ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಕೊಚ್ಚಿಹೋದವರು ಪತ್ತೆಯಾಗಲೇ ಇಲ್ಲ!

ಕಾನೂನು, ಮಾನವೀಯತೆಯ ತೊಳಲಾಟದಲ್ಲಿ ನಾಪತ್ತೆ ಪ್ರಕರಣ
Last Updated 9 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಶಿವಮೊಗ್ಗ: ಎರಡು ತಿಂಗಳ ಹಿಂದೆ ಕುಮುದ್ವತಿ ನದಿಯಲ್ಲಿ ಕೊಚ್ಚಿಹೋಗಿದ್ದ ಇಬ್ಬರ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ. ಕಾನೂನು, ಮಾನವೀಯತೆ ಹಾಗೂ ಸಂಕಷ್ಟಗಳ ತೊಳಲಾಟದ ಮಧ್ಯೆ ಪ್ರಕರಣ ಸಾಗುತ್ತಿದೆ.

ಕುಂಸಿಯ ತಾರಾನಾಥ ಅಲ್ಲಿನ ಪತ್ರಿಕಾ ವಿತರಕ. ಚೋರಡಿಸಮೀಪದ ಸನ್ನಿವಾಸದ ಹರೀಶ್ ಎಂಜಿನಿಯರಿಂಗ್‌ನ ಐದನೇ ಸೆಮಿಸ್ಟರ್ ವಿದ್ಯಾರ್ಥಿ. ರಾಮಪ್ಪ ಕೃಷಿಕ. ಇವರೆಲ್ಲ ಆ.10ರಂದು ಉಕ್ಕಿ ಹರಿಯುತ್ತಿದ್ದ ನದಿ ನೋಡಲು ಹೋಗಿದ್ದರು. ಸ್ವಲ್ಪ ದಿನಗಳ ಮೊದಲು ಉದ್ಘಾಟನೆಗೊಂಡಿದ್ದ ಸಾಗರ–ಶಿವಮೊಗ್ಗ ರಸ್ತೆಯ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವೇಗವಾಗಿ ಬಂದ ಜೀಪ್‌ ಡಿಕ್ಕಿಯಾಗಿ ನಾಲ್ವರೂ ನದಿಗೆ ಬಿದ್ದಿದ್ದರು. ಅವರಲ್ಲಿ ಒಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು. ಮರುದಿನ ರಾಮಪ್ಪ ಅವರ ಶವ ನದಿ ತೀರದಲ್ಲೇ ಪತ್ತೆಯಾಗಿತ್ತು. ಉಳಿದವರ ಪತ್ತೆಗೆ ರಾಷ್ಟ್ರೀಯ ವಿಪತ್ತು ದಳ, ಮುಳುಗು ತಜ್ಞರು ಹಲವು ವಾರಗಳು ನಡೆಸಿದ ಪ್ರಯತ್ನ ಫಲಕೊಡಲಿಲ್ಲ.

ತಾರಾನಾಥ ಅವರು ಪತ್ನಿ, ಇಬ್ಬರು ಪುತ್ರಿಯರ ಪುಟ್ಟ ಸಂಸಾರವನ್ನು ಸಾಗಿಸುತ್ತಿದ್ದರು. ಈಗ ಅವರಿಲ್ಲದ ಆ ಮನೆ ಅನಾಥವಾಗಿದೆ. ದುಡಿಯುವ ಯಜಮಾನನಿಲ್ಲದೆ ಇಬ್ಬರು ಪುತ್ರಿಯರ ಓದೂ ಕಷ್ಟಕರವಾಗಿದೆ. ಅತ್ತ ಹರೀಶನ ತಾಯಿ, ತಂದೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಗನ ಶಿಕ್ಷಣಕ್ಕೆ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಮೂವರು ಮಕ್ಕಳಲ್ಲಿ ಒಬ್ಬನಿಗೆ ಹೃದಯ ಕಾಯಿಲೆ. ಉಳಿದ ಒಬ್ಬ ಮಗನೇ ಅವರಿಗೀಗ ಆಸರೆ.

ಮೃತದೇಹವೂ ಇಲ್ಲ, ಪರಿಹಾರವೂ ಇಲ್ಲ: ನಿಯಮದ ಪ್ರಕಾರ ಕಾಣೆಯಾದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಲು 7 ವರ್ಷ ಕಾಯಬೇಕು. ಜಿಲ್ಲೆಯಲ್ಲಿ ಮಳೆಯಿಂದ ಮೃತಪಟ್ಟ 7 ಜನರ ಕುಟುಂಬಗಳಿಗೆ ಜಿಲ್ಲಾಡಳಿತ ತಲಾ ₹ 5 ಲಕ್ಷ ಪರಿಹಾರ ವಿತರಿಸಿದೆ.

ತಾರಾನಾಥ್ ಹಾಗೂ ಹರೀಶ್ ಅವರ ಮೃತದೇಹ ಪತ್ತೆಯಾಗದ ಕಾರಣ ಅವರ ಕುಟುಂಬಗಳಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಅತ್ತ ಮೃತದೇಹವೂ ಸಿಗದೆ, ಇತ್ತ ಪರಿಹಾರವೂ ದೊರೆಯದೆ ಆ ಕುಟುಂಬಗಳು ಪರಿತಪಿಸುತ್ತಿವೆ. ವಿಶೇಷ ಅಧಿಕಾರ ಬಳಸಿ, ನಿಧನ ಹೊಂದಿದ್ದಾರೆ ಎಂದು ಘೋಷಿಸಲು ಮಾನವೀಯತೆ ಅಡ್ಡಿಯಾಗಿದೆ. ಕೊಚ್ಚಿಹೋದವರು ಮರಳಿ ಬರಬಹುದೇ ಎಂಬ ನಿರೀಕ್ಷೆ ಜಿಲ್ಲಾಡಳಿತ ಹಾಗೂ ಆ ಕುಟುಂಬಗಳಲ್ಲಿ ಇನ್ನೂ ಜೀವಂತವಾಗಿದೆ.

‘ಕಷ್ಟಪಟ್ಟು ಓದಿಸಿದ ಮಗ ಪತ್ತೆಯಾಗಿಲ್ಲ. ಇಳಿವಯಸ್ಸಿನ ಆಸರೆಯೂ ಇಲ್ಲವಾಗಿದೆ. ಓದಿಗೆ ಮಾಡಿದ ಸಾಲ ತೀರಿಸಬೇಕಿದೆ. ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ವಿನಂತಿಸಿದ್ದೇವೆ’ ಎಂದು ಅಳಲು ತೋಡಿಕೊಂಡರು ನಾಪತ್ತೆಯಾಗಿರುವ ಹರೀಶನ ತಂದೆಸುರೇಶ್.

***

ಎರಡು ತಿಂಗಳು ಕಳೆದರೂ ಅವರ ಸುಳಿವಿಲ್ಲ. ಪರಿಹಾರ ಪಡೆಯಲೂ ಅವಕಾಶವಿಲ್ಲ. ಮಕ್ಕಳ ಶಿಕ್ಷಣಕ್ಕೆ ಬಿಡಿಗಾಸಿಲ್ಲ. ಜೀವನ ಸಾಗಿಸುವುದೇ ಕಷ್ಟವಾಗಿದೆ.

-ಶ್ರೀದೇವಿ, ತಾರಾನಾಥ್ ಪತ್ನಿ

ಕೊಚ್ಚಿಹೋದವರು ಮೃತಪಟ್ಟಿದ್ದಾರೆ ಎಂದು ಘೋಷಿಸುವುದು ನಿಮಿಷಗಳ ಕೆಲಸ. ಆದರೆ, ಅದು ಮಾನವೀಯತೆಗೆ ವಿರುದ್ಧ

-ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT