ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರಹಳ್ಳಿ‌: ದೂರವಾಗಿಲ್ಲ ನೆರೆ ಭಯ

ರಾಜಕಾಲುವೆಯ ಗೋಡೆ ಎತ್ತರಿಸಿದರೂ ಮನೆಗಳಿಗೆ ನುಗ್ಗುವ ಕೊಳಚೆ ನೀರು l ನಿವಾಸಿಗಳ ನಿತ್ಯ ಕಣ್ಣೀರು
Last Updated 3 ಜೂನ್ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ದಶಕಗಳ ಹಿಂದೆ ಕುರುಬರಹಳ್ಳಿ ರಾಜಕಾಲುವೆಯ ನೀರನ್ನು ಕುಡಿಯುಲು ಬಳಸುತ್ತಿದ್ದೆವು. ಕಾಲುವೆಯಲ್ಲೇ ಬಟ್ಟೆ ತೊಳೆಯುತ್ತಿದ್ದೆವು. ಮೀನುಗಳನ್ನೂ ಹಿಡಿಯುತ್ತಿದ್ದೆವು... ಆದರೆ, ಈಗ ಮಳೆಯಾದಾಗ ನಮಗೆ ಭಯ ಶುರುವಾಗುತ್ತದೆ. ಇದೇ ಕಾಲುವೆಯಲ್ಲಿ ಹರಿಯುವ ಕಕ್ಕಸಿನ ನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ’

‘ವೃಷಭಾವತಿ ರಾಜಕಾಲುವೆ’ಯೊಂದಿಗೆ ಬೆಸೆದುಕೊಂಡಿದ್ದ ಹಳೆಯ ದಿನಗಳನ್ನು ಕುರುಬರಹಳ್ಳಿ ನಿವಾಸಿ ಸರಸ್ವತಿ ಮೆಲುಕು ಹಾಕುತ್ತಿದ್ದಂತೆ ಅವರ ಕಣ್ಣಾಲಿಗಳು ತುಂಬಿಕೊಂಡವು.

‘ಹಳ್ಳದ ಪಕ್ಕದಲ್ಲಿ ಮನೆ ಇದ್ದರೆ ನೀರಿಗೆ ಅನುಕೂಲ ಎಂಬ ಕಾರಣಕ್ಕೆ 37 ವರ್ಷಗಳ ಹಿಂದೆ ಇಲ್ಲಿ ಜಾಗ ಖರೀದಿಸಿ ಮನೆ ಕಟ್ಟಿದೆವು. ಆಗ ಅಲ್ಲೊಂದು, ಇಲ್ಲೊಂದು ಮನೆಗಳಿದ್ದವು.ಹಳ್ಳದಲ್ಲಿ ಸ್ವಚ್ಛ ನೀರು ಹರಿಯುತ್ತಿತ್ತು. ನೀರಿನ ನಡುವಿನ ಕಲ್ಲುಗಳ ಮೇಲೆ ಕುಳಿತು ಮಕ್ಕಳು ಆಟವಾಡುತ್ತಿದ್ದರು. ಬೇಸಿಗೆಯಲ್ಲೂ ನೀರು ಇದ್ದೇ ಇರುತ್ತಿತ್ತು.ಸುತ್ತಮುತ್ತಲ ಜನ ಕುಡಿಯುವುದಕ್ಕೂ ಇಲ್ಲಿಂದಲೇ ನೀರು ಹೊತ್ತೊಯ್ಯುತ್ತಿದ್ದರು’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಈಗ ಎಲ್ಲವೂ ಬದಲಾಗಿದೆ. ಸ್ವಚ್ಛ ನೀರು ಹರಿಯುತ್ತಿದ್ದ ರಾಜಕಾಲುವೆಗೆಕೊಳಚೆ ನೀರು ಸೇರಿಕೊಂಡು ದುರ್ನಾತ ಬೀರುತ್ತಿದೆ. ರಸ್ತೆಯಲ್ಲಿ ಹೋಗುವ ಜನರೇನೋಮೂಗು ಮುಚ್ಚಿಕೊಂಡು ಓಡಾಡುತ್ತಾರೆ. ಕಾಲುವೆಯ ಪಕ್ಕದಲ್ಲೇ ಇರುವ ನಾವು ಅದೆಷ್ಟು ಸಮಯ ಮೂಗು ಮುಚ್ಚಿಕೊಂಡಿರಲು ಸಾಧ್ಯ? ದುರ್ನಾತದ ಗಾಳಿಯೇ ನಮಗೀಗ ಉಸಿರಾಗಿದೆ. ಮುಗಿಲಿನಲ್ಲಿ ಮೋಡ ಕಟ್ಟಿದರೆ ಇಂದೇ ನಮ್ಮ ಕೊನೆ ದಿನವೇನೋ ಎಂಬ ಭಯ ಕಾಡುತ್ತದೆ’‌ಎಂದರು.

‘ಒಮ್ಮೆ ಮಳೆಗಾಲದಲ್ಲಿ ನೀರು ನುಗ್ಗಿದ್ದಾಗ ನನ್ನ ಮಗ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಒತ್ತಡ ಹೆಚ್ಚಾದಂತೆ ತಡೆಯಲು ಆಗಲಿಲ್ಲ. ಮನೆಯೊಳಗೆ ಎದೆಯ ಎತ್ತರಕ್ಕೆ ನೀರು ನುಗ್ಗಿತು. ಹೇಗೋ ಮಕ್ಕಳು–ಮರಿಯನ್ನು ಕರೆದುಕೊಂಡು ಹೊರಬಂದು ಜೀವ ಉಳಿಸಿಕೊಂಡೆವು. ಕಲಬುರ್ಗಿ ಜಿಲ್ಲೆಯ ಕುಟುಂಬವೊಂದು ನಮ್ಮ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇತ್ತು. ಆ ಮನೆ ಬಿದ್ದೇ ಹೋಯಿತು. ಅದನ್ನೀಗ ರಿಪೇರಿ ಮಾಡಿಸಿದ್ದೇನೆ. ಆದರೆ, ಯಾರೊಬ್ಬರೂ ಬಾಡಿಗೆಗೆ ಬರುತ್ತಿಲ್ಲ. ಯಾಕಾದರೂ ಕಾಲುವೆ ಪಕ್ಕದಲ್ಲಿ ಮನೆ ಕಟ್ಟಿದೆವೊ ಎಂದು ದಿನನಿತ್ಯ ಕಣ್ಣೀರಿಡುತ್ತಿದ್ದೇವೆ’ ಎಂದು ಹೇಳಿದರು.

‘ಅಧಿಕಾರಿಗಳು ಹಾಗೂ ರಾಜಕಾರಣಿಗಳು ಅಂದು ಬಂದು ಭರವಸೆ ಕೊಟ್ಟು ಹೋದರು. ಕಾಲುವೆಯ ಎಡಭಾಗದಲ್ಲಿ ಮಾತ್ರ ತಡೆಗೋಡೆಯನ್ನು ಎತ್ತರಿಸಿದ್ದಾರೆ. ಎಷ್ಟೇ ಬೇಡಿಕೊಂಡರೂ ಬಲಭಾಗದಲ್ಲಿ ತಡೆಗೋಡೆ ಎತ್ತರಿಸಲಿಲ್ಲ. ನಮ್ಮ ನೋವು ಯಾರಿಗೆ ಹೇಳಬೇಕೋ ಗೊತ್ತಾಗುತ್ತಿಲ್ಲ’ ಎಂದರು.

‘ರಾಜಕಾಲುವೆಯ ಅಕ್ಕಪಕ್ಕದ ನಿವಾಸಿಗಳು ಪ್ರತಿನಿತ್ಯ ಜೀವ ಬಿಗಿ ಹಿಡಿದೇ ಬದುಕುತ್ತಿದ್ದೇವೆ. ಎರಡು ವರ್ಷದ ಹಿಂದೆ ಇಬ್ಬರು ರಾಜಕಾಲುವೆ ಪಾಲಾದರು. ಈ ವರ್ಷ ಏನಾಗುತ್ತದೋ ಗೊತ್ತಿಲ್ಲ. ಆತಂಕವಂತೂ ಇದ್ದೇ ಇದೆ’ ಎಂದು ಇದೇ ಬಡಾವಣೆಯ ಪಾರ್ವತಮ್ಮ ಹೇಳಿದರು.

‘ಹೂಳು ತೆಗೆದರೂ ಮತ್ತೆ ತುಂಬಿಕೊಂಡಿದೆ. ಈ ವರ್ಷ ಸುರಿದ ಮಳೆಯಲ್ಲಿ ಇದುವರೆಗೆ ನೀರು ತಡೆಗೋಡೆ ದಾಟಿ ಹರಿದಿಲ್ಲ. ಮಳೆಗಾಲದಲ್ಲಿ ಏನೂ ಅವಘಡ ಆಗದಿದ್ದರೆ ಸಾಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇವೆ’ ಎಂದರು.

ಮುನ್ನೆಚ್ಚರಿಕೆ ವಹಿಸಿದ್ದೇವೆ: ಗೋಪಾಲಯ್ಯ

‘ರಾಜಕಾಲುವೆಯ ತಡೆಗೋಡೆ ಎತ್ತರಿಸಲಾಗಿದೆ. ಹೂಳು ತೆಗೆಸಲಾಗಿದೆ. ಈ ಬಾರಿಯ ಮಳೆಗೆ ನೀರು ನುಗ್ಗುವುದಿಲ್ಲ ಎಂಬ ನಂಬಿಕೆಯಲ್ಲಿ ಇದ್ದೇವೆ’ ಎಂದು ಶಾಸಕ ಕೆ.ಗೋಪಾಲಯ್ಯ ಹೇಳಿದರು.

‘ಮಳೆ ಬಂದರೆ ನೀರು ಎಡಭಾಗಕ್ಕೆ ಮಾತ್ರ ನುಗ್ಗುತ್ತದೆ. ಹೀಗಾಗಿ ಎಡಭಾಗದ ತಡೆಗೋಡೆಯನ್ನು ಎತ್ತರಿಸಲಾಗಿದೆ. ಬಲಭಾಗ ಸ್ವಾಭಾವಿಕವಾಗಿಯೇ ಎತ್ತರದಲ್ಲಿದೆ. ಅಷ್ಟೇನೂ ಸಮಸ್ಯೆ ಇಲ್ಲ’ ಎಂದರು. ‘30–40 ವರ್ಷಗಳ ಹಿಂದೆ ಕಟ್ಟಿರುವ ಮನೆಗಳು ಕಾಲುವೆಗಿಂತ ಹಳ್ಳದಲ್ಲಿವೆ. ಆ ಮನೆಗಳಿಗೆ ನೀರು ನುಗ್ಗುವ ಆತಂಕ ಇದೆ. ಹಕ್ಕುಪತ್ರ ಪಡೆದು ಮನೆ ಕಟ್ಟಿಕೊಂಡಿರುವ ಜನರನ್ನು ಈಗ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ನಿವಾಸಿಗಳೇ ಮಣ್ಣು ತುಂಬಿ ಎತ್ತರಿಸಿಕೊಂಡು ಮನೆ ಕಟ್ಟಿಕೊಂಡರೆ ಸುರಕ್ಷತೆಯಿಂದ ಇರಬಹುದು’ ಎಂದು ಹೇಳಿದರು.

**

ತಡೆಗೋಡೆಯನ್ನು ಬಲಭಾಗದಲ್ಲೂ ಎತ್ತರಿಸಿದ್ದರೆ ಅನುಕೂಲವಾಗುತ್ತಿತ್ತು. ಮಳೆ ಬಂತೆಂದರೆ ನಮಗೆ ಆತಂಕ ಕಾಡುತ್ತದೆ
–ಸರಸ್ವತಿ, ಕುರುಬರಹಳ್ಳಿ ನಿವಾಸಿ

**

ಮಳೆ ನಿಂತು 10 ನಿಮಿಷ ಯಾರಿಂದಲೂ ದೂರವಾಣಿ ಕರೆ ಬರದಿದ್ದರೆ ಯಾವುದೇ ಅವಘಡ ಸಂಭವಿಸಿರಲಿಕ್ಕಿಲ್ಲ ಎಂದುಕೊಂಡು ಸಮಾಧಾನದಲ್ಲಿ ನಿದ್ರೆ ಮಾಡುತ್ತೇನೆ
- ಕೆ.ಗೋಪಾಲಯ್ಯ, ಶಾಸಕ, ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT