‘ಕರಕುಶಲ’ದ ₹ 15 ಕೋಟಿ ದುರುಪಯೋಗ?

ಶುಕ್ರವಾರ, ಏಪ್ರಿಲ್ 19, 2019
30 °C

‘ಕರಕುಶಲ’ದ ₹ 15 ಕೋಟಿ ದುರುಪಯೋಗ?

Published:
Updated:

ಬೆಂಗಳೂರು: ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ₹ 15 ಕೋಟಿ ನಷ್ಟ ಉಂಟು ಮಾಡಿದ ಆರೋಪದಡಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಎಸ್‌ಎಚ್‌ಡಿಸಿ) ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ಜಿ.ಸಿ.ಕಿಶೋರ್ ಕುಮಾರ್ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಸಂಬಂಧ ನಿಗಮದ ಆಡಳಿತ ವಿಭಾಗದ ಪ್ರಧಾನ ವ್ಯವಸ್ಥಾಪಕ ನಾರಾಯಣ್ ಕೆ.ನಾಯಕ್ ಸೋಮವಾರ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಕಿಶೋರ್ ಅವರು ಕೆಲ ಬ್ಯಾಂಕ್ ಅಧಿಕಾರಿಗಳ ಜತೆ ಶಾಮೀಲಾಗಿ, ‘ಎಂ.ಡಿ.ಕರ್ನಾಟಕ ಸ್ಟೇಟ್ ಹ್ಯಾಂಡಿಕ್ರಾಫ್ಟ್ಸ್‌ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್’ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದರು. ಅದರಲ್ಲಿ ವಹಿವಾಟು ನಡೆಸಿ 2016ರ ಡಿ.17 ರಿಂದ 2018ರ ಸೆ.17ರವರೆಗೆ ಸುಮಾರು ₹ 15 ಕೋಟಿಯನ್ನು ದುರುಪಯೋಗ ಮಾಡಿಕೊಂಡಿದ್ದರು. ಇತ್ತೀಚೆಗೆ ಲೆಕ್ಕಪರಿಶೋಧನೆ ಮಾಡಿದಾಗ ಈ ಅಕ್ರಮ ಬಹಿರಂಗವಾಯಿತು’ ಎಂದು ಆರೋಪಿಸಿದ್ದಾರೆ.

‘ನಿಗಮಕ್ಕೆ ಮೋಸ ಮಾಡುವ ಉದ್ದೇಶದಿಂದಲೇ, ಎಲ್ಲರೂ ಒಟ್ಟಾಗಿ ಈ ಕೃತ್ಯ ಎಸಗಿದ್ದಾರೆ. ಹೀಗಾಗಿ, ಕಿಶೋರ್ ಮಾತ್ರವಲ್ಲದೆ, ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ನಂಬಿಕೆ ದ್ರೋಹ (ಐಪಿಸಿ 406,409), ವಂಚನೆ (420), ನಕಲಿ ದಾಖಲೆ ಸೃಷ್ಟಿ (468) ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಂಚನೆ ಸಂಬಂಧ ನಿಗಮದ ಅಧಿಕಾರಿಗಳೂ ಆಂತರಿಕ ತನಿಖೆ ನಡೆಸಿದ್ದು, ಅದರ ವರದಿಯನ್ನೂ ಕೇಳಿದ್ದೇವೆ. ವಿಚಾರಣೆಗೆ ಬರುವಂತೆ ಕಿಶೋರ್ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಅಶೋಕನಗರ ಪೊಲೀಸರು ತಿಳಿಸಿದರು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !