ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಚಲನೆಗೆ ಕಲಬುರ್ಗಿ, ಗೌರಿ ಪ್ರೇರಣೆ

ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಮರುಳಸಿದ್ಧಪ್ಪ ಅಭಿಮತ
Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆ ವ್ಯರ್ಥ ಎಂದು ನಾನು ನಂಬಿಲ್ಲ. ಹೊಸ ಬಗೆಯ ಸಾಮಾಜಿಕ ಚಲನೆಗೆ ಇವು ಕಾರಣವಾಗುತ್ತವೆ’
ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ಧಪ್ಪ ಅಭಿಪ್ರಾಯಪಟ್ಟರು.

ಲಂಡನ್‌ನ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನವು ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಅವರ ಮಾರ್ಗ–1 ಕೃತಿಯ ಇಂಗ್ಲಿಷ್‌ ಅವತರಣಿಕೆ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘‌ಈ ಹತ್ಯೆಗಳನ್ನು ಖಂಡಿಸುತ್ತೇನೆ. ಕೊಲ್ಲುವುದರ ಮೂಲಕ ಗುಣ, ತತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಒಳ್ಳೆಯ ನಂಬಿಕೆ, ಜಾತ್ಯತೀತ ಮೌಲ್ಯಗಳ ಬಗ್ಗೆ ನಿಷ್ಠೆಯನ್ನು ಇಟ್ಟುಕೊಂಡಿದ್ದ ಕಲಬುರ್ಗಿ, ಗೌರಿಯಂತಹವರ ಹತ್ಯೆ ಆದಾಗ ವ್ಯಕ್ತವಾದ ಪ್ರತಿಕ್ರಿಯೆ, ಹಂತಕರಲ್ಲಿ ಗಾಬರಿ ಹುಟ್ಟಿಸಿದೆ. ಕಲಬುರ್ಗಿ ಹತ್ಯೆ ಆದಾಗ, ದೇಶದ ಮೂಲೆ ಮೂಲೆಗಳಿಂದ ಸಾಹಿತಿಗಳು ಹಾಗೂ ಕಲಾವಿದರು ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದರು. ಗೌರಿ ಹತ್ಯೆಯನ್ನು ಖಂಡಿಸಿ ನಡೆದಿದ್ದ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಅದು ಹೊಸ ಚಳವಳಿಗೆ ಸ್ಫೂರ್ತಿ ನೀಡಿದೆ’ ಎಂದರು.

ಕನ್ನಡಕ್ಕೆ ತನ್ನದೇ ಆದ ಧರ್ಮ ಇದ್ದರೆ ಅದು ಲಿಂಗಾಯತ ಧರ್ಮ ಎಂದು ಕಲಬುರ್ಗಿ ಅವರು ಈ ಮೊದಲೇ ಹೇಳಿದ್ದರು. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂಬುದನ್ನು ವ್ಯಾಖ್ಯಾನಿಸಲು ನೂರಾರು ಲೇಖನಗಳನ್ನು ಬರೆದಿದ್ದರು ಎಂದರು.

ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರೊ.ಜಿ.ಕೆ.ಗೋವಿಂದರಾವ್‌, ‘ಕಲಬುರ್ಗಿ, ಗೌರಿ ಲಂಕೇಶ್‌ಗೆ ಸಾವಿನ ಭಯ ಇರಲಿಲ್ಲ. ಕೊಲೆ ಬೆದರಿಕೆಗೆ ಹೆದರಲೇಬಾರದು. ನಾವು ಹೆದರಬೇಕಾಗಿರುವುದು ಸ್ವಾರ್ಥ, ಅಹಂಕಾರಕ್ಕೆ’ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಬಸವರಾಜ ಸಾದರ, ‘ಕಲಬುರ್ಗಿ ಸಂಶೋಧನಾ ಕೇಂದ್ರಕ್ಕೆ ₹2 ಕೋಟಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಆ ಅನುದಾನ ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸರ್ಕಾರವು ಈ ವಿಷಯವನ್ನು ಮರೆತಿದೆ’ ಎಂದು ದೂರಿದರು.

‘ದುಶ್ಯಂತ–ಶಾಕುಂತಲೆ ಶೃಂಗಾರ ಕಾವ್ಯವಲ್ಲ. ಅದೊಂದು ಅತ್ಯಾಚಾರ ಕಾವ್ಯ. ಶಾಕುಂತಲೆಯನ್ನು ಒಲಿಸಿಕೊಳ್ಳಲು ದುಶ್ಯಂತ ಪ್ರಯತ್ನಿಸುತ್ತಾನೆ. ಒಲಿಯುವುದಿಲ್ಲ ಎಂದು ಗೊತ್ತಾದಾಗ ಅತ್ಯಾಚಾರ ಮಾಡುತ್ತಾನೆ. ಮಗ ಎದುರಿಗೆ ಬಂದರೂ ದುಶ್ಯಂತ ಗುರುತಿಸುವುದಿಲ್ಲ ಎಂದು ಕಲಬುರ್ಗಿ ವ್ಯಾಖ್ಯಾನಿಸಿದ್ದರು’ ಎಂದು ನೆನಪಿಸಿಕೊಂಡರು.

ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ.
**
‘ಟೀಕೆ ಇಷ್ಟವಿಲ್ಲ’
‘ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕ ಮುಕ್ತ ಸಮಾಜ ರೂಪುಗೊಳ್ಳಬೇಕಿತ್ತು. ಆದರೆ, ಮುಚ್ಚಿದ ಸಮಾಜ ನಿರ್ಮಾಣವಾಗುತ್ತಿದೆ. ಟೀಕೆ, ವಿಮರ್ಶೆ ಯಾರಿಗೂ ಇಷ್ಟವಿಲ್ಲ. ಒಬ್ಬರನ್ನೊಬ್ಬರು ಹೊಗಳುತ್ತಾ ಬೂಟಾಟಿಕೆಯ ಸಮಾಜವನ್ನು ಕಟ್ಟಲು ಎಲ್ಲರೂ ಹೊರಟಿದ್ದಾರೆ’ ಎಂದು ಕೆ.ಮರುಳಸಿದ್ಧಪ್ಪ ಬೇಸರ ವ್ಯಕ್ತಪಡಿಸಿದರು.
***
ಗೋವಿಂದರಾವ್‌ ಅವರಿಗೆ ಬೆದರಿಕೆ ಒಡ್ಡುವ ಪ್ರಯತ್ನಗಳು ನಡೆಯುತ್ತಿವೆ. ಆದರೂ ವಿಚಲಿತರಾಗದೆ, ಅವರು ತಮ್ಮದೇ ದಾರಿಯಲ್ಲಿ ಮುಂದುವರಿಯುತ್ತಿದ್ದಾರೆ.
– ಡಾ.ಕೆ.ಮರುಳಸಿದ್ಧಪ್ಪ, ಸಾಹಿತಿ
**

‘ಮಾರ್ಗ–1’ ಅನುವಾದಿತ ಕೃತಿ

(ಆಯ್ದ 11 ಲೇಖನಗಳು)

ಅನುವಾದಕ: ಡಾ.ಶಶಿಧರ್‌ ಜಿ.ವೈದ್ಯ

ಪ್ರಕಾಶನ: ಚಾರುಮತಿ ಪ್ರಕಾಶನ

ಬೆಲೆ: ₹100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT