ಭಾನುವಾರ, ಆಗಸ್ಟ್ 25, 2019
23 °C
ದಿಡುಪೆಯಲ್ಲಿ ಕೆಸರಿನಿಂದ ತುಂಬಿರುವ ಮನೆಯೊಳಕ್ಕೆ ಕಾಲಿಡಲು ಭಯ

ಪ್ರವಾಹದ ಆರ್ಭಟಕ್ಕೆ ಬದುಕು ತತ್ತರ

Published:
Updated:
Prajavani

ದಿಡುಪೆ (ಬೆಳ್ತಂಗಡಿ): ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡುಪೆ ಸಮೀಪದ ಬಾಗಿದಡಿಯ ಕೆಂಪಯ್ಯಗೌಡರ ಅಡಿಕೆ ತೋಟದ ವಿಸ್ತೀರ್ಣ ಶುಕ್ರವಾರ ಮಧ್ಯಾಹ್ನದವರೆಗೂ 80 ಸೆಂಟ್ಸ್‌ ಇತ್ತು. ಈಗ ಉಳಿದಿರುವುದು 10 ಸೆಂಟ್ಸ್‌ ಮಾತ್ರ!

ಇದು ಶುಕ್ರವಾರ ಮಧ್ಯಾಹ್ನದ ಬಳಿಕ ಆನಡ್ಕ ಜಲಪಾತದ ಭಾಗದಲ್ಲಿ ಸಂಭವಿಸಿದ ಭೂಕುಸಿತ ಮತ್ತು ಅದರಿಂದ ಉಂಟಾದ ಮಹಾ ಪ್ರವಾಹ ಸೃಷ್ಟಿಸಿರುವ ಅನಾಹುತಗಳಿಗೆ ಒಂದು ಚಿಕ್ಕ ಉದಾಹರಣೆ ಮಾತ್ರ.

ಆನಡ್ಕ ಜಲಪಾತದಿಂದ ಹರಿದು ಬರುವ ಎರಡು ಹಳ್ಳಗಳು ಕೆಂಪಯ್ಯಗೌಡರ ಅಡಿಕೆ ತೋಟದ ಇಕ್ಕೆಲಗಳಲ್ಲಿ ಹರಿಯುತ್ತವೆ. ಜಲಪಾತದ ಭಾಗದಲ್ಲಿ ಸಂಭವಿಸಿದ ಭೂಕುಸಿತದಿಂದ ಉಂಟಾದ ಭಾರಿ ಪ್ರವಾಹ ಕಲ್ಲು, ಮಣ್ಣು, ಮರಗಳನ್ನು ಕೊಚ್ಚಿಕೊಂಡು ಹರಿದಿದೆ. ಇದರಿಂದ ಅಡಿಕೆ ತೋಟ ಇದ್ದ ಜಾಗದಲ್ಲೂ ಈಗ ಹಳ್ಳವೇ ಹರಿಯುತ್ತಿದೆ.

ಇನ್ನೊಂದು ಕಡೆಯಲ್ಲಿ ಕಡಮಗುಂಡಿ ಜಲಪಾತದ ಕಡೆಯಿಂದಲೂ ಇದೇ ಮಾದರಿಯ ಪ್ರವಾಹ ನುಗ್ಗಿ ಬಂದಿದೆ. ಅರಣ್ಯದೊಳಗೆ ಸಂಭವಿಸಿದ ಭೂಕುಸಿತದಿಂದ ಸೃಷ್ಟಿಯಾದ ಹತ್ತಾರು ತೊರೆಗಳು ನೂರಾರು ಮರದ ದಿಮ್ಮಿಗಳನ್ನು ಕೊಚ್ಚಿಕೊಂಡು ಬಂದು ಹಳ್ಳಿಗೆ ಅಪ್ಪಳಿಸಿವೆ. ಪ್ರವಾಹದ ಆರ್ಭಟಕ್ಕೆ ಮನೆಗಳಿಗೆ ಹಾನಿಯಾಗಿರುವುದಲ್ಲದೇ, ಮನೆಯೊಳಗಿದ್ದ ಎಲ್ಲವೂ ನೀರು ಪಾಲಾಗಿವೆ.

 ದಿಡುಪೆ, ಊರ್ಜೆ, ಬಾಗಿದಡಿ, ಕುಡ್ಮನ್‌ಬೈಲು, ಎಸ್‌.ಎಂ.ತುಲ್ಪುಲೆ, ಅಗ್ಗಪಾಲು, ಕಜಕೆ, ಮಲ್ಲದಪಾಲು, ನಂದಿಕಾಡು ಹಳ್ಳಿಗಳ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮನೆಗಳಲ್ಲಿ ನಾಲ್ಕರಿಂದ ಐದು ಅಡಿಗಳಷ್ಟು ಕೆಸರು ತುಂಬಿಕೊಂಡಿದೆ. ಅಡಿಕೆ ಮತ್ತು ತೆಂಗಿನ ತೋಟ, ಬಾವಿಗಳನ್ನು ಮರಳಿನ ರಾಶಿ ಮುಚ್ಚಿಹಾಕಿದೆ. ಕಿಂಡಿ ಅಣೆಕಟ್ಟೆಗಳು ಕೊಚ್ಚಿ ಹೋಗಿವೆ.

ಪ್ರವಾಹದಲ್ಲಿ ಕೊಚ್ಚಿ ಬಂದ ಮರದ ದಿಮ್ಮಿಗಳು ಕೆಲವು ಮನೆಗಳಿಗೆ ಆಸರೆಯಾದವು. ಮರದ ದಿಮ್ಮಿಗಳ ರಾಶಿ ತಡೆಗೋಡೆ ಸೃಷ್ಟಿಸಿದ್ದರಿಂದ ಕೆಲವು ಮನೆಗಳು ಉರುಳದೇ ಉಳಿದವು. ರಕ್ತೇಶ್ವರಿ ಗುಡಿಗೂ ಹೀಗೆ ರಕ್ಷಣೆ ದೊರೆಯಿತು.

ಸಮುದ್ರವೇ ಹರಿದುಬಂದಂತೆ ಇತ್ತು:

ದಿಡುಪೆಯಲ್ಲಿ ಉಂಟಾಗಿದ್ದ ಪ್ರವಾಹದ ಕುರಿತು ‘ಪ್ರಜಾವಾಣಿ’ಗೆ ವಿವರಿಸಿದ ಸ್ಥಳೀಯರಾದ ಉಮೇಶ್‌, ‘ಶುಕ್ರವಾರ ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಸುರಿದ ಮಹಾಮಳೆ ಮತ್ತು ಭೂಕುಸಿತ ಭಾರಿ ಪ್ರವಾಹಕ್ಕೆ ಕಾರಣವಾಯಿತು. ಕಡಮಗುಂಡಿ ಜಲಪಾತದಿಂದ ಹರಿಯುವ ಹಳ್ಳದ ನೀರು 15ರಿಂದ 20 ಅಡಿಗಳವರೆಗೂ ಏರಿತು. ಸಂಪರ್ಕ ಸೇತುವೆ ಮುಳುಗಿತು. ಸಮುದ್ರವೇ ಹರಿದುಬಂದ ಅನುಭವವಾಯಿತು’ ಎಂದರು.

‘ನಮ್ಮ ಮನೆ ಯಾವುದೇ ಕ್ಷಣದಲ್ಲೂ ಬೀಳಬಹುದು. ಹಲವು ಮನೆಗಳಲ್ಲಿ ಬಿರುಕು ಬಂದಿದೆ. ಕೆಲವು ಮನೆಗಳನ್ನು ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಚಿಗೊಳಿಸಿದ್ದಾರೆ’ ಎಂದು ಹೇಳುತ್ತಲೇ ಕಣ್ಣೀರಾದರು ಅಬ್ದುಲ್‌ ರೆಹ್ಮಾನ್‌.

ರಸ್ತೆ ಹೋಯಿತು:

‘ಪ್ರವಾಹದ ಅಬ್ಬರಕ್ಕೆ ರಸ್ತೆಯೇ ಕೊಚ್ಚಿಕೊಂಡು ಹೋಯಿತು. ಮರದ ದಿಮ್ಮಿಗಳ ರಾಶಿಯ ತಡೆಗೋಡೆಯಿಂದ ನಮ್ಮ ಮನೆ ಉಳಿಯಿತು. ಕುಡಿಯುವ ನೀರಿನ ಕೊಳ ಮುಚ್ಚಿಹೋಗಿದೆ. ಪಂಪ್‌ಸೆಟ್‌ ಒಂದು ಕಿ.ಮೀ. ದೂರದಲ್ಲಿ ಸಿಕ್ಕಿದೆ’ ಎಂದು ಊರ್ಜೆಯ ರವಿಚಂದ್ರ ವಿವರಿಸಿದರು.

ಜನರೇಟರ್‌ಗೆ ಡೀಸೆಲ್‌ ದೇಣಿಗೆ

ಮಲವಂತಿಗೆ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿವೆ. ಅಲ್ಲಿದ್ದ ಬಿಎಸ್‌ಎನ್‌ಎಲ್‌ ಟವರ್‌ನ ಜನರೇಟರ್‌ಗೆ ಬೆಳ್ತಂಗಡಿ ತಹಶೀಲ್ದಾರ್‌ 75 ಲೀಟರ್‌ ಡೀಸೆಲ್‌ ಒದಗಿಸಿದ್ದಾರೆ. ದಾನಿಗಳ ನೆರವಿನಲ್ಲಿ 25 ಲೀಟರ್‌ ತರಲಾಗಿದೆ.

‘ಮೊಬೈಲ್‌ ಸಂಪರ್ಕಕ್ಕೆ ತರಂಗಾಂತರ ಒದಗಿಸುವ ಈ ಟವರ್‌ನ ಕಟ್ಟಡದಲ್ಲೇ ಜನರೇಟರ್‌ ನೆರವಿನಲ್ಲಿ ಸುತ್ತಲಿನ ಹಳ್ಳಿಗಳ ಜನರ ಮೊಬೈಲ್‌ ಬ್ಯಾಟರಿ ಚಾರ್ಜ್‌ ಕೂಡ ಮಾಡಲಾಗುತ್ತಿದೆ. ದಿನವೊಂದಕ್ಕೆ 400 ಮೊಬೈಲ್‌ಗಳನ್ನು ಇಲ್ಲಿ ಚಾರ್ಜ್‌ ಮಾಡಲಾಗುತ್ತಿದೆ’ ಎಂದು ಸ್ಥಳೀಯ ಆನಂದ್‌ ಗೌಡ ತಿಳಿಸಿದರು.

Post Comments (+)