ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ನಕ್ಷೆ ಜಾಡಿನಲ್ಲಿ ಊಟ ತಲುಪಿಸುವ ಓಟ

Last Updated 11 ಆಗಸ್ಟ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬೆನ್ನ ಮೇಲೆ ಊಟದ ಚೀಲ, ಎದುರಿಗೆ ವಾಹನಗಳ ಸಾಲು, ದಾರಿ ತೋರಿಸಲು ಗೂಗಲ್ಲು.. ಬಿಸಿಲಿ
ರಲಿ, ಮಳೆಯೇ ಬರಲಿ ಊಟ ತಲುಪಿಸುವ ಓಟವಂತೂನಿಲ್ಲುವುದಿಲ್ಲ. ಇನ್ನೊಬ್ಬರ ಜಿಹ್ವಾ ಚಪಲ ತೀರಿಸಲು ನೆರವಾಗುವುದನ್ನೇ ದುಡಿಮೆಯನ್ನಾಗಿ ಆರಿಸಿಕೊಂಡವರ ಬದುಕು ಕೂಡಾ ‘ಸ್ವಾದಮಯ’ವಾಗಿದೆಯೇ?

ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಬೇರೆಯವರ ಹೊಟ್ಟೆ ಹಸಿವನ್ನು ತಣಿಸುವ ಈ ಕಾಯಕ ಸಾವಿರಾರು ಯುವಜನರಿಗೆ ಹೊಟ್ಟೆ ಹೊರೆಯುವ ಸಾಧನವಾಗಿರುವುದು ನಿಜ. ಹಾಗೆಂದ ಮಾತ್ರಕ್ಕೆ ಆಹಾರ ತಲುಪಿಸುವ ಅವರ ಧಾವಂತದ ಬದುಕಿನ ಹಾದಿಯ ಹಿಂದೆ ಬವಣೆಗಳ ಸರಮಾಲೆಯೂ ಇದೆ. ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿಗಳ (ಸ್ವಿಗ್ಗಿ, ಜೊಮೆಟೊ, ಊಬರ್ ಈಟ್ ಇತ್ಯಾದಿ) ಪರವಾಗಿ ಮನೆ–ಮನೆಗೆ ಆಹಾರದ ಪೊಟ್ಟಣಗಳನ್ನು ತಲುಪಿಸುತ್ತಿರುವ ಈ ಯುವಕರು ಆ ಕಂಪನಿಗಳ ಕಾರ್ಮಿಕರಲ್ಲ. ಹೆಸರಿಗೆ ಅವರು ವಿತರಣೆಯ ಪಾಲುದಾರರು (ಡೆಲಿವರಿ ಪಾರ್ಟ್‌ನರ್‌). ಆದರೆ, ಅವರಿಗೆ ಬೆವರಿನ ಪಾಲು ಸರಿಯಾಗಿ ಸಿಗುತ್ತಿದೆಯೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಕೆಲಸದ ಒತ್ತಡದ ನಡುವೆ ಹೋಟೆಲ್‌ಗಳಿಗೆ ತೆರಳಿ ಊಟ ಮಾಡಿಕೊಂಡು ಬರುವಷ್ಟು ಸಮಯ ನಗರದ ಜನರಿಗಿಲ್ಲ. ಮನೆ ಅಥವಾ ಕಚೇರಿಗಳಲ್ಲೇ ಕುಳಿತು ಹೋಟೆಲ್‌ನಿಂದ ಆಹಾರ ಬುಕ್ ಮಾಡಿದರೆ ಅರೆ ಗಳಿಗೆಯಲ್ಲಿ ಆಹಾರದ ಪೊಟ್ಟಣ ಸಮೇತ ಹುಡುಗರು ಹಾಜರ್‌. ಮನೆ ಅಥವಾ ಕಚೇರಿ ಬಾಗಿಲಿಗೇ ಸೇವೆ ಒದಗಿಸುವ ಕಂಪನಿಗಳು ಗ್ರಾಹಕರಿಂದ ಅದಕ್ಕೆ ಶುಲ್ಕವನ್ನೂ ಪಡೆಯುತ್ತವೆ. ಈ ರೀತಿ ಆನ್‌ಲೈನ್‌ನಲ್ಲಿ ಬುಕ್ ಮಾಡಿ ಊಟ ತರಿಸಿಕೊಳ್ಳುವವರಿಗೆ ಈ ಮೊತ್ತವೇನೂ ದೊಡ್ಡದಲ್ಲ.

ಗ್ರಾಹಕರಿಗೆ ಸಮಯ, ಇಂಧನ, ಶ್ರಮ ಉಳಿತಾಯವಾದರೆ, ಸಾವಿರಾರು ನಿರುದ್ಯೋಗಿಗಳಿಗೆ ಇದು ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ. ಬೆಂಗಳೂರಿನಲ್ಲಿ ಈ ರೀತಿಯ ಹತ್ತಾರು ಆಹಾರ ಸರಬರಾಜು ಕಂಪನಿಗಳು ತಲೆ ಎತ್ತಿವೆ.

ಕರೆ ಕಳುಹಿಸಿದವರು ಇರುವಲ್ಲಿಗೇ ಆಹಾರದ ಪೊಟ್ಟಣಗಳ ಸಮೇತ ಕ್ಷಣ ಮಾತ್ರದಲ್ಲೇ ಹಾಜರಾಗುವ ಈ ಹುಡುಗರು ದೊಡ್ಡ ದೊಡ್ಡ ಹೋಟೆಲ್‌ಗಳ ಮುಂದೆ ಆರ್ಡರ್‌ಗಳಿಗಾಗಿ ಕಾದು ನಿಲ್ಲುತ್ತಾರೆ. ಮೊಬೈಲ್‌ಗೆ ಸಂದೇಶ ಬರುತ್ತಿದ್ದಂತೆಯೇ ಅವರು ಗೂಗಲ್ ಮ್ಯಾಪ್‌ ಅನ್ನೇ ಕಣ್ಣಿಗೆ ಕಟ್ಟಿಕೊಂಡವರಂತೆ ಗುರಿಯ ಬೆನ್ನತ್ತುವ ಬಗೆ ಭಯಮೂಡಿಸುವಂತಿರುತ್ತದೆ.

‘ರಸ್ತೆಯಲ್ಲಿ ಸಂಚಾರ ದಟ್ಟಣೆ ಎಷ್ಟೇ ಇರಲಿ, ಗ್ರಾಹಕರಿಗೆ ನಿಗದಿತ ಸಮಯದೊಳಗೆ ಆಹಾರ ತಲುಪಿಸುವುದೊಂದೇ ನಮ್ಮ ಲಕ್ಷ್ಯ’ ಎನ್ನುತ್ತಾ ಮುನ್ನುಗ್ಗುತ್ತಾರೆ.

ವಿದ್ಯಾಭ್ಯಾಸದ ಜತೆಗೆ ಬಿಡುವಿನ ಸಮಯದಲ್ಲಿ ಹಲವು ಯುವಕರು ಈ ಉದ್ಯೋಗ ಆಯ್ಕೆ ಮಾಡಿಕೊಂಡಿದ್ದರೆ, ಇನ್ನೂ ಕೆಲವರು ಕುಟುಂಬ ನಿಭಾಯಿಸಲು ಇದನ್ನೇ ನಂಬಿದ್ದಾರೆ. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವೀಧರರವರೆಗೂ ಈ ಕಾಯಕದಲ್ಲಿ ತೊಡಗಿದ್ದಾರೆ.

‘ಬೈಕ್ ಇದ್ದರೆ ಸಾಕು, ಕೈತುಂಬ ದುಡಿಯಲು ಸದಾವಕಾಶ’ ಎಂಬ ಘೋಷಣೆಗಳೊಂದಿಗೆ ಯುವಕರನ್ನು ಸೆಳೆಯುವ ಆ್ಯಪ್ ಆಧಾರಿತ ಕಂಪನಿಗಳು, ಇವರನ್ನು ತಮ್ಮ ಕಂಪನಿ ಉದ್ಯೋಗಿಗಳು ಎಂದು ಪರಿಗಣಿಸಲು ಸಿದ್ಧವಿಲ್ಲ.

ದಿನಕ್ಕೆ ಎಷ್ಟು ಆರ್ಡರ್‌ಗಳನ್ನು ಮನೆಗಳಿಗೆ ತಲುಪಿಸುತ್ತಾರೆ ಎಂಬುದರ ಮೇಲೆ ಅವರ ದಿನದ ದುಡಿಮೆ ನಿರ್ಧಾರವಾಗುತ್ತದೆ. ಬೆಳಿಗ್ಗೆ ಆರಂಭವಾದರೆ ಎಷ್ಟೊತ್ತಿಗೆ ಕೆಲಸ ಮುಗಿಯುತ್ತದೆ ಎಂಬುದು ಗೊತ್ತಿಲ್ಲ. ನಿಗದಿತ ವೇತನವಾಗಲೀ, ಕೆಲಸದ ಸಮಯವಾಗಲೀ ಇಲ್ಲ. ಆಹಾರ ತಲುಪಿಸಬೇಕಾದ ಮನೆ ಎಷ್ಟು ದೂರದಲ್ಲಿ ಇರುತ್ತದೆ ಎಂಬುದರ ಮೇಲೆ ಹಣ ಎಷ್ಟು ಎಂಬುದು ನಿಗದಿಯಾಗುತ್ತದೆ. ಹೋಟೆಲ್‌ನಿಂದ 4 ಕಿಲೋಮೀಟರ್ ಅಂತರದೊಳಗೆ ಮನೆ ಇದ್ದರೆ ಕನಿಷ್ಠ ₹40 (ಪೇ ಔಟ್) ಸಿಗುತ್ತದೆ. 4 ಕಿ.ಮೀ ದಾಟಿದರೆ ಹೆಚ್ಚುವರಿಯಾಗಿ ಹಣ ನೀಡಲಾಗುತ್ತದೆ.

ಇದಲ್ಲದೇ ದಿನದಲ್ಲಿ ನಿಗದಿತ (ಕನಿಷ್ಠ 15) ಗ್ರಾಹಕರಿಗೆ ಆಹಾರ ತಲುಪಿಸುವವರಿಗೆ ಕಂಪನಿ ₹200 ಪ್ರೋತ್ಸಾಹಧನ ನೀಡುತ್ತದೆ. ಒಂದೊಂದು ಕಂಪನಿಯ ಪ್ರೋತ್ಸಾಹಧನ ಒಂದೊಂದು ರೀತಿ ಇರುತ್ತದೆ. ಒಂದು ಕಂಪನಿ ವಾರದ ಲೆಕ್ಕದಲ್ಲಿ ಪ್ರೋತ್ಸಾಹಧನ ನೀಡಿದರೆ, ಮತ್ತೊಂದು ಕಂಪನಿ ದಿನದ ಲೆಕ್ಕದಲ್ಲಿ ನೀಡುತ್ತದೆ.

ಬೆಂಗಳೂರಿನ ಸಂಚಾರ ದಟ್ಟಣೆ ನಡುವೆ, ಈ ಪ್ರೋತ್ಸಾಹಧನ ಪಡೆಯಲು ನಿಗದಿಪಡಿಸಿದ ಗುರಿ ತಲುಪುವುದು ಮಾಡುವುದು ಸವಾಲಿನ ಕೆಲಸ. ತರಾತುರಿಯಲ್ಲಿ ಸಾಗುವಾಗ ನಿಯಮ ಉಲ್ಲಂಘಿಸಿ ಸಂಚಾರ ಪೊಲೀಸರ ಕೈಗೆ ಸಿಕ್ಕಿದರೆ ದಿನದ ದುಡಿಮೆಯನ್ನೆಲ್ಲ ದಂಡವಾಗಿ ಪಾವತಿಸಬೇಕಾಗುತ್ತದೆ.

ಎಲ್ಲಾ ಅಡೆತಡೆಗಳನ್ನು ದಾಟಿ ಪ್ರೋತ್ಸಾಹಧನ ಎಂಬ ಮೂಗಿನ ಮೇಲಿನ ತುಪ್ಪವನ್ನು ಎಟಕಿಸುವುದು ಅಷ್ಟು ಸುಲಭವಲ್ಲ. ಎರಡು ವರ್ಷಗಳಲ್ಲಿ ಈ ‘ಡೆಲಿವರಿ ಪಾರ್ಟ್ನರ್‌’ಗಳ ಸಂಖ್ಯೆ ಮೂರರಿಂದ ನಾಲ್ಕು ಪಟ್ಟು ಜಾಸ್ತಿಯಾಗಿದೆ. ಅಷ್ಟೇ ಪ್ರಮಾಣದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿಗೆ ಆಗದಿದ್ದರೆ ಅವರಿಗೆ ಸಿಗುವ ಆದಾಯ ಹಂಚಿ ಹೋಗುತ್ತದೆ. ‘ಕನಿಷ್ಠ 15 ಗ್ರಾಹಕರನ್ನು ತಲುಪುವ ಗುರಿ ಬೆನ್ನತ್ತಿದಾಗ ಎಷ್ಟೋಬಾರಿ 14 ಗ್ರಾಹಕರನ್ನು ಮಾತ್ರ ತಲುಪಲು ಸಾಧ್ಯವಾಗಿದ್ದುಂಟು. ಪ್ರೋತ್ಸಾಹಧನ ಪಡೆಯಲು ಸಾಧ್ಯವಾಗದೆ ನಿರಾಸೆಯಿಂದ ಮನೆಗೆ ಮರಳಿದ ಉದಾಹರಣೆಗಳೂ ಇವೆ’ ಎನ್ನುತ್ತಾರೆ ಈ ಹುಡುಗರು.

ವಾರದ ಲೆಕ್ಕದಲ್ಲಿ ಪ್ರೋತ್ಸಾಹಧನ ನೀಡುವ ಕಂಪನಿಗಳು ವಾರವಿಡೀ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಗಮನಿಸುತ್ತವೆ. ಈ ಉದ್ಯೋಗಕ್ಕೆ ದಟ್ಟಣೆ ಅವಧಿ ಎಂದು ಪರಿಗಣಿಸಿರುವ ಬೆಳಿಗ್ಗೆ 11ರಿಂದ 3 ಮತ್ತು ಸಂಜೆ 7ರಿಂದ ರಾತ್ರಿ 11 ಗಂಟೆಯ ಅವಧಿಯಲ್ಲಿ ಕರ್ತವ್ಯನಿರ್ವಹಿಸಿದ್ದಾರೆಯೇ? ಎಷ್ಟು ಗ್ರಾಹಕರಿಗೆ ಆಹಾರ ತಲುಪಿಸಿದ್ದಾರೆ.... ಎಂಬೆಲ್ಲಾ ಲೆಕ್ಕಾಚಾರ ಮಾಡಿ ಪ್ರೋತ್ಸಾಹಧನ ನೀಡಲಾಗುತ್ತದೆ. ಇನ್ನು ವಾರಾಂತ್ಯದಲ್ಲಿ ಕೆಲಸಕ್ಕೆ ಹಾಜರಾಗದಿದ್ದರಂತೂ ಪ್ರೋತ್ಸಾಹಧನ ಸಿಗುವುದೇ ಇಲ್ಲ.

‘ಈ ಪ್ರೋತ್ಸಾಹಧನದ ಆಸೆಯಿಂದ ರಸ್ತೆಗಳಲ್ಲಿ ಶರವೇಗದಲ್ಲಿ ಸ್ವಿಚಕ್ರ ವಾಹನ ಚಲಾಯಿಸುವ ಇವರು ಅಪಘಾತಕ್ಕೆ ಈಡಾದರೆ ದೇವರೇ ಗತಿ. ದಿನವಿಡೀ ಬೈಕ್ ಓಡಿಸುವ ಇವರ ಬೆನ್ನು ಮೂಳೆ ಅದೆಷ್ಟು ದಿನ ಕೆಲಸದ ಹೊರೆ ತಡೆದುಕೊಳ್ಳಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಕಾರ್ಮಿಕ ಸಂಘಟನೆಗಳ ಮುಖಂಡರು.

ಬೇಕಿದೆ ನೀತಿ, ನಿಯಮ–ನಿಯಂತ್ರಣ

ಇಂಟರ್‌ನೆಟ್ ಯುಗದಲ್ಲಿ ಉದ್ಯೋಗಗಳ ಸ್ವರೂಪ ಸಂಪೂರ್ಣ ಬದಲಾಗಿವೆ. ಈ ಡೆಲಿವರಿ ಪಾರ್ಟನರ್‌ಗಳ ಹೇಗೆ ಕೆಲಸ ಮಾಡುತ್ತಿದ್ದಾರೆ? ಏನೆಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಆಲ್ ಇಂಡಿಯಾ ಯೂತ್ ಡೆಮಾಕ್ರಟಿಕ್ ಆರ್ಗನೈಸೇಷನ್ (ಎಐಡಿವೈಒ) ಅಧ್ಯಯನ ನಡೆಸುತ್ತಿದೆ.

‘ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈ ಕಾರಣಕ್ಕೆ ಆಹಾರ ವಿತರಣೆ ಕಂಪನಿಗಳಲ್ಲಿ ಎಂಜಿನಿಯರಿಂಗ್ ಪದವೀಧರರೂ ಉದ್ಯೋಗಕ್ಕೆ ಸೇರುತ್ತಿದ್ದಾರೆ. ಯಾವ ಗಲ್ಲಿಯಲ್ಲಿ ಹೋದರೂ ಇಂತಹ ಒಬ್ಬರು ಅಥವಾ ಇಬ್ಬರು ಸಿಕ್ಕೇ ಸಿಗುತ್ತಾರೆ. ಈ ಉದ್ಯೋಗವನ್ನೇ ನೆಚ್ಚಿಕೊಂಡು ಸಂಸಾರ ಸಾಗಿಸುತ್ತಿರುವ ಸಾಕಷ್ಟು ಜನರಿದ್ದಾರೆ. ಪೇಔಟ್ ಮತ್ತು ಪ್ರೋತ್ಸಾಹಧನಕ್ಕಾಗಿ ಈ ಹುಡುಗರು ಪಡುವ ಕಷ್ಟ ಅಷ್ಟಿಷ್ಟಲ್ಲ. ಈ ಅಸಹಾಯಕತೆಯನ್ನು ಬಳಸಿ ಅವರ ರಕ್ತ ಹೀರುವ ಕೆಲಸವೂ ನಡೆಯುತ್ತಿದೆ’ ಎನ್ನುತ್ತಾರೆ ಎಐಡಿವೈಒ ಬೆಂಗಳೂರು ಜಿಲ್ಲಾ ಘಟಕದ ಉಪಾಧ್ಯಕ್ಷ ವಿನಯ್ ಸಾರಥಿ.

‘ಶ್ರಮಕ್ಕೆ ತಕ್ಕ ಪ್ರತಿಫಲ, ಸೌಲಭ್ಯ ಸಿಗುತ್ತಿದೆಯೇ ಎಂಬುದನ್ನು ನೋಡಿದರೆ, ಪ್ರಥಮವಾಗಿ ಇವರು ಆ ಕಂಪನಿಗಳ ಉದ್ಯೋಗಿಗಳೇ ಅಲ್ಲ. 'ಡೆಲಿವರಿ ಪಾರ್ಟ್‌ನರ್' ಗಳು ಎಂದು ಪರಿಗಣಿಸಿರುವ ಕಾರಣ ಮಧ್ಯಪ್ರವೇಶಕ್ಕೆ ಕಾರ್ಮಿಕ ಇಲಾಖೆ ಮುಂದೆ ಬರುವುದಿಲ್ಲ. ಕಂಪನಿಗಳ ಉದ್ಯೋಗಿಗಳಾಗಿದ್ದರೆ ಮಾತ್ರ ಕಾರ್ಮಿಕ ಕಾಯ್ದೆಗಳ ಪ್ರಕಾರ ಸೌಲಭ್ಯಗಳನ್ನು ಕೊಡಿಸಬಹುದು’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಐಡಿವೈಒ ಬೆಂಗಳೂರು ಜಿಲ್ಲಾ ಘಟಕದ ಕಾರ್ಯದರ್ಶಿ ಜಯಣ್ಣ.

‘ಸ್ಪೇನ್ ದೇಶದಲ್ಲಿ ನಿಯಮಾವಳಿಗಳನ್ನು ರೂಪಿಸಿ ಇವರನ್ನು ಕಂಪನಿ ಉದ್ಯೋಗಿಗಳೆಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾದಲ್ಲೂ ಈ ಕಾಯಕನಿರತರನ್ನು ಉದ್ಯೋಗಿಗಳೆಂದು ಪರಿಗಣಿಸಬೇಕೆಂಬ ಹೋರಾಟ ನಡೆಯುತ್ತಿದೆ’ ಎಂದು ವಿನಯ್‌ ತಿಳಿಸಿದರು.

‘ನಮ್ಮ ದೇಶದಲ್ಲಿ ಪರಿಸ್ಥಿತಿ ತೀರಾ ಭಿನ್ನ. ಉದ್ಯೋಗ ಭದ್ರತೆಯ ಪ್ರಶ್ನೆಗಳನ್ನು ಎತ್ತುವ ಹುಡುಗರ ಗುರುತಿನ ಸಂಖ್ಯೆಯನ್ನು ತಡೆಹಿಡಿಯಲಾಗುತ್ತದೆ. ಹೀಗಾಗಿ ಯಾರೂ ಪ್ರಶ್ನೆ ಮಾಡುವ ಧೈರ್ಯ ಪ್ರದರ್ಶಿಸುವುದಿಲ್ಲ. ಅವರು ಡೆಲಿವರಿ ಪಾರ್ಟ್‌ನರ್‌ ಎಂಬುದೇ ನಿಜವಾದರೆ, ಅದಕ್ಕೆ ತಕ್ಕ ಸೌಲಭ್ಯಗಳನ್ನೂ ನೀಡಬೇಕು. ಸರ್ಕಾರ ಮಧ್ಯಪ್ರವೇಶ ಮಾಡಿ ಸೂಕ್ತ ನೀತಿ–ನಿಯಮ ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಹೋಟೆಲ್ ಮಾಲೀಕರಿಗೂ ಅನುಕೂಲ

‘ಆಹಾರವನ್ನು ಮನೆ/ಕಚೇರಿ ಬಾಗಿಲಿಗೆ ತಲುಪಿಸುವ ಕಂಪನಿಗಳಿಂದ ನಮಗೆ ಅನುಕೂಲವಾಗಿದೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು.

‘ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಬೇಡಿಕೆ ಜಾಸ್ತಿಯಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆತಿದೆ. ಎಲ್ಲರಿಗೂ ಒಳ್ಳೆಯದೇ ಅಲ್ಲವೇ’ ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್.

‘ನಮ್ಮ ಜೊತೆಗೆ ಗ್ರಾಹಕರಿಗೂ ಹೆಚ್ಚಿನ ಅನುಕೂಲವಾಗಿದೆ. ಕೆಲಸದ ಒತ್ತಡದ ನಡುವೆ ಹೋಟೆಲ್ ಹುಡುಕಿ ಹೋಗುವುದು ತಪ್ಪಿದೆ’ ಎಂದರು.

ಗ್ರಾಹಕರು ಏನಂತಾರೆ...

‘ಸ್ವಿಗ್ಗಿ, ಜೊಮೆಟೊ ಕಂಪನಿಗಳು ಬಂದ ಬಳಿಕ ನಮಗಂತೂ ಅನುಕೂಲವಾಗಿದೆ’ ಎನ್ನುತ್ತಾರೆ ಗ್ರಾಹಕರು.

‘ಹೋಟೆಲ್‌ಗೆ ಹೋಗಿ ಪಾರ್ಸಲ್ ತರಬೇಕೆಂದರೆ ಕನಿಷ್ಠ 1 ಗಂಟೆ ಬೇಕಾಗುತ್ತದೆ. ವಾಹನದಲ್ಲಿ ಹೋದರೆ ಆಗುವ ಇಂಧನದ ವೆಚ್ಚ, ಸಮಯಕ್ಕೆ ಹೋಲಿಸಿದರೆ ಸೇವಾ ಶುಲ್ಕ ದೊಡ್ಡ ಹೊರೆಯಲ್ಲ’ ಎನ್ನುತ್ತಾರೆ ರಾಜಾಜಿನಗರದ ಸುಮಾ.

‘ಫುಡ್ ಡೆಲಿವರಿ ಹುಡುಗರ ವೇತನ ಅಥವಾ ಇತರ ಸೌಲಭ್ಯದ ಬಗ್ಗೆ ಗೊತ್ತಿಲ್ಲ. ಆದರೆ, ಗ್ರಾಹಕರಾಗಿ ನಮಗಂತೂ ಅನುಕೂಲವಾಗಿದೆ’ ಎನ್ನುತ್ತಾರೆ ಅವರು.

‘ಶ್ರಮಕ್ಕೆ ತಕ್ಕ ಪ್ರತಿಫಲ’

ಡೆಲಿವರಿ ‌ಪಾರ್ಟ್‌ನರ್ ಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತಿದ್ದೇವೆ ಎಂದು ಸ್ವಿಗ್ಗಿ ಕಂಪನಿ ಸ್ಪಷ್ಟಪಡಿಸಿದೆ.

'ಪ್ರತಿ ಆರ್ಡರ್ ಗೆ ನಿಗದಿತ ಹಣ ಪಾವತಿಸಲಾಗುತ್ತಿದೆ. ಉತ್ತಮ ಕೆಲಸಗಾರರಿಗೆ ಉತ್ತೇಜನ ನೀಡಲು ಪ್ರೋತ್ಸಾಹಧನ ನೀಡಲಾಗುತ್ತಿದೆ. ಅಪಘಾತ ವಿಮೆ, ಜೀವವಿಮೆ, ಅವರು ಮತ್ತು ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬ್ಯಾಂಕ್‌ಗಳ ಸಹಯೋಗದಲ್ಲಿ ಸಾಲ ಸೌಲಭ್ಯ, ಉತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ಮಾಸಿಕ ಬಹುಮಾನಗಳನ್ನು ನೀಡಲಾಗುತ್ತದೆ' ಎಂದು ಕಂಪನಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ಪ್ರತಿಕ್ರಿಯಿಸಿ: 9513322930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT