ಕಟ್ಟಡದಿಂದ ಬಿದ್ದು ಕೊಲಂಬಿಯಾ ಯುವತಿ ಸಾವು

7

ಕಟ್ಟಡದಿಂದ ಬಿದ್ದು ಕೊಲಂಬಿಯಾ ಯುವತಿ ಸಾವು

Published:
Updated:

ಬೆಂಗಳೂರು: ಜೀವನ್‌ಬಿಮಾ ನಗರದಲ್ಲಿರುವ ‘ವೈಲ್ಡ್‌ಫ್ಲವರ್ ಹಿಲ್‌’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಐದನೇ ಮಹಡಿಯಿಂದ ಬಿದ್ದು ಕೊಲಂಬಿಯಾ ಪ್ರಜೆ ಕರೀನಾ ಡೇನಿಯಲ್‌ (25) ಎಂಬುವರು ಮೃತಪಟ್ಟಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ದೇಶಕ್ಕೆ ಬಂದಿದ್ದ ಕರೀನಾ, ದೆಹಲಿಯ ಕಂಪನಿಯೊಂದರಲ್ಲಿ ಅನುವಾದಕಿಯಾಗಿ ಮೂರು ವರ್ಷ ಕೆಲಸ ಮಾಡಿದ್ದರು. ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದು, ಇಂದಿರಾನಗರದ ಖಾಸಗಿ ಕಂಪನಿಗೆ ಸೇರಿದ್ದರು. ಸಹೋದ್ಯೋಗಿ ಮರಿಯಾ ಜೊತೆ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿದ್ದರು.

‘ಕರೀನಾ ಹಾಗೂ ಮರಿಯಾ, ವೈಟ್‌ಫೀಲ್ಡ್‌ನಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಕ್ರಿಸ್‌ಮಸ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಭಾನುವಾರ ನಸುಕಿನ 3 ಗಂಟೆ ಸುಮಾರಿಗೆ ಮನೆಗೆ ವಾಪಸ್‌ ಬಂದಿದ್ದರು. ಮರಿಯಾ, ಕೊಠಡಿಯೊಳಗೆ ಹೋಗಿದ್ದರು. ಕರೀನಾ ಹೊರಗೆಯೇ ಇದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲವು ನಿಮಿಷಗಳ ಬಳಿಕ ಮರಿಯಾ, ಜೋರಾದ ಶಬ್ದ ಕೇಳಿ ಹೊರಗೆ ಓಡಿ ಬಂದಿದ್ದರು. ಕಟ್ಟಡದ ಕೆಳಗೆ ಕರೀನಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಚೀರಾಡಿದ್ದರು. ನಂತರ, ಸ್ಥಳೀಯರೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಜೀವನ್‌ಬಿಮಾ ನಗರ ಪೊಲೀಸರು ಹೇಳಿದರು.

‘ಔತಣಕೂಟದಲ್ಲಿ ಮದ್ಯ ಕುಡಿದಿದ್ದ ಕರೀನಾ, ಅದರ ಅಮಲಿನಲ್ಲೇ ಮನೆಗೆ ವಾಪಸ್‌ ಬಂದಿದ್ದರು. ಕೊಠಡಿಯೊಳಗೆ ಹೋಗದೇ ಮಹಡಿಯಲ್ಲೇ ನಿಂತಿರುವಾಗ ಈ ಅವಘಡ ಸಂಭವಿಸಿದೆ’ ಎಂದು ಅವರು ಮಾಹಿತಿ ನೀಡಿದರು.

ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್, ‘ಕರೀನಾ ಹೇಗೆ ಬಿದ್ದರು ಎಂಬುದು ಗೊತ್ತಾಗಿಲ್ಲ. ಸ್ನೇಹಿತೆ ಮರಿಯಾರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸುವ ಸಂಬಂಧ ಕೊಲಂಬಿಯಾ ರಾಯಭಾರ ಕಚೇರಿಯಿಂದ ಅನುಮತಿ ಕೋರಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !