ಶುಕ್ರವಾರ, ನವೆಂಬರ್ 22, 2019
20 °C
ಜಿಕೆವಿಕೆ ‘ಕೃಷಿ ವಿಜ್ಞಾನ’ ವಿಭಾಗದಿಂದ ಅಭಿವೃದ್ಧಿ l ‘ಕೃಷಿ ಮೇಳ’ದಲ್ಲಿ ಹೊಸ ತಂತ್ರಜ್ಞಾನದ ಪ್ರಾತ್ಯಕ್ಷಿಕೆ

ಬಂತು ಈಗ ‘ಸ್ವಯಂಚಾಲಿತ ನೀರಾವರಿ’

Published:
Updated:
Prajavani

ಬೆಂಗಳೂರು: ರೈತರು ಇನ್ನು ಮುಂದೆ ತೋಟಕ್ಕೆ ಹೋಗದೆ ಬೆಳೆಗಳಿಗೆ ನೀರು ಹಾಯಿಸಬಹುದಾದ ‘ಸ್ವಯಂಚಾಲಿತ ನೀರಾವರಿ’ ಪದ್ಧತಿಯನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ‘ಕೃಷಿ ವಿಜ್ಞಾನ’ ವಿಭಾಗ ಅಭಿವೃದ್ಧಿಪಡಿಸಿದೆ.

ರೈತರು ವಿದ್ಯುತ್‌ ಲಭ್ಯತೆಯನ್ನು ಆಧರಿಸಿ ಬೆಳೆಗಳಿಗೆ ನೀರು ಹಾಯಿಸಲು ಹೆಣಗಾಡುತ್ತಾರೆ. ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿಗಳಿಂದ ರೈತರಿಗೆ ಕೊಂಚ ಶ್ರಮ ಕಡಿಮೆಯಾಗಿದ್ದರೂ, ನೀರು ಪೂರೈಕೆಯಲ್ಲಿ ಇನ್ನೂ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ.

ಕೃಷಿ ವಿಶ್ವವಿದ್ಯಾಲಯದ ‘ಕಾಲ ಮತ್ತು ಪ್ರಮಾಣ ಆಧಾರಿತ ನೀರು ನಿರ್ವಹಣೆ’ ವಿಧಾನದ ನೂತನ ನೀರಾವರಿ ಪದ್ಧತಿಯಿಂದ ರೈತರು ದೀರ್ಘಕಾಲದವರೆಗೆ ನೀರು ಹಾಯಿಸಬಹುದು. ವಿದ್ಯುತ್‌ ಅಡೆತಡೆ ನೀಡಿದರೂ ಸ್ವಯಂಚಾಲಿತವಾಗಿ ನೀವೂ ಸೂಚಿಸಿದಷ್ಟೇ ನೀರು ತೋಟಕ್ಕೆ ಪೂರೈಕೆಯಾಗಲಿದೆ.

‘ರೈತರು ಬೆಳೆ ಬೆಳೆಯುವುದಕ್ಕಿಂತ ಅದಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವ ಕಡೆಗೆ ಹೆಚ್ಚು ಗಮನ ನೀಡುತ್ತಾರೆ.ಇದಕ್ಕಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ರೈತರು ತೋಟದಲ್ಲೇ ಇರುತ್ತಾರೆ. ವಿದ್ಯುತ್‌ ಹೋಗಿ ಬರುವುದರಿಂದ ಪಂಪ್‌ಸೆಟ್‌ ಅನ್ನು ಪದೇ ಪದೇ ಚಾಲನೆ ಮಾಡುತ್ತಾರೆ. ನೀರು ಪೂರೈಕೆಗಾಗಿ ಒಬ್ಬರು ತೋಟದಲ್ಲೇ ಇರಬೇಕು. ಆದರೆ, ಈ ತಂತ್ರಜ್ಞಾನದ ಮೂಲಕ ರೈತರ ತನ್ನ ತೋಟಕ್ಕೆ ಅಗತ್ಯವಿರುವ ನೀರಿನ ಪ್ರಮಾಣವನ್ನು ನಿಗದಿ ಮಾಡಿ ಅಷ್ಟೇ ನೀರನ್ನು ಪೂರೈಸಬಹುದು’ ಎಂದು ಜಿಕೆವಿಕೆ ಕೃಷಿ ವಿಜ್ಞಾನ ವಿಭಾಗದ ಕೃಷಿ ತಜ್ಞ ಹನುಮಂತಪ್ಪ ತಿಳಿಸಿದರು.

‘ಪಂಪ್‌ಸೆಟ್‌ಗೆ ‘ಪ್ರೋಗ್ರಾಮರ್‌’ ಸಾಧನ ಅಳವಡಿಸಿ ವಿದ್ಯುತ್‌ ಸಂಪರ್ಕ ನೀಡಿ, ಈ ಸ್ವಯಂ‌ಚಾಲಿತ ನೀರಾವರಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬಹುದು. ಇದನ್ನು ಎಲ್ಲ ವಿಧವಾದ ಬೇಸಾಯಗಳಿಗೆ ಬಳಸಬಹುದು. ನೀರಿನ ಪ್ರಮಾಣ, ನೀರು ಹರಿಯಬೇಕಾದ ಸಮಯವನ್ನು ಪ್ರೋಗ್ರಾಮರ್‌ ಸಾಧನದಲ್ಲಿ ನಿಗದಿ ಮಾಡಬಹುದು’.

‘ಇದನ್ನು ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗೆ ಕನೆಕ್ಟ್‌ ಮಾಡಬಹುದಾಗಿದೆ. ಒಂದು ಬೆಳೆಗೆ ನೀವು ಎಷ್ಟು ಬಾರಿ ನೀರು ಹಾಯಿಸಬಹುದು ಎಂಬುದನ್ನೂ ನಿಗದಿ ಮಾಡಬಹುದು. ರೈತ ಈ ತಂತ್ರಜ್ಞಾನದ ಮೂಲಕ ಒಂದು ಬೆಳೆಗೆ ಬೇಕಾದ ನೀರಿನ ಪ್ರಮಾಣ ಹಾಗೂ ಸಮಯ ನಿಗದಿ ಮಾಡಿದರೆಸ್ವಯಂಚಾಲಿತವಾಗಿ ನೀರು ತೋಟಕ್ಕೆ ಪೂರೈಕೆಯಾಗಲಿದೆ. ಒಂದು ವೇಳೆ ನಿಗದಿಯಾದ ಸಮಯದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದಿದ್ದರೆ, ವಿದ್ಯುತ್ ಬಂದ ತಕ್ಷಣ ನಿಗದಿತ ಪ್ರಮಾಣದ ನೀರು ಪೂರೈಕೆಯಾಗಲಿದೆ’ ಎಂದು ಅವರು ವಿವರಿಸಿದರು.

ಸ್ವಯಂಚಾಲಿತ ನೀರಾವರಿ ವಿಧಾನದ ಅನುಕೂಲಗಳು
* ನೀರು ಹರಿವಿನ ಪ್ರಮಾಣ ಹಾಗೂ ಸಮಯ ನಿಗದಿ
* ನೀರು ಪೂರೈಸಲು ರೈತರು ತೋಟದಲ್ಲೇ ಇರಬೇಕಿಲ್ಲ
* ನೀರು ಪೋಲಾಗುವುದನ್ನು ತಡೆಗಟ್ಟಬಹುದು
* ಬೆಳೆ ಪೂರ್ಣ ಆಗುವವರೆಗೆ ನೀರಿನ ಪೂರೈಕೆ ನಿಗದಿ ಮಾಡಬಹುದು

ಬೆಲೆ ₹1.20 ಲಕ್ಷ!
‘ಈ ಆಟೊಮೆಟೆಡ್‌ ತಂತ್ರಜ್ಞಾನ ಅಳವಡಿಸಲು ಅಂದಾಜು ₹1.20 ಲಕ್ಷ ವೆಚ್ಚ ಬೀಳುತ್ತದೆ. ಆದರೆ, ಒಂದು ಬಾರಿ ಬಂಡವಾಳ ಹಾಕಿದರೆ ದೀರ್ಘಕಾಲದವರೆಗೆ ಉಪಯೋಗಕ್ಕೆ ಬರಲಿದೆ. ಮಿಶ್ರ ಬೆಳೆಗಳಿಗೂ ಈ ತಂತ್ರಜ್ಞಾನ ಬಳಸಬಹುದು. ನೀವು ಸೂಚಿಸಿದ ಬೆಳೆಗೆ ಮಾತ್ರ ಪ್ರತ್ಯೇಕವಾಗಿ ನೀರು ಹರಿಯುವಂತೆ ಸೂಚಿಸಬಹುದು. ಈ ತಂತ್ರಜ್ಞಾನ ಬಳಕೆಯಿಂದ ಹೆಕ್ಟೇರ್‌ಗಟ್ಟಲೆ ಜಾಗದಲ್ಲಿ ಬೆಳೆದ ಬೆಳೆಗಳನ್ನು ಒಬ್ಬ ರೈತ ಯಾರ ಸಹಾಯವೂ ಇಲ್ಲದೆ ನಿರ್ವಹಣೆ ಮಾಡಬಹುದು’ ಎಂದು ಹನುಮಂತಪ್ಪ ತಿಳಿಸಿದರು.

ಪ್ರತಿಕ್ರಿಯಿಸಿ (+)