ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಮಾರಾಟದ ಕಿಂಗ್‌ಪಿನ್‌ ಬಂಧನ

ಎನ್‌ಸಿಬಿ ಅಧಿಕಾರಿಗಳ ಕಾರ್ಯಾಚರಣೆ; 223 ಕೆ.ಜಿ ಗಾಂಜಾ ಜಪ್ತಿ
Last Updated 15 ನವೆಂಬರ್ 2018, 19:03 IST
ಅಕ್ಷರ ಗಾತ್ರ

ಬೆಂಗಳೂರು: ಐದು ರಾಜ್ಯಗಳಲ್ಲಿ ಸಕ್ರಿಯವಾಗಿರುವ ಗಾಂಜಾ ಮಾರಾಟ ಜಾಲದ ಕಿಂಗ್‌ಪಿನ್‌ಅನುಮುಲು ಪ್ರಸಾದ್ ಅಲಿಯಾಸ್ ಗುರು ಎಂಬಾತನನ್ನು ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ನಿವಾಸಿಯಾದ ಗುರು, ತನ್ನ ಸಹಚರರಾದ ಎಸ್‌.ರಾಮಕೃಷ್ಣ ಹಾಗೂ ಕೆ.ರಾಜೇಶ್ ಜೊತೆಯಲ್ಲಿ ಬೆಂಗಳೂರಿನ ಮೂಲಕ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಣೆ ಮಾಡುತ್ತಿದ್ದ. ಆ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ ಅಧಿಕಾರಿಗಳು, ಮೂವರನ್ನು ಸೆರೆಹಿಡಿದು223 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

‘ಪ್ರಮುಖ ಆರೋಪಿ ಗುರು, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಗಾಂಜಾ ಮಾರಾಟ ಮಾಡಿಸುತ್ತಿದ್ದ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಗಾಂಜಾ ಸಾಗಣೆಯನ್ನೂ ಆತನೇ ಮಾಡುತ್ತಿದ್ದ’ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ಚುನಾವಣೆಯಿಂದಾಗಿ ಮಾರ್ಗ ಬದಲಾವಣೆ: ‘ವಿಶಾಖಪಟ್ಟಣದಿಂದ ತೆಲಂಗಾಣ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಗಾಂಜಾ ತೆಗೆದುಕೊಂಡು ಹೋಗಲು ಆರೋಪಿಗಳು ಯೋಚಿಸಿದ್ದರು. ಆದರೆ, ತೆಲಂಗಾಣದಲ್ಲಿ ಚುನಾವಣೆ ಇರುವುದರಿಂದ ಎಲ್ಲೆಂದರಲ್ಲಿ ವಾಹನಗಳನ್ನು ತಡೆದು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಅದರಿಂದಾಗಿಯೇ ಆರೋಪಿಗಳು, ಬೆಂಗಳೂರು ಮೂಲಕ ಗಾಂಜಾ ಸಾಗಣೆ ಮಾಡಲು ಮಾರ್ಗ ಬದಲಾವಣೆ ಮಾಡಿದ್ದರು’ ಎಂದು ಅಧಿಕಾರಿ ವಿವರಿಸಿದರು.

‘ಆಂಧ್ರ ಪ್ರದೇಶ ನೋಂದಣಿ ಸಂಖ್ಯೆಯ ಕಾರಿನಲ್ಲಿ ಗಾಂಜಾ ಸಾಗಣೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ದೇವನಹಳ್ಳಿ ಟೋಲ್‌ ಬಳಿ ವಾಹನಗಳ ತಪಾಸಣೆ ನಡೆಸಲಾಯಿತು. ಅಲ್ಲಿಗೆ ಬಂದ ಆರೋಪಿಗಳ ಕಾರು ತಡೆದು ಪರಿಶೀಲಿಸಿದಾಗ, 110 ಪೊಟ್ಟಣಗಳಲ್ಲಿ ಗಾಂಜಾ ಪತ್ತೆಯಾಯಿತು’ ಎಂದು ಹೇಳಿದರು.

‘ಗಾಂಜಾ ಸಾಗಣೆ ಹಾಗೂ ಮಾರಾಟದ ಬಗ್ಗೆ ಅನುಮುಲ್ ತಪ್ಪೊಪ್ಪಿಕೊಂಡಿದ್ದಾನೆ. ‘ಗಾಂಜಾವನ್ನು ಮಹಾರಾಷ್ಟ್ರಕ್ಕೆ ತಲುಪಿಸಿದರೆ, ₹10,000 ಕೊಡುವುದಾಗಿ ಹೇಳಿದ್ದರಿಂದ ಅನುಮುಲ್‌ ಜೊತೆಯಲ್ಲಿ ಹೊರಟಿದ್ದೆವು’ ಎಂದು ಆತನ ಸಹಚರರು ಹೇಳಿಕೆ ನೀಡಿದ್ದಾರೆ’ ಎಂದು ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT