ಗುರುವಾರ , ನವೆಂಬರ್ 14, 2019
22 °C

ಅರಣ್ಯ ಇಲಾಖೆ: ಮುಂಬಡ್ತಿ ಸಮಿತಿಸಭೆ ರದ್ದು

Published:
Updated:

ಬೆಂಗಳೂರು: 88 ವಲಯ ಅರಣ್ಯಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್‌) ಬಡ್ತಿ ನೀಡಲು ಅರಣ್ಯ ಇಲಾಖೆ ಕರೆದಿದ್ದ ಮುಂಬಡ್ತಿ ಸಮಿತಿ ಸಭೆಯನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಲಾಗಿದೆ.

ಬಡ್ತಿ ಮೀಸಲಾತಿ ಕಾಯ್ದೆ ಪ್ರಕಾರ ಅಂತಿಮ ಜ್ಯೇಷ್ಠತಾ ಪಟ್ಟಿ ಪ‍್ರಕಟಿಸುವ ಮುನ್ನವೇ, ವಲಯ ಅರಣ್ಯಾಧಿಕಾರಿ ವೃಂದದಿಂದ 55 ಮಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ವೃಂದಕ್ಕೆ ಹಾಗೂ 33 ಮಂದಿಗೆ ಎಸಿಎಫ್‌ ವೃಂದದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವೃಂದಕ್ಕೆ ಬಡ್ತಿ ನೀಡಲು ಪ್ರಕ್ರಿಯೆ ಆರಂಭಿಸಲಾಗಿತ್ತು. ಸಮಿತಿ ಸಭೆ ಶುಕ್ರವಾರಕ್ಕೆ ನಿಗದಿಯಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

‘ಕೆಲವು ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಸಭೆ ನಿಗದಿಪಡಿಸಿದ್ದರು. ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ಮುನ್ನ ಸಭೆ ನಡೆಸುವುದು ಸರಿಯಲ್ಲ. ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ ಸೂಚಿಸಿದರು’ ಎಂದು ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)