ಪ ಇಳಿಯಿತು. ಆ ಹೊತ್ತಿಗಾಗಲೇ ಬಹಳ ಮನೆಗಳು ಬಿದ್ದಿದ್ದವು. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿದ್ದವು. ಅಂಗಡಿಗಳಲ್ಲಿನ ಸಾಮಗ್ರಿಗಳು ಕೊಚ್ಚಿ ಹೋಗಿದ್ದವು.

ಜನರು ಪ‍ರಿಹಾರ ಕೇಂದ್ರಗಳಲ್ಲಿದ್ದು, ಬೀದಿಪಾಲಾಗಿದ್ದಾರೆ. ಮುರುಘರಾಜೇಂದ್ರ ಸ್ವಾಮೀಜಿ ಮಠದಲ್ಲಿ ಪರಿಹಾರ ಕೇಂದ್ರ ಆರಂಭಿಸಿದ್ದಾರೆ. ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂರಾರು ಮಂದಿ ಆಶ್ರಯ ಪಡೆದಿದ್ದಾರೆ. ಯುವಕರು ನೆರವಾಗುತ್ತಿದ್ದಾರೆ; ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ಪುರಸಭೆ ನಗರಸಭೆ ಅಧಿಕಾರಿ ಮಹೇಂದ್ರ ತಿಮ್ರಾಣಿ ನೇತೃತ್ವದಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಶಾಸಕ ಆನಂದ ಮಾಮನಿ ಜನರಿಗೆ ಸ್ಪಂದಿಸುತ್ತಿದ್ದಾರೆ. ರೇಣುಕಾ ಸಕ್ಕರೆ ಕಾರ್ಖಾನೆಯ ಸಿಬ್ಬಂದಿ ಒಂದು ದಿನದ ವೇತನವನ್ನು ನೆರೆ ಪರಿಹಾರ ನಿಧಿಗೆ ಕೊಟ್ಟಿದ್ದಾರೆ.

ಸರ್ಕಾರ ಜನರಿಗೆ ಬೇಗ ಪರಿಹಾರ ಕಲ್ಪಿಸಿ ನೆರವಾಗಬೇಕು. ಮುನವಳ್ಳಿ ಹಿಂದಿನ ಸ್ಥಿತಿಗೆ ಬರಲು ಕ್ರಮ ಕೈಗೊಳ್ಳಬೇಕು.

Post Comments (+)