‘ಕಾರ್ಪೋರೇಟ್‌ ವಲಯದಲ್ಲಿ ಮಹಿಳೆಯರಿಗಿಲ್ಲ ಸ್ಥಾನ’

7

‘ಕಾರ್ಪೋರೇಟ್‌ ವಲಯದಲ್ಲಿ ಮಹಿಳೆಯರಿಗಿಲ್ಲ ಸ್ಥಾನ’

Published:
Updated:
Deccan Herald

ಬೆಂಗಳೂರು: ‘ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ರ‍್ಯಾಂಕ್‌ ಪಡೆದುಕೊಳ್ಳುತ್ತಿರುವವರಲ್ಲಿ ಬಾಲಕಿಯರೇ ಮುಂದು. ಆದರೆ, ಉದ್ಯಮ ವಲಯದಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ಬೆರಳೆಣಿಕೆಯಷ್ಟು’ ಎಂದು ಮಾನವ ಸಂಪನ್ಮೂಲ ಸಲಹೆಗಾರ್ತಿ ಹೇಮಾ ರವಿಚಂದರ್‌ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ ಆಯೋಜಿಸಿದ್ದ ಭಾರತದ ಕಾರ್ಪೋರೇಟ್‌ ವಲಯದಲ್ಲಿ ಲಿಂಗಾಧರಿತ ಸ್ಥಿತಿಗತಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಪುರುಷರನ್ನು ಮೀರಿಸುವ ರೀತಿ ಸ್ತ್ರೀಯರು ಕೆಲಸ ಮಾಡುತ್ತಿದ್ದಾರೆ. ಆದರೂ ಅವರಿಗೆ ಉನ್ನತ ಸ್ಥಾನಮಾನ ನೀಡದೆ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಂಪನಿಯಲ್ಲಿ ಉತ್ತಮವಾಗಿ ಕಾರ್ಯ ನಿಭಾಯಿಸುತ್ತಿರುವ ಮಹಿಳೆಯರಿಗೆ ಬಡ್ತಿ ನೀಡುತ್ತಿಲ್ಲ. ಮಕ್ಕಳು ನೋಡಿಕೊಳ್ಳಲು ಮನೆಗೆ ಬೇಗನೆ ಹೋಗುತ್ತಾರೆ. ಮದುವೆ, ಹೆರಿಗೆ ಅಂಥ ರಜೆ ಕೊಡಬೇಕಾಗುತ್ತದೆ. ಇದರಿಂದ ಕೆಲಸಕ್ಕೆ ತೊಂದರೆ ಆಗಲಿದೆ ಎನ್ನುವ ಮನೋಭಾವ ಕಂಪನಿ ನಡೆಸುವವರಲ್ಲಿದೆ. ಇಂಥ ಮನಸ್ಥಿತಿ ಬದಲಾಗಬೇಕಿದೆ’ ಎಂದು ಹೇಳಿದರು.

‘ಶಾಲೆಯಲ್ಲಿ ಓದುತ್ತಿದ್ದಾಗ ವೇದಿಕೆ ಏರಿ ಮಾತನಾಡಲು ಹಿಂಜರಿಕೆ ಆಗುತ್ತಿತ್ತು. ತಂದೆ–ತಾಯಿ ಊಟ ಮಾಡುವ ವೇಳೆ ಪ್ರತಿದಿನ ತರಗತಿಯಲ್ಲಿ ಮಾಡುತ್ತಿದ್ದ ಪಾಠವನ್ನು ಅವರ ಮುಂದೆ ಹೇಳಬೇಕಾಗಿತ್ತು. ಭಯಪಡುತ್ತಲೇ ಹೇಳುತ್ತಿದ್ದೆ. ಈಗ ಎಲ್ಲಿಯಾದರೂ ಸರಾಗವಾಗಿ ಮಾತನಾಡಬಲ್ಲೆ. ಅವರ ಪ್ರೋತ್ಸಾಹದಿಂದಲೇ ಉನ್ನತ ಮಟ್ಟಕ್ಕೇರಲು ಸಾಧ್ಯವಾಯಿತು. ಮಹಿಳೆಯು ತನ್ನ ಮುಂದಿರುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು’ ಎಂದು ಸಲಹೆ ನೀಡಿದರು.

ಲೇಖಕಿ ಸಂಗೀತಾ ತಲ್ವಾರ್ ಮಾತನಾಡಿ, ‘ಉದ್ಯಮ ರಂಗದಲ್ಲಿ ಮಹಿಳೆಯ ಸಾಧನೆಯು ಕುಸಿಯಲು ಕಾರಣ ಸಹಕಾರದ ಕೊರತೆ. ಕುಟುಂಬದ ಸದಸ್ಯರು ಕಂಪನಿಗಳಲ್ಲಿ ಇನ್ನೂ ಎರಡು ಗಂಟೆ‌ ಹೆಚ್ಚು ಕೆಲಸ‌‌ ಮಾಡಬೇಕೆಂದು ಪ್ರೋತ್ಸಾಹ ತುಂಬಬೇಕು. ಮಾನಸಿಕ ಸ್ಥೈರ್ಯ ತುಂಬದೇ ಇರುವುದೂ ಹೆಣ್ಣು ಹಿಂದುಳಿಯಲು ಕಾರಣ ಆಗಿದೆ’ ಎಂದು ಹೇಳಿದರು.

‘ಮನೆಯಿಂದಲೇ ಕೆಲಸ ಮಾಡುವಷ್ಟು ತಂತ್ರಜ್ಞಾನ ಬೆಳೆದಿದೆ. ಆದರೂ ಶೇ 10ರಷ್ಟು ಮಹಿಳೆಯರು ಮಾತ್ರ ಭಾರತದ ಉದ್ಯಮ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುವ ಸ್ಥಳಗಳಲ್ಲಿ ಸಮಾನತೆಯ ಅವಶ್ಯಕತೆ ಇದೆ’ ಎಂದರು.

‘ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತಿರುವ ಯೋಜನೆಗಳು, ಸೌಲಭ್ಯಗಳು ಫಲ ನೀಡುತ್ತಿಲ್ಲ. ಉದ್ಯಮ ವ್ಯವಹಾರದಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು ಸಹಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯದ ಕೊರತೆ ಇದೆ ಎಂಬುದನ್ನು ಸ್ತ್ರೀಯರು ಮನಸ್ಸಿನಿಂದ ದೂರ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !