ಹುಬ್ಬಳ್ಳಿ: ಮತ ಜಾಗೃತಿಗೆ ಜನಪದ ಗೀತೆ

ಶುಕ್ರವಾರ, ಏಪ್ರಿಲ್ 19, 2019
31 °C
ಇಂದಿನಿಂದ 20ರ ವರೆಗೆ ಹಳ್ಳಿಗಳಲ್ಲಿ ಕಾರ್ಯಕ್ರಮ: ಕೇಕ್‌ ಕತ್ತರಿಸಲಿದ್ದಾರೆ ಮಕ್ಕಳು

ಹುಬ್ಬಳ್ಳಿ: ಮತ ಜಾಗೃತಿಗೆ ಜನಪದ ಗೀತೆ

Published:
Updated:
Prajavani

ಹುಬ್ಬಳ್ಳಿ: ಮತದಾನ ಜಾಗೃತಿಗೆ ಜನಪದ ತಂಡಗಳು ತಯಾರಾಗಿ ನಿಂತಿದ್ದು, ಇಂದಿನಿಂದ 20ರ ವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿವೆ. ಸ್ಥಳೀಯರನ್ನು ಸೆಳೆಯಲು ಹಾಗೂ ಒಟ್ಟುಗೂಡಿಸಲು ಮತದಾರರ ಜಾಗೃತಿ ಹಾಗೂ ಪಾಲ್ಗೊಳ್ಳುವಿಕೆ ಸಮಿತಿ (ಸ್ವೀಪ್) ಹೊಸ ಚಿಂತನೆ ನಡೆಸಿದ್ದು, ಕಾರ್ಯಕ್ರಮ ಆರಂಭಕ್ಕೂ ಮೊದಲು ಕೇಕ್‌ ಕತ್ತರಿಸಿ ಹಂಚಲಾಗುತ್ತದೆ.

ಹಿಂದಿನ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿರುವ ಹಾಗೂ ಹೆಚ್ಚಾಗಿದ್ದರೂ ಇನ್ನೂ ಏರಿಸಲು ಸಾಧ್ಯ ಇರುವಂತಹ 30 ಗ್ರಾಮಗಳನ್ನು ಸ್ವೀಪ್ ಸಮಿತಿ ಆಯ್ಕೆ ಮಾಡಿಕೊಂಡಿದೆ. ಮಹದೇವ ಸತ್ತಿಗೇರಿ ಹಾಗೂ ಎಫ್‌.ಬಿ. ಕನವಲ್ ಅವರ ತಂಡಗಳು ಆ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲಿವೆ. ಅಲ್ಲದೆ ಎಂಟು ಜನರ ಶಿಕ್ಷಕರ ತಂಡವನ್ನು ಸಹ ತಯಾರು ಮಾಡಲಾಗಿದ್ದು, ಮತದಾನದ ಮಹತ್ವ ಸಾರಿ, ಹಕ್ಕು ಚಲಾಯಿಸುವಂತೆ ಅವರು ಪ್ರೇರೇಪಿಸಲಿದ್ದಾರೆ.

ಗ್ರಾಮದ ಶಾಲೆ ಅಥವಾ ಸಮುದಾಯ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಸ್ವೀಪ್ ಚಿಹ್ನೆ ಇರುವ ಕೇಕ್ ಅನ್ನು ಮಕ್ಕಳು ಕತ್ತರಿಸಿ ಹಂಚಿದ ನಂತರ ಕಾರ್ಯಕ್ರಮ ಆರಂಭವಾಗುತ್ತದೆ. ರಾಗ ಸಂಯೋಜನೆ ಮಾಡಿರುವ ಸ್ವರಚಿತ ಗೀತೆಗಳನ್ನು ಗಾಯಕರು ಹಾಡಲಿದ್ದಾರೆ. ಮತದಾನದಿಂದ ಏಕೆ ಮಾಡಬೇಕು ಎಂಬುದನ್ನು ತಿಳಿ ಹಾಸ್ಯದ ಮೂಲಕ ಸಹ ಮನದಟ್ಟು ಮಾಡಿಕೊಡಲಾಗುತ್ತದೆ ಎನ್ನುತ್ತಾರೆ ಸ್ವೀಪ್ ಸಮಿತಿ ಅಧಿಕಾರಿಗಳು.

‘ಜಾನಪದ ಗೀತೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ನಡೆದ ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸ್ವೀಪ್ ತಂಡ ಬಹಳಷ್ಟು ಪ್ರೋತ್ಸಾಹ ನೀಡುತ್ತಿರುವುದರಿಂದ ಗ್ರಾಮಗಳ ಕಾರ್ಯಕ್ರಮಗಳು ಸಹ ಯಶಸ್ವಿಯಾಗಿ ನಡೆಯಲಿದೆ ಹಾಗೂ ಪರಿಣಾಮ ಬೀರಲಿದೆ ಎಂಬ ವಿಶ್ವಾಸ ಇದೆ’ ಎನ್ನುತ್ತಾರೆ ಸತ್ತಿಗೇರಿ ತಂಡದ ಸದಸ್ಯ ಪ್ರಕಾಶ ಕಂಬಳಿ.

‘ಜನಪದ ಗೀತೆ ಹಾಗೂ ಹಾಸ್ಯದ ಮೂಲಕ ಜನರ ಮೇಲೆ ಪ್ರಭಾವ ಬೀರಲು ಸಾಧ್ಯ. ಆದ್ದರಿಂದ ಜಾಗೃತಿ ಕಾರ್ಯಕ್ರಮ್ಕಕೆ ಜಾನಪದ ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಭಾಗ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿಯೂ ಕಾರ್ಯಕ್ರಮ ಆಯೋಜಿಸುವ ಯೋಚನೆ ಇದೆ’ ಎನ್ನುತ್ತಾರೆ ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಸಿಇಒ ಡಾ. ಬಿ.ಸಿ. ಸತೀಶ.

ಅಂಗವಿಕಲರೆಂದು ಅಂಜಬೇಡಿರಣ್ಣ, ಆತ್ಮವಿಶ್ವಾಸದಿಮದ ಮತ ಹಾಕಿರಣ್ಣ... ವಯೋವೃದ್ಧರೆಂದು ಒದ್ದಾಡಬೇಡಿರಣ್ಣ, ಮತ ಹಾಕಲು ನಿಮಗೆ ಸುಗಮ ದಾರಿ ಇದೆಯಣ್ಣ .ಎಂಬಂತಹ ಆಕರ್ಷಕ ಸಾಲುಗಳನ್ನು ಬರೆದಿರುವ ಪ್ರಕಾಶ ಕಂಬಳಿ ರಾಗ ಸಂಯೋಜನೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !