ಬುಧವಾರ, ಅಕ್ಟೋಬರ್ 23, 2019
25 °C
ಸಾರ್ವಜನಿಕರು ಓಡಾಡುವ ಜಾಗದಲ್ಲಿ ಪಾನಿಪೂರಿ ಅಂಗಡಿ, ಎಳನೀರು, ಪಾತ್ರೆಗಳ ರಾಶಿ

ಫುಟ್‌ಪಾತ್‌ ಒತ್ತುವರಿ; ಪಾದಚಾರಿಗಳಿಗೆ ಸಂಕಷ್ಟ

Published:
Updated:
Prajavani

ಹಾಸನ: ನಗರದ ಹಲವೆಡೆ ಪಾದಚಾರಿ ಮಾರ್ಗಗಳನ್ನು ಅಂಗಡಿ ಮಾಲೀಕರು, ಬೀದಿ ಬದಿ ವ್ಯಾಪಾರಸ್ಥರು, ದ್ವಿಚಕ್ರ ವಾಹನ ಸವಾರರು ಒತ್ತುವರಿ ಮಾಡಿರುವುದರಿಂದ ಪಾದಚಾರಿಗಳಿಗೆ ತೊಂದರೆ ಆಗಿದೆ.

ನಗರದ ಆರ್‌.ಸಿ ರಸ್ತೆ, ಗಂಧದಕೋಠಿಯ ಹೈಸ್ಕೂಲ್‌ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ ರಸ್ತೆ, ಬಸ್‌ ನಿಲ್ದಾಣ ಎದುರು ರಸ್ತೆ, ಹೀಗೆ ಹಲವು ಜನನಿಬಿಡ ಪ್ರದೇಶಗಳಲ್ಲಿ ಫುಟ್‌ಪಾತ್‌ಗಳನ್ನು ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ.

ಪೆನ್ಷನ್‌ ಮೊಹಲ್ಲಾ ಪೊಲೀಸ್‌ ಠಾಣೆ ರಸ್ತೆ, ಸಂತೇಪೇಟೆ, ಸಹ್ಯಾದ್ರಿ ರೋಡ್‌, ಬಸವೇಶ್ವರ ಕಲ್ಯಾಣ ಮಂಟಪ, ವಿದ್ಯಾನಗರ, ಎಂ.ಜಿ. ರೋಡ್‌ಗಳು ಜನನಿಬಿಡವಾಗಿವೆ. ಬಿ.ಎಂ. ರಸ್ತೆ, ಗಾಂಧಿ ಬಜಾರ್‌ನಲ್ಲಿ ವ್ಯಾಪಾರಸ್ಥರು ತಮ್ಮ ಸರಕುಗಳನ್ನು ಫುಟ್‌ಪಾತ್‌ನಲ್ಲೇ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ.  ಇದನ್ನು ಪ್ರಶ್ನಿಸಿದ ನಾಗರಿಕರನ್ನೇ ಏರು ದನಿಯಲ್ಲಿ ದಬಾಯಿಸುತ್ತಾರೆ.  ಬಿಗ್‌ ಬಜಾರ್‌ ಮುಂಭಾಗ, ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ. 

ಮಹಾವೀರ ವೃತ್ತದಿಂದ ಸುಭಾಷ್‌ ವೃತ್ತದವರೆಗೆ (ಕಟ್ಟಿನಕೆರೆ ಮಾರುಕಟ್ಟೆ) ಬೆಳಗಿನಿಂದ ರಾತ್ರಿವರೆಗೂ ಸಂಚಾರಕ್ಕೆ ತೀವ್ರ ಅಡಚಣೆಯಾಗುವಂತೆ ತರಕಾರಿ, ಹೂವು, ಹಣ್ಣು, ವ್ಯಾಪಾರಿ, ತಳ್ಳು ಗಾಡಿಯವರು ರಸ್ತೆಯನ್ನು ಯಾರ ಮುಲಾಜಿಲ್ಲದೆ ಅಕ್ರಮಿಸಿಕೊಂಡಿದ್ದಾರೆ.

ಗಂಧದಕೋಠಿ ಬಳಿಯ ಹೈಸ್ಕೂಲ್‌ ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ತಿಂಡಿ ಗಾಡಿ, ದೋಸೆ, ಬಿರಿಯಾನಿ ಕಾರ್ನರ್, ಪಾನಿಪೂರಿ ಅಂಗಡಿಗಳು ತಲೆ ಎತ್ತಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಹಳೆ ಬಸ್‌ ನಿಲ್ದಾಣ ರಸ್ತೆಯಲ್ಲೂ ಫುಟ್‌ಪಾತ್‌ ಆವರಿಸಿಕೊಳ್ಳಲಾಗಿದೆ. ಕಸ್ತೂರ ಬಾ ರೋಡ್‌, ಎನ್‌.ಆರ್‌.ಸರ್ಕಲ್‌ನಿಂದ ಗಾಂಧಿ ಬಜಾರ್‌ ವರೆಗೆ ಮೊಬೈಲ್‌ ಅಂಗಡಿಗಳ ಮುಂದೆ ಆಫರ್‌ ಬೋರ್ಡ್‌ ಹಾಕಲಾಗಿದೆ. ಹಲವರು ಎಳನೀರು, ಪಾನಿಪೂರಿ ವ್ಯಾಪಾರ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ.

ಇದೇ ರಸ್ತೆಯಲ್ಲಿ ಸಾರ್ವಜನಿಕರು, ಸಾವಿರಾರು ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಿ ಬರುವುದು. ಆದರೆ, ಪಾದಚಾರಿ ಮಾರ್ಗ ಅತಿಕ್ರಮಣದಿಂದಾಗಿ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ಹಿರಿಯರು ಅನಿವಾರ್ಯವಾಗಿ ರಸ್ತೆಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೊಂದೆಡೆ ವಾಹನ ಸವಾರರು ವಾಹನಗಳನ್ನು ಪಾದಚಾರಿ ಮಾರ್ಗದ ಮೇಲೆಯೇ ನಿಲ್ಲಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಪೊಲೀಸರು, ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಮನವಿ ಮಾಡಿದರು ಕ್ರಮಕೈಗೊಂಡಿಲ್ಲ.

ನಗರದ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಪಾದಚಾರಿ ಮಾರ್ಗ ಮತ್ತು ರಸ್ತೆಯ ಆಕ್ರಮಣದಿಂದಾಗಿ ನಿತ್ಯವೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು, ವೃದ್ಧರು, ಅಂಗವಿಕಲರು, ಮಹಿಳೆಯರು, ಮಕ್ಕಳು ಓಡಾಡಲು ಸಮಸ್ಯೆ ಆಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಸಾರ್ವಜನಿರಿಗೆ ತೊಂದರೆ ಆಗದಂತೆ ವ್ಯಾಪಾರ ಮಾಡುವಂತೆ ನಗರಸಭೆ ಅರಿವು ಮೂಡಿಸಿದೆ. ಜಾಗದ ಕೊರತೆ, ವ್ಯಾಪಾರ ನಷ್ಟ ಹೀಗೆ ವಿವಿಧ ಕಾರಣಗಳ ನೆಪವೊಡ್ಡಿ ಪಾದಚಾರಿ ಮಾರ್ಗದಲ್ಲಿಯೇ ವ್ಯಾಪಾರ ನಡೆಸಲಾಗುತ್ತಿದೆ.

‘ಹಾಸನದ ಕಟ್ಟಿನ ಕೆರೆ ಮಾರುಕಟ್ಟೆ ಹಾಗೂ ಹೈಸ್ಕೂಲ್‌ ರಸ್ತೆಯ ತಿಂಡಿ ಗಾಡಿಯವರಿಗೆ ತಾಲ್ಲೂಕು ಕಚೇರಿಯ ಹಿಂಭಾಗದ ರಸ್ತೆ ಎಡ ಮತ್ತು ಬಲ ಬದಿಗಳಲ್ಲಿ ಅನುಕೂಲ ಮಾಡಿಕೊಡಬೇಕು. ಇದರಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಬಹುದು’ ಎಂದು ನಿವಾಸಿ ಧನಂಜಯ ಜೀವಾಳ ಸಲಹೆ ನೀಡಿದ್ದಾರೆ

‘ನಾಗರಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡುವಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲರಿಗೂ ಗುರುತಿನ ಚೀಟಿ ನೀಡಿ ಅರಿವು ಮೂಡಿಸಲಾಗಿದೆ. ನಿಯಮ ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೂ ತಿಳಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ತಿಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)