ಇವರಿಗೆ ₹478 ಕೋಟಿ; ಅವರಿಗೆ ₹128 ಕೋಟಿ

7
‘ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ’ * ಜೆಡಿಎಸ್–ಬಿಜೆಪಿ ಕ್ಷೇತ್ರಗಳಿಗೆ ಅನುದಾನ ತಾರತಮ್ಯ

ಇವರಿಗೆ ₹478 ಕೋಟಿ; ಅವರಿಗೆ ₹128 ಕೋಟಿ

Published:
Updated:

ಬೆಂಗಳೂರು: ‘ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ’ಯಲ್ಲಿ ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಸರಾಸರಿ ₹478.5 ಕೋಟಿ, ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸರಾಸರಿ ₹250 ಕೋಟಿ ಹಾಗೂ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸರಾಸರಿ ₹128 ಕೋಟಿ ಅನುದಾನ ನೀಡಲಾಗಿದೆ.

ಮೂರು ವರ್ಷಗಳಲ್ಲಿ ನಗರದ ಚಹರೆಯನ್ನು ಬದಲಿಸುವ ಉದ್ದೇಶದಿಂದ ₹8015 ಕೋಟಿಯ ‘ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ’ಗೆ ಸಚಿವ ಸಂಪುಟ ಸಭೆಯಲ್ಲಿ ಕಳೆದ ವಾರ ಒಪ್ಪಿಗೆ ನೀಡಲಾಗಿತ್ತು.  ಇದರಲ್ಲಿ ₹17 ಸಾವಿರ ಕೋಟಿ ಮೊತ್ತದ ಪೆರಿಫೆರಲ್‌ ವರ್ತುಲ ರಸ್ತೆ, ₹25 ಸಾವಿರ ಕೋಟಿ ಮೊತ್ತದ ಎಲಿವೇಟೆಡ್‌ ಕಾಮಗಾರಿ ಸೇರಿಲ್ಲ. ಜತೆಗೆ, ಜಲಮಂಡಳಿ, ಬಿಡಿಎ ಕೈಗೆತ್ತಿಕೊಳ್ಳುವ ಕಾಮಗಾರಿಗಳು ಒಳಗೊಂಡಿಲ್ಲ. ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗೆ ಕೊಟ್ಟ ಅನುದಾನ ಇದಾಗಿದೆ. ಈ ಅನುದಾನ ಹಂಚಿಕೆಯಲ್ಲಿ ವ್ಯಾಪಕ ತಾರತಮ್ಯ ಎಸಗಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ನಗರದಲ್ಲಿ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರು ಇದ್ದಾರೆ. ಅವರ ಕ್ಷೇತ್ರಗಳಿಗೆ ಭರಪೂರ ಅನುದಾನ ನೀಡಲಾಗಿದೆ. ಮೈತ್ರಿ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಉತ್ತಮ ಅನುದಾನ ಕೊಡಲಾಗಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅಳೆದು ತೂಗಿ ಕನಿಷ್ಠ ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ತ್ರಿಮೂರ್ತಿ ಕ್ಷೇತ್ರಗಳಿಗೆ (ರಾಜರಾಜೇಶ್ವರಿನಗರ, ಯಶವಂತಪುರ ಹಾಗೂ ಕೆ.ಆರ್‌.ಪುರ) ಶೇ 60ರಷ್ಟು ಅನುದಾನ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್‌ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಲವೂ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಗರಿಷ್ಠ ಅನುದಾನ ಕೊಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮುನಿರತ್ನ ಅವರ ‘ಸಿನಿಮಾ’ ಸ್ನೇಹವೇ ಕಾರಣ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ನವ ಬೆಂಗಳೂರು ಯೋಜನೆ: ನಗರಕ್ಕೆ ₹8 ಸಾವಿರ ಕೋಟಿ

‘ಮೈತ್ರಿ ಸರ್ಕಾರ ಬಂದು ಏಳು ತಿಂಗಳು ಕಳೆದರೂ ರಸ್ತೆಗಳು ಅಭಿವೃದ್ಧಿಯಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ ದೋಸ್ತಿ ನಡುವೆ ಮತ್ತೊಂದು ಸುತ್ತಿನ ಕುಸ್ತಿಗೆ ಕಾರಣರಾಗಿದ್ದ ಯಶವಂತಪುರ ಶಾಸಕಎಸ್‌.ಟಿ.ಸೋಮಶೇಖರ್ ಅವರ ಕ್ಷೇತ್ರಕ್ಕೂ ₹339 ಕೋಟಿ ಅನುದಾನ ನೀಡಿ ಸಮಾಧಾನಪಡಿಸಲಾಗಿದೆ. ರಾಮಲಿಂಗಾ ರೆಡ್ಡಿ ಹಾಗೂ ಪುತ್ರಿ ಸೌಮ್ಯಾ ರೆಡ್ಡಿ ಅವರ ಕ್ಷೇತ್ರಗಳಿಗೆ ಒಟ್ಟು ₹700 ಕೋಟಿ ಅನುದಾನ ಹಂಚಲಾಗಿದೆ. ಆನೇಕಲ್‌ ಕ್ಷೇತ್ರಕ್ಕೆ ₹2 ಕೋಟಿ ಹಣ ನೀಡಲಾಗಿದೆ. ಈ ಕ್ಷೇತ್ರದ ಒಂದು ವಾರ್ಡ್‌ ಮಾತ್ರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ.

‘ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿಲ್ಲ. ಬಿಬಿಎಂ‍ಪಿಗೆ ಸೇರ್ಪಡೆಯಾದ 110 ಹಳ್ಳಿಗಳು ಇರುವ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಸಮಸ್ಯೆ ಸಾಕಷ್ಟು ಇದೆ. ಹೀಗಾಗಿ, ಆ ಕ್ಷೇತ್ರಗಳಿಗೆ ಹೆಚ್ಚು ಹಣ ಕೊಡಲಾಗಿದೆ. ನಗರದ ಹೃದಯಭಾಗದಲ್ಲಿರುವ ಬಸವನಗುಡಿ, ಚಾಮರಾಜಪೇಟೆ, ವಿಜಯನಗರದಂತಹ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಹಾಗಾಗಿ, ಕಡಿಮೆ ಅನುದಾನ ಹಂಚಿಕೆ ಆಗಿರಬಹುದು’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 3

  Frustrated
 • 7

  Angry

Comments:

0 comments

Write the first review for this !