ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲೇ ಶೌಚಾಲಯ, ಗಲೀಜಿನಲ್ಲೇ ಧರಣಿ...

ಸ್ವಾತಂತ್ರ್ಯ ಉದ್ಯಾನದ ಪ್ರತಿಭಟನಾ ಸ್ಥಳದಲ್ಲಿ ಮೂಲಸೌಕರ್ಯ ಕೊರತೆ * ಹೋರಾಟಗಾರರ ಮನವಿಗೆ ಸ್ಪಂದಿಸದ ಬಿಬಿಎಂಪಿ
Last Updated 8 ಮಾರ್ಚ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದು, ಪ್ರತಿಭಟನೆ ಮಾಡುವ ಹೋರಾಟಗಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಉದ್ಯಾನದಲ್ಲಿ ನಿತ್ಯ ಒಂದಿಲ್ಲೊಂದು ಪ್ರತಿಭಟನೆ ನಡೆಯುತ್ತಿರುತ್ತದೆ.ಹೊರ ಜಿಲ್ಲೆಗಳಿಂದ ಬರುವ ಪ್ರತಿಭಟನಾಕಾರರು, ಉದ್ಯಾನದಲ್ಲೇ ಪೆಂಡಾಲ್‌ ಹಾಕಿಕೊಂಡು ಮುಷ್ಕರ ನಡೆಸುತ್ತಾರೆ. ಪ್ರತಿಭಟನಾ ಸ್ಥಳವು ಶೌಚಾಲಯ, ಕುಡಿಯುವ ನೀರು ಸೇರಿ ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಪ್ರತಿಭಟನಾಕಾರರು, ಬಯಲನ್ನೇ ಶೌಚಾಲಯವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಗಲೀಜು ವಾತಾವರಣದಲ್ಲೇ ಧರಣಿ ನಡೆಸಬೇಕಾದ ಅನಿವಾರ್ಯ ಇಲ್ಲಿದೆ.

‘ಪ್ರತಿಭಟನೆ ನಮ್ಮ ಹಕ್ಕು. ಉದ್ಯಾನದ ಮೀಸಲು ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ. ಮೂಲಸೌಕರ್ಯ ಒದಗಿಸಿ ಎಂದು ಒತ್ತಾಯಿಸಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಇದಕ್ಕೆ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ’ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ಉದ್ಯಾನದ 5 ಎಕರೆ ಜಾಗವನ್ನು ಪ್ರತಿಭಟನೆಗೆಂದು ಮೀಸಲಿಡಲಾಗಿತ್ತು. ಆದರೆ ಈಗ ಅರ್ಧ ಎಕರೆ ಜಾಗದಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುತ್ತಿದೆ. ಉಳಿದ ಜಾಗವನ್ನು ಅನ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಈ ಬಗ್ಗೆಯೂ ಹೋರಾಟಗಾರರಲ್ಲಿ ಅಸಮಾಧಾನವಿದೆ.

ಮಹಿಳೆಯರ ಕಷ್ಟ ಹೇಳತೀರದು: ‘ಉದ್ಯಾನದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಸೌಕರ್ಯಗಳ ಕೊರತೆಯಿಂದಾಗಿ ಅವರ ಪಾಡು ಹೇಳತೀರದು’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಅಳಲು ತೋಡಿಕೊಂಡರು.

‘ಅಂಗನವಾಡಿ ಹಾಗೂ ಶಾಲೆಗಳ ಬಿಸಿಯೂಟ ಯೋಜನೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ತಮಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಅವರೆಲ್ಲ ವರ್ಷದಲ್ಲಿ ಅನೇಕ ಬಾರಿ ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡಲೇಬೇಕಾದ ಸ್ಥಿತಿ ಇದೆ. ಪ್ರತಿಭಟನಾ ಸ್ಥಳದಲ್ಲಿ ಶೌಚಾಲಯ ಇಲ್ಲದಿದ್ದರಿಂದ ಅವರೆಲ್ಲ ಯಾತನೆ ಅನುಭವಿಸುತ್ತಿದ್ದಾರೆ’ ಎಂದರು.

‘ಪ್ರತಿಭಟನೆ ನಮ್ಮೆಲ್ಲರ ಮೂಲಭೂತ ಹಕ್ಕು. ಇದಕ್ಕೆ ಸ್ಥಳ ಒದಗಿಸುವುದು ಹಾಗೂ ಅಲ್ಲಿ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಇದುವರೆಗೆ ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿಲ್ಲ.ಹೋರಾಟಗಳ ಸತ್ವ ಮುರಿಯುವುದಕ್ಕಾಗಿ ಸರ್ಕಾರ ಈ ರೀತಿಯ ತಂತ್ರ ಅನುಸರಿಸುತ್ತಿರುವಂತೆ ಕಾಣುತ್ತಿದೆ’ ಎಂದು ಅವರು ಸಂದೇಹ ವ್ಯಕ್ತಪಡಿಸಿದರು.

‘ಉದ್ಯಾನದೊಳಗೆ ಶೌಚಾಲಯವಿದೆ. ಮಹಿಳೆಯರ ಸಂಖ್ಯೆ ಹೆಚ್ಚಿದ್ದಾಗ ಅಲ್ಲಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಹೀಗಾಗಿ, ಪ್ರತಿಭಟನಾ ಸ್ಥಳದಲ್ಲಿ ಶೌಚಾಲಯದ ವ್ಯವಸ್ಥೆ ಮಾಡಬೇಕು. ಸ್ವಚ್ಛತೆ ಕಾಪಾಡಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ರಸ್ತೆಯಲ್ಲಿ ಮಲಗಿ ಹೋರಾಟ: ‘ಪ್ರತಿಭಟನಾ ಸ್ಥಳದಲ್ಲಿ ಸೌಕರ್ಯಗಳು ಇಲ್ಲದಿದ್ದರಿಂದ, ಉದ್ಯಾನ ಪಕ್ಕದ ಕಾಳಿದಾಸ ಹಾಗೂ ಶೇಷಾದ್ರಿ ರಸ್ತೆಯಲ್ಲೇ ಮಲಗಿ ಹೋರಾಟ ಮಾಡಿದ್ದೇವೆ’ ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

‘ಹಲವು ವರ್ಷಗಳ ಹಿಂದೆ ಕಬ್ಬನ್‌ ಉದ್ಯಾನದಲ್ಲಿ ಪ್ರತಿಭಟನೆ ಮಾಡಲು ಅವಕಾಶವಿತ್ತು. ವಾಯುವಿಹಾರಿಗಳಿಗೆ ತೊಂದರೆ ಆಗುವ ಕಾರಣ ನೀಡಿ ಹೈಕೋರ್ಟ್‌, ಉದ್ಯಾನದಲ್ಲಿ ಪ್ರತಿಭಟನೆ ಮಾಡುವುದನ್ನು ನಿಷೇಧಿಸಿತ್ತು. ಆ ನಂತರ, ಪ್ರತಿಭಟನೆಗಳು ಬನ್ನಪ್ಪ ಹಾಗೂ ಸ್ವಾತಂತ್ರ್ಯ ಉದ್ಯಾನಕ್ಕೆ ಸ್ಥಳಾಂತರಗೊಂಡವು.’

‘ಬನ್ನಪ್ಪ ಉದ್ಯಾನ ಒತ್ತುವರಿ ಆಗಿದೆ. ಈಗ ಉಳಿದಿರುವುದು ಸ್ವಾತಂತ್ರ್ಯ ಉದ್ಯಾನ ಮಾತ್ರ. ಈ ಉದ್ಯಾನದಲ್ಲೂ ಅಲ್ಪ ಜಾಗವನ್ನು ಮಾತ್ರ ಪ್ರತಿಭಟನೆಗೆ ಮೀಸಲಿಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೂ ಪ್ರತ್ಯೇಕ ಜಾಗ ಬೇಕು ಎಂಬುದನ್ನು ಸರ್ಕಾರ ಮನಗಾಣಬೇಕು’ ಎಂದರು.

‘ಪ್ರತಿಭಟನೆ ಮಾಡುವಾಗ ಪೊಲೀಸರೇ ಕುಡಿಯಲು ನೀರು ತರಿಸಿಕೊಡುತ್ತಾರೆ. ಇಲ್ಲದಿದ್ದರೆ, ನಾವೇ ಹಣ ಕೊಟ್ಟು ಜಲಮಂಡಳಿಯಿಂದ ಟ್ಯಾಂಕರ್‌ನಿಂದ ನೀರು ಪಡೆಯುತ್ತೇವೆ’ ಎಂದರು.

ಶೌಚಾಲಯ ನಿರ್ಮಾಣಕ್ಕೆ ಚಿಂತನೆ

‘ಪ್ರತಿಭಟನಾ ಸ್ಥಳಕ್ಕೆ ಹೊಂದಿಕೊಂಡೇ ಹಣ ಪಾವತಿಸಿ ಬಳಸುವ ಶೌಚಾಲಯ ನಿರ್ಮಿಸುವ ಚಿಂತನೆ ಇದೆ’ ಎಂದು ಸ್ವಾತಂತ್ರ್ಯ ಉದ್ಯಾನದ ಕ್ಯುರೇಟರ್ ಸೋಮಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಭಟನೆಗೆ ಬರುವವರಿಗೆ ಉದ್ಯಾನದ ಶೌಚಾಲಯಕ್ಕೆ ಹೋಗಲು ಅವಕಾಶ ನೀಡುತ್ತೇವೆ. ಅವರ ಸಂಖ್ಯೆ ಹೆಚ್ಚಿದ್ದರಿಂದ ತಾತ್ಕಾಲಿಕ ಶೌಚಾಲಯಗಳನ್ನು ತರಿಸುತ್ತೇವೆ. ನೀರಿನ ವ್ಯವಸ್ಥೆಯನ್ನೂ ಮಾಡುತ್ತೇವೆ’ ಎಂದು ಹೇಳಿದರು.

‘ಪೊಲೀಸರಿಗೂ ಇಲ್ಲ ವ್ಯವಸ್ಥೆ’

ಪ್ರತಿಭಟನೆಯ ಭದ್ರತೆಗಾಗಿ ನೂರಾರು ಪೊಲೀಸರನ್ನು ನಿಯೋಜಿಸಲಾಗುತ್ತದೆ. ಪಶ್ಚಿಮ ವಿಭಾಗದ ಪೊಲೀಸರ ಜೊತೆಗೆ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸಹ ಇರುತ್ತಾರೆ. ಇವರಿಗೂ ಸಹ ಶೌಚಾಲಯದ ವ್ಯವಸ್ಥೆ ಇಲ್ಲ.

‘ಬೆಳಿಗ್ಗೆಯಿಂದ ಸಂಜೆಯವರೆಗೂ ಭದ್ರತೆ ಕೆಲಸ ಮಾಡುತ್ತೇವೆ. ಮಲ ಹಾಗೂ ಮೂತ್ರ ವಿಸರ್ಜನೆಗೆ ಹೋಗಬೇಕಾದರೆ ಪ್ರತಿಭಟನಾ ಸ್ಥಳದಿಂದ ದೂರವಿರುವ ಶೇಷಾದ್ರಿ ಮೇಲ್ಸೇತುವೆ ಬಳಿ ಇರುವ ಹಣ ಪಾವತಿಸಿ ಬಳಸುವ ಶೌಚಾಲಯಕ್ಕೆ ಅಥವಾ ಉದ್ಯಾನದೊಳಗಿನ ಶೌಚಾಲಯಕ್ಕೆ ಹೋಗಬೇಕು’ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರು ಸಮಸ್ಯೆ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT