ಬುಧವಾರ, ನವೆಂಬರ್ 13, 2019
22 °C
ಸಂಪೂರ್ಣ ನಿಷೇಧದ ನಡುವೆಯೂ ಪಿಒಪಿ ಗಣೇಶನ ವಿಗ್ರಹ ಬಳಕೆ l ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ

1,654 ಪಿಒಪಿ ಮೂರ್ತಿ ವಿಸರ್ಜನೆ

Published:
Updated:
Prajavani

ಬೆಂಗಳೂರು: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ಗಣೇಶನ ಮೂರ್ತಿಗಳ ತಯಾರಿ ಹಾಗೂ ಮಾರಾಟ
ವನ್ನು ಬಿಬಿಎಂಪಿ ನಿಷೇಧಿಸಿದ್ದರೂ ಅವುಗಳ ಬಳಕೆ ಸಂಪೂರ್ಣ ನಿಂತಿಲ್ಲ. ಗಣೇಶ ಚತುರ್ಥಿಯ ದಿನವೇ ಪಾಲಿಕೆ ನಿರ್ಮಿಸಿರುವ ಕಲ್ಯಾಣಿಗಳು ಹಾಗೂ ತಾತ್ಕಾಲಿಕ ತೊಟ್ಟಿಗಳಲ್ಲಿ 1,654 ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿವೆ.

ಸೋಮವಾರ 1,91,247 ಮಣ್ಣಿನ ಮೂರ್ತಿಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ ವಿಸರ್ಜಿಸಲಾಯಿತು.

ಪರಿಸರಕ್ಕೆ ಮಾರಕವಾಗುವ ಪಿಒಪಿ ಮೂರ್ತಿಗಳನ್ನು ಕೂರಿಸಿದರೆ ₹10 ಸಾವಿರ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವುದಾಗಿ ಬಿಬಿಎಂಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದ್ದವು. ಕಲ್ಯಾಣಿ, ತಾತ್ಕಾಲಿಕವಾಗಿ ನಿರ್ಮಿಸಿರುವ ಸಂಚಾರ ತೊಟ್ಟಿಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಪಾಲಿಕೆ ಸಾರಿ ಹೇಳಿತ್ತು. ಆದರೂ ಹಲವು ಕೆರೆಗಳಲ್ಲಿ ಪಿಒಪಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಆದರೆ, ಅಂತಹ ಮೂರ್ತಿಗಳನ್ನು ತಂದಿದ್ದವರನ್ನು ವಾಪಸ್‌ ಕಳಿಸಲು ಸಾಧ್ಯವಾಗದ ಕಾರಣ, ಸಿಬ್ಬಂದಿ ಕೂಡ ಅವುಗಳನ್ನು ಪಡೆದು ಸಂಚಾರಿ ಟ್ಯಾಂಕ್‌ಗಳಲ್ಲಿ ವಿಸರ್ಜಿಸಿದರು. ಬಿಬಿಎಂಪಿಯ ಸಿಬ್ಬಂದಿಯ ಕಣ್ಣು ತಪ್ಪಿಸಿ, ಕೆಲವರು ಕೆರೆಗಳಲ್ಲಿ ಇಂತಹ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.

ರಾತ್ರಿಯ ವೇಳೆ, ಪಿಒಪಿ ಅಥವಾ ಮಣ್ಣಿನ ಮೂರ್ತಿಗಳ ವ್ಯತ್ಯಾಸ ಪತ್ತೆ ಹಚ್ಚುವುದು ಸುಲಭವಲ್ಲ. ಹಾಗಾಗಿ ಪಿಒಪಿ ಮೂರ್ತಿಗಳು ಸಿಬ್ಬಂದಿಯ ಗಮನಕ್ಕೆ ಬಂದಿರಲಿಲ್ಲ. ಆದರೆ, ಮಂಗಳವಾರ ಬೆಳಿಗ್ಗೆಯಾದರೂ ಈ ಮೂರ್ತಿಗಳು ಕರಗದೆ ಇರುವುದನ್ನು ಗಮನಿಸಿದಾಗ, ಅವು ಪಿಒಪಿ ಮೂರ್ತಿಗಳು ಎಂಬುದು ಗೊತ್ತಾಗಿದೆ. ಯಡಿಯೂರು ಕೆರೆಯಲ್ಲಿ ಸಾವಿರಾರು ಪಿಒಪಿ ಗಣಪನ ಮೂರ್ತಿಗಳನ್ನು ವಿಸರ್ಜನೆ ಮಾಡಿರುವುದು ಮಂಗಳವಾರ ಕೊಳವನ್ನು ಸ್ವಚ್ಛ ಮಾಡುವಾಗ ಬೆಳಕಿಗೆ ಬಂದಿದೆ. ಹಲಸೂರು ಕೆರೆಯಲ್ಲೂ ಇದೇ ಸ್ಥಿತಿ ಕಂಡು ಬಂತು. 

‘ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಈ ಮೂರ್ತಿಗಳನ್ನು ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಿಒಪಿ ಮೂರ್ತಿಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು.

ಲಾಲ್‌ಬಾಗ್‌ನಲ್ಲಿ ಟ್ಯಾಂಕರ್‌ ವ್ಯವಸ್ಥೆ:  ತೋಟಗಾರಿಕೆ ಇಲಾಖೆ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ಅನುಕೂಲ
ವಾಗುವ ನಿಟ್ಟಿನಲ್ಲಿ ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಎರಡು ಸಂಚಾರಿ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸೋಮವಾರ 3 ಸಾವಿರ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಬುಧವಾರದವರೆಗೆ ಈ ವ್ಯವಸ್ಥೆ ಇರಲಿದೆ.

‘ಸ್ಥಳೀಯರು ಗಣೇಶ ವಿಸರ್ಜನೆಗಾಗಿ ಲಾಲ್‍ಬಾಗ್ ಕೆರೆಗೆ ಬರುತ್ತಿದ್ದರು. ಮೂರ್ತಿಗೆ ಅಲಂಕರಿಸಿದ ಹೂವು ಮತ್ತಿತರ ವಸ್ತುಗಳನ್ನೂ ನೀರಿನಲ್ಲಿ ಬಿಟ್ಟು ಪರಿಸರ ಹಾನಿ ಮಾಡುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಆರ್.ಚಂದ್ರಶೇಖರ್ ತಿಳಿಸಿದರು.

ಗಣೇಶೋತ್ಸವ ಸಂಭ್ರಮ: ನಗರದೆಲ್ಲೆಡೆ ಸೋಮವಾರ ವಿಘ್ನ ವಿನಾಯಕನ ಸ್ತುತಿ ಜೋರಾಗಿತ್ತು. ಸಮುದಾಯ ಒಗ್ಗೂಡಿಸಿ, ಪ್ರೀತಿ ಪಸರಿಸುವ ಗಣೇಶನ ಮೂರ್ತಿಗಳು ಎಲ್ಲೆಲ್ಲೂ ಕಂಗೊಳಿಸಿದವು. ಮನೆಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಲಂಬೋದರ ದರುಶನ ನೀಡುತ್ತಿದ್ದಾನೆ. 

ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆದವು. ದಾಸರ ಪದಗಳು, ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ವಿಶೇಷ ಪೂಜೆ, ಹೋಮ ನೆರವೇರಿಸಲಾಯಿತು.

ದೇವರನಾಮ ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ವಿವಿಧ ಮಂಡಳಿಗಳಲ್ಲಿ ಗಣೇಶನ ರೂಪಕಗಳು ಗಮನ ಸೆಳೆದವು. ಜಯನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ತೆಂಗಿನಕಾಯಿ ಗಣೇಶ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ದೇವಸ್ಥಾನಗಳಲ್ಲಿ, ಮಹಾಮಂಡಳಿಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 

ಸಂಜೆ ಜರುಗಿದ ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ನೃತ್ಯ–ಹಾಡುಗಳ ಆರ್ಭಟ ಜೋರಾಗಿತ್ತು. 

ಕಸ ವಿಲೇವಾರಿಗೆ ಹರಸಾಹಸ

ಹಬ್ಬದ ಹಿನ್ನೆಲೆಯಲ್ಲಿ ಹಸಿ ಕಸದ ಪ್ರಮಾಣ ಹೆಚ್ಚಾಗಿತ್ತು. ನಿತ್ಯ 4,500 ಟನ್‌ ಕಸ ಉತ್ಪತ್ತಿಯಾಗುತ್ತಿದ್ದರೆ, ಸೋಮವಾರ 6,000 ಟನ್‌ಗೂ ಅಧಿಕ ಹಸಿ ಕಸ ಶೇಖರಣೆಯಾಗಿದೆ. 

ಮಾರುಕಟ್ಟೆ ಪ್ರದೇಶಗಳಲ್ಲಿ ಹೂವು, ಬಾಳೆಕಂದು, ಮಾವಿನ ಎಲೆ ಬೆರೆತ ಅತ್ಯಧಿಕ ಕಸ ಶೇಖರಣೆಯಾಗಿತ್ತು. ಮಂಗಳವಾರ ಸಂಜೆಯವರೆಗೂ ಬಹುತೇಕ ಪ್ರದೇಶಗಳಲ್ಲಿ ಕಸ ವಿಲೇವಾರಿ ಆಗಿರಲಿಲ್ಲ.

ಪ್ರತಿಕ್ರಿಯಿಸಿ (+)