ಆರೋಪ ಹೊತ್ತ ಅಧಿಕಾರಿಗೆ ತನಿಖೆ ಹೊಣೆ!

ಬುಧವಾರ, ಜೂನ್ 19, 2019
26 °C
ಅರಣ್ಯ ಇಲಾಖೆ: ಶಂಕೆಗೆ ಕಾರಣವಾದ ಹಿರಿಯ ಅಧಿಕಾರಿಗಳ ನಡೆ l 2–3 ದಿನಗಳಲ್ಲಿ ನೇಮಕದ ಆದೇಶ ಸಾಧ್ಯತೆ

ಆರೋಪ ಹೊತ್ತ ಅಧಿಕಾರಿಗೆ ತನಿಖೆ ಹೊಣೆ!

Published:
Updated:

ಬೆಂಗಳೂರು: ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ ಅರಣ್ಯಾಧಿಕಾರಿಗೆ ಅರಣ್ಯ ಸಂಚಾರಿ ದಳದ ಮುಖ್ಯಸ್ಥ ಹುದ್ದೆ ನೀಡಲು ಅರಣ್ಯ ಇಲಾಖೆಯಲ್ಲಿ ಸಿದ್ಧತೆ ನಡೆದಿದೆ. ಇದಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಪ್ರಸ್ತುತ ಸಹಾಯಕ ಅರಣ್ಯಾಧಿಕಾರಿ ಆಗಿರುವ ಜಿ.ಎ. ಗಂಗಾಧರ್‌ ಅವರನ್ನು ಬೆಂಗಳೂರು ಅರಣ್ಯ ಸಂಚಾರಿ ದಳದ ಮುಖ್ಯಸ್ಥರಾಗಿ ನೇಮಕ ಮಾಡಲು (ಕಡತ ಸಂಖ್ಯೆ 46 ಎಫ್‌ಇಜಿ 2019) ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕಡತ ಸಲ್ಲಿಸಲಾಗಿದೆ. 2–3 ದಿನಗಳಲ್ಲಿ ನೇಮಕದ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಗಂಗಾಧರ್‌ ಅವರು ಈ ಹಿಂದೆ ಕೋಲಾರ ವಲಯದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದರು. ಕೋಲಾರ ವಲಯದ ಅಂತರಗಂಗೆ ಕಾಯ್ದಿಟ್ಟ ಅರಣ್ಯ ಪ್ರದೇ ಶದಲ್ಲಿ ನೆಡುತೋಪು ಬೆಳೆಸುವ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿ ದ್ದಾರೆ ಎಂಬ ಆರೋಪ ಅವರ ಮೇಲಿದೆ. ಈ ಪ್ರಕರಣದ ತನಿಖೆ ಯನ್ನು ಬೆಂಗಳೂರು ಅರಣ್ಯ ಸಂಚಾರಿ ದಳವೇ ಮಾಡುತ್ತಿದೆ. ದಳದ ಮುಖ್ಯಸ್ಥರನ್ನಾಗಿ ಗಂಗಾಧರ್‌ ಅವರನ್ನು ನೇಮಕ ಮಾಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ 2002 ರಲ್ಲಿ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂಕೋರ್ಟ್‌ ಪೀಠ 2017ರಲ್ಲಿ ರದ್ದುಪಡಿಸಿತ್ತು.  ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜಿ.ಎ. ಗಂಗಾಧರ್ ಸೇರಿದಂತೆ 15 ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೃಂದಕ್ಕೆ ಹಿಂಬಡ್ತಿಗೊಳಿಸಿ 2018ರ ಏಪ್ರಿಲ್‌ನಲ್ಲಿ ಆದೇಶ ಹೊರಡಿಸಿತ್ತು.

ಹಿಂಬಡ್ತಿಗೆ ಗುರಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಸಮಾನಾಂತರ ಹುದ್ದೆ ಕಲ್ಪಿಸಿ ನ್ಯಾಯ ಕೊಡಿಸುವ ಬಡ್ತಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಮೇನಲ್ಲಿ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನೌಕರರನ್ನು ಹಿಂಬಡ್ತಿಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಮೇ 15ರಂದು ಹಿಂಪಡೆದಿದೆ. ಹಿಂಬಡ್ತಿ ಹೊಂದಿರುವ ಅರಣ್ಯ ಅಧಿಕಾರಿಗಳಿಗೆ ಬಡ್ತಿ ನೀಡಿ ಹುದ್ದೆ ತೋರಿಸಬೇಕಿದೆ. ಇದೀಗ ಗಂಗಾಧರ್ ಅವರಿಗೆ ಮಾತ್ರ ಹುದ್ದೆ ನೀಡಲು ಇಲಾಖೆ ಮುಂದಾಗಿದೆ ಎಂಬ ಆರೋಪವೂ ಇದೆ.

‘ಹಿಂಬಡ್ತಿ ಹೊಂದಿದವರಿಗೆ ಬಡ್ತಿ ನೀಡಿ ಹುದ್ದೆ ನೀಡಿ ಎಂದು ಸು‍ಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ, ಇಂತಹುದೇ ನಿರ್ದಿಷ್ಟ ಹುದ್ದೆ ನೀಡಿ ಎಂದು ಸೂಚಿಸಿಲ್ಲ. ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಸಾಮಾನ್ಯವಾಗಿ ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆ ನೀಡಲಾಗುತ್ತಿದೆ. ಆದರೆ, ಈ ಪ್ರಕರಣದಲ್ಲಿ ಕೆಲವು ಅಧಿಕಾರಿಗಳು ಅರಣ್ಯ ಸಚಿವರಿಗೆ ತಪ್ಪು ಮಾಹಿತಿ ನೀಡಿ ಗಂಗಾಧರ್‌ ಅವರಿಗೆ ಪ್ರಮುಖ ಹುದ್ದೆ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ನೆಡುತೋಪು ಕಾಮಗಾರಿಯ ₹5 ಕೋಟಿ ಹಣ ದುರುಪಯೋಗಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸಂಬಂಧ ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಇಲಾಖೆಯ ‍ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದರು. ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗದೀಶ್‌ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎ ಗಂಗಾಧರ್ ಸಮ್ಮುಖದಲ್ಲೇ ಸ್ಥಳ ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿತ್ತು.

ಈ ವರ್ಷದ ಏಪ್ರಿಲ್‌ 24ರಂದು ನಡೆಯುವ ಸ್ಥಳ ತನಿಖೆ ವೇಳೆ ಹಾಜರಿರುವಂತೆ ಇಬ್ಬರೂ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಸ್ಥಳ ತನಿಖೆ ವೇಳೆ ಜಗದೀಶ್‌ ಗೈರುಹಾಜರಾಗಿದ್ದರು. ‘ಈ ಹಗರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ’ ಎಂದು ಗಂಗಾಧರ್‌ ಅಳಲು ತೋಡಿಕೊಂಡಿದ್ದರು. ಪರಿಷ್ಕೃತ ವಾರ್ಷಿಕ ಕ್ರಿಯಾಯೋಜನೆ ಹಾಗೂ ಮಂಜೂರಾದ ಅಂದಾಜುಪಟ್ಟಿ ಪ್ರಕಾರ, ಕಾಮಗಾರಿ ಹಾಗೂ ಕತ್ತಾಳೆ ನೆಡುವ ಕಾಮಗಾರಿ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಈ ವರದಿಯನ್ನು ಏಪ್ರಿಲ್‌ ಅಂತ್ಯದಲ್ಲೇ ಪ್ರಧಾನ ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕಿತ್ತು. ಆದರೆ, ಕೆಲವು ಅಧಿಕಾರಿಗಳ ಒತ್ತಡದ ಕಾರಣಕ್ಕೆ ವರದಿ ಸಲ್ಲಿಕೆಗೆ ವಿಳಂಬ ಮಾಡಲಾಗುತ್ತಿದೆ. ಅಲ್ಲದೆ, ಈ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ’ ಎಂದು ಮೂಲಗಳು ಹೇಳಿವೆ.

89,758 ಗುಂಡಿಗಳ ಬದಲು 6,530 ಗುಂಡಿಗಳು!

14 ಕಡೆಗಳಲ್ಲಿ ನೆಡುತೋ‍ಪು ಕಾಮಗಾರಿಗಳನ್ನು ಮಾಡಲಾಗಿತ್ತು. ತನಿಖಾ ತಂಡವು ನಾಲ್ಕು ಕಡೆಗಳಲ್ಲಿ ಸ್ಥಳ ತನಿಖೆ ನಡೆಸಿತ್ತು. ಐದು ಜಾಗಗಳಲ್ಲಿ 89,758 ಗುಂಡಿಗಳು ಇರಬೇಕಿತ್ತು. ಆದರೆ, 6,530 ಗುಂಡಿಗಳು ಮಾತ್ರ ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಹೊಗರಿಗೊಲ್ಲಹಳ್ಳಿ ಪ್ರದೇಶದಲ್ಲಿ 13,760 ಗುಂಡಿಗಳು ಇರಬೇಕಿತ್ತು. ಆದರೆ, 1,836 ಗುಂಡಿಗಳಷ್ಟೇ ಇವೆ. ಮಡೇರಹಳ್ಳಿ ಪ್ರದೇಶದಲ್ಲಿ 32,976 ಗುಂಡಿಗಳ ಬದಲು 3,664 ಗುಂಡಿಗಳಷ್ಟೇ ಇವೆ. ಚೌಡದೇನಹಳ್ಳಿಯಲ್ಲಿ 27,280 ಗುಂಡಿಗಳು ಇರಬೇಕಿತ್ತು. 1,030 ಗುಂಡಿಗಳು ಮಾತ್ರ ಇವೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

**

ಗಂಗಾಧರ್‌ ಆರೋಪ ಎದುರಿಸುತ್ತಿದ್ದರೆ ಅವರನ್ನು ಸಂಚಾರಿ ದಳದ ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಿಲ್ಲ. ಹಿರಿಯ ಅಧಿಕಾರಿಗಳಿಂದ ವರದಿ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
- ಸತೀಶ ಜಾರಕಿಹೊಳಿ, ಅರಣ್ಯ ಸಚಿವ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !