ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದಲಿತರು ಬಿಜೆಪಿ ಸೇರುವುದು ದಲಿತ ತತ್ವ, ಅಂಬೇಡ್ಕರ್‌ಗೆ ಮಾಡುವ ದ್ರೋಹ'

ಪ್ರೊ. ಜಿ.ಕೆ. ಗೋವಿಂದರಾವ್ ಅಭಿಮತ
Last Updated 18 ಮಾರ್ಚ್ 2019, 7:28 IST
ಅಕ್ಷರ ಗಾತ್ರ

ಬೆಂಗಳೂರು: ‌‘ದಲಿತರು ಬಿಜೆಪಿ ಸೇರುವುದು ದಲಿತ ತತ್ವ, ಅಂಬೇಡ್ಕರ್‌ ಮತ್ತು ಇಡೀ ದೇಶಕ್ಕೆ ಮಾಡುವ ದ್ರೋಹ’ ಎಂದು ವಿಚಾರವಾದಿ ಪ್ರೊ. ಜಿ.ಕೆ. ಗೋವಿಂದರಾವ್ ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಅತಂತ್ರ–ಕೋಮುವಾದಿಗಳ ಕುತಂತ್ರ–ಸಂವಿಧಾನದ ಆಶಯಗಳಿಗೆ ಗದಾಪ್ರಹಾರ’ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಮವಿಲಾಸ್ ಪಾಸ್ವಾನ್‌ಗೆ ಮರ್ಯಾದೆ ಇಲ್ಲ. ಮುಂಬೈನಲ್ಲೂ ಒಬ್ಬ ಇದ್ದಾನೆ. ಇವರೆಲ್ಲ ಅಧಿಕಾರಕ್ಕಾಗಿ ಎಲ್ಲಿ ಬೇಕಾದರೂ ಹೋಗುತ್ತಾರೆ. ಇಂಥವರಿಂದ ದಲಿತರ ಏಳಿಗೆ ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಆತ್ಮಗೌರವ ಕಳೆದುಕೊಂಡವರಿಗೆ ಮಾತ್ರ ಅಧಿಕಾರ ಎಂಬ ಸ್ಥಿತಿ ಇದೆ. ಈ ಸಂ‌ದರ್ಭದಲ್ಲಿ ಬಿಜೆಪಿ ಸೇರುವುದಿಲ್ಲ, ಆ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂಬ ಶಪಥವನ್ನು ದಲಿತ ಸಮುದಾಯ ಮಾಡಬೇಕು. ಹಾಗೆ ಮಾಡಿದರೆ ಮಾತ್ರಅಂಬೇಡ್ಕರ್ ಅವರನ್ನು ಗೌರವಿಸಿದಂತೆ’ ಎಂದರು.

‘ಚುನಾವಣೆಗಾಗಿ ಯುದ್ಧದ ಭಯವನ್ನು ದೇಶದಲ್ಲಿ ಹುಟ್ಟುಹಾಕಲಾಗಿದೆ. ಪಾಕಿಸ್ತಾನದ ಬಗ್ಗೆ ದ್ವೇಷ ಬೆಳೆಸಿಕೊಂಡಿರುವ ಜತೆಗೆ ಪಕ್ಕದ ಮನೆಯ ಮುಸ್ಲಿಮರ ಬಗ್ಗೆಯೂ ದ್ವೇಷ ಬೆಳೆಸಲಾಗುತ್ತಿದೆ. ಪಾಕಿಸ್ತಾನದಲ್ಲಿ ಯಾರೋ ಒಬ್ಬ ಹುಚ್ಚನಿದ್ದರೆ, ದೇಶದ ಇಡೀ ಮುಸ್ಲಿಮರು ಹುಚ್ಚರೇ, ದೇಶದ್ರೋಹಿಗಳೇ’ ಎಂದು ಪ್ರಶ್ನಿಸಿದರು.

ಇದು ಅನುಷ್ಠಾನಕ್ಕೆ ಬರುವುದಿಲ್ಲ ಎಂಬುದು ಪ್ರಧಾನಿ ಮೋದಿ ಅವರಿಗೂ ಗೊತ್ತಿದೆ. ಇದಕ್ಕೆ ವಿರುದ್ಧವಾದ ತೀರ್ಪನ್ನು ನ್ಯಾಯಾಲಯ ನೀಡಲಿದೆ ಎಂಬುದೂ ಗೊತ್ತಿದೆ. ಆದರೂ ಚುನಾ ವಣೆಯಲ್ಲಿ ಮತ ಗಳಿಸಲು ಈ ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ನಾಚಿಕೆಗೇಡು ಸರ್ಕಾರ’

‘ಜೆಡಿಎಸ್–ಕಾಂಗ್ರೆಸ್‌ನವರುಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟರು ಎಂಬ ಸಂತೋಷ ಇತ್ತು. ಆದರೆ, ಈಗಿನ ಸ್ಥಿತಿ ನೋಡಿದರೆ ಇದೊಂದು ನಾಚಿಕೆಗೇಡು ಸರ್ಕಾರ ಎನ್ನಬೇಕಾಗಿದೆ’ ಎಂದು ಗೋವಿಂದರಾವ್ ಬೇಸರ ವ್ಯಕ್ತಪಡಿಸಿದರು.

ಹಿರಿಯರಾದ ಎಚ್.ಡಿ. ದೇವೇಗೌಡರಿಗೆ ಜೆಡಿಎಸ್ ಬಿಟ್ಟು ಬೇರಾವ ವಿಷಯವೂ ತಲೆಯಲ್ಲಿ ಇಲ್ಲ. ಮಕ್ಕಳು, ಮೊಮ್ಮಕ್ಕಳಿಗೆ ತಾಕೀತು ಮಾಡುವ ಧೈರ್ಯ ಇರಬೇಕಿತ್ತು. ಅದರೆ, ಪಕ್ಷ ಬಿಟ್ಟರೆ ಬೇರೇನು ಅವರಿಗೆ ಕಾಣಿಸುತ್ತಿಲ್ಲ ಎಂದರು.‌‌

‘ನಮ್ಮ ಪಕ್ಷದ ಅಸ್ತಿತ್ವಕ್ಕಾಗಿ ನಮ್ಮ ದಾರಿ ನೋಡಿಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿಯ ಅಣ್ಣ ಹೇಳುತ್ತಾರೆ. ಯಾರನ್ನು ನಂಬಿ ಮತ ಹಾಕಬೇಕು? ಪ್ರಜಾತಂತ್ರ ಉಳಿಯಬೇಕೆಂಬ ಹಠ ನಮಗೆ ಮುಖ್ಯವಾಗಬೇಕೇ ಹೊರತು ಸಿದ್ದರಾಮಯ್ಯ, ದೇವೇಗೌಡರನ್ನು ಉಳಿಸುವುದಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT