ಪೊಲೀಸ್ ಬಲೆಗೆ ಸುಲಿಗೆಕೋರರ ಗ್ಯಾಂಗ್

7
ಒಬ್ಬ ಆರೋಪಿ 2015ರಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ

ಪೊಲೀಸ್ ಬಲೆಗೆ ಸುಲಿಗೆಕೋರರ ಗ್ಯಾಂಗ್

Published:
Updated:
Deccan Herald

ಬೆಂಗಳೂರು: ನಾಯಂಡಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

ನಾಯಂಡಹಳ್ಳಿಯ ಮನು ಅಲಿಯಾಸ್ ಪಾಟೀಲ, ಹರೀಶ ಅಲಿಯಾಸ್ ಹೊಂಗಣ್ಣ, ಚನ್ನಸಂದ್ರದ ಶ್ರೀನಿವಾಸ ಅಲಿಯಾಸ್ ಪಾಗಲ್ ಸೀನ ಹಾಗೂ ಬಾಪೂಜಿ ನಗರದ ಸಂತೋಷ್ ಬಂಧಿತರು. ಆರೋಪಿಗಳಿಂದ ₹5 ಲಕ್ಷ ಮೌಲ್ಯದ ಕಾರು ಹಾಗೂ
ಮೂರು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಂಚೇನಹಳ್ಳಿಯ ರಘು ಹಾಗೂ ಕಿರಣ್ ಅಲಿಯಾಸ್ ಜಂಗ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕ್ಯಾಬ್ ಕಿತ್ತುಕೊಂಡರು: ಓಲಾ ಕ್ಯಾಬ್ ಚಾಲಕ ಶಿವರಾಜು ಎಂಬುವರು, ಸೆ.1ರ ನಸುಕಿನಲ್ಲಿ ನಾಗರಬಾವಿ ಹೊರವರ್ತುಲ ರಸ್ತೆಯ ಬಾಬು ಬ್ಯಾಟರಿ ಶಾಪ್ ಅಂಗಡಿ ಎದುರು ಕ್ಯಾಬ್ ನಿಲ್ಲಿಸಿಕೊಂಡು ಮಲಗಿದ್ದರು. ಈ ವೇಳೆ ಬೈಕ್‌ಗಳಲ್ಲಿ ಅಲ್ಲಿಗೆ ಬಂದಿದ್ದ ಆರೋಪಿಗಳು, ಮಚ್ಚಿನಿಂದ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದರು. ಬಳಿಕ ಶಿವರಾಜು ಮೇಲೂ ಹಲ್ಲೆ ನಡೆಸಿ ಕ್ಯಾಬ್ ಸಮೇತ ಪರಾರಿಯಾಗಿದ್ದರು.

ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲೂ ಪಲ್ಸರ್ ಬೈಕ್ ಕಳವು ಮಾಡಿದ್ದರು. ಹೀಗೆ, ಸರಣಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪತ್ತೆಗೆ ಡಿಸಿಪಿ ರವಿ ಚನ್ನಣ್ಣನವರ ಅವರು ಕೆಂಗೇರಿ ಉಪವಿಭಾಗದ ಎಸಿಪಿ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಹೀಗಿರುವಾಗಲೇ, ಸೆ.10ರ ರಾತ್ರಿ ಆರೋಪಿಗಳು ನಾಯಂಡಹಳ್ಳಿಯ ವಿನಾಯಕಲೇಔಟ್‌ ಬಳಿ ಮನು ಎಂಬುವರಿಂದ ₹ 2,800 ದೋಚಿದ್ದರು. ಮನು ಸಹ ಸ್ಥಳೀಯ ನಿವಾಸಿಯಾದ ಕಾರಣ, ಅವರಿಗೆ  ಪಾಟೀಲ ಹಾಗೂ ಶ್ರೀನಿವಾಸನ ಮುಖ ಪರಿಚಯವಿತ್ತು. ಹೀಗಾಗಿ, ಅವರ ಹೆಸರುಗಳನ್ನು ಉಲ್ಲೇಖಿಸಿ ದೂರು ಕೊಟ್ಟಿದ್ದರು.

ಈ ಸುಳಿವು ಆಧರಿಸಿ ತನಿಖೆಗಿಳಿದ ವಿಶೇಷ ತಂಡ, ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಮೊದಲು ಶ್ರೀನಿವಾಸನನ್ನು ವಶಕ್ಕೆ ಪಡೆಯಿತು. ಹೆಚ್ಚಿನ ವಿಚಾರಣೆಗೆ ಒಳ‍ಪಡಿಸಿದಾಗ, ಆತ ಇತರೆ ಸದಸ್ಯರ ಬಗ್ಗೆ ಬಾಯ್ಬಿಟ್ಟ. ನಂತರ ಪೊಲೀಸರು ಉಳಿದವರನ್ನೂ ಪತ್ತೆ ಮಾಡಿ ವಾಹನ ಜಪ್ತಿ ಮಾಡಿದರು.

ಪಾಟೀಲ ಹಾಗೂ ಶ್ರೀನಿವಾಸ ಅಪರಾಧ ಹಿನ್ನೆಲೆವುಳ್ಳವರು. 2017ರಲ್ಲಿ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಪಾಟೀಲ ಭಾಗಿಯಾಗಿದ್ದರೆ, 2015ರಲ್ಲಿ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೆಳಗೋಡ್ ಎಂಬುವರ ಹತ್ಯೆ ಪ್ರಕರಣದಲ್ಲಿ ಶ್ರೀನಿವಾಸ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !