ಗುರುವಾರ , ನವೆಂಬರ್ 14, 2019
19 °C
ಕಂಪನಿಯ ₹ 38 ಕೋಟಿ ಬೇರೊಂದು ಖಾತೆಗೆ ವರ್ಗಾವಣೆ

‘ಗೋಲ್ಡ್‌ಮನ್‌ ಸಾಚ್‌’ ಉಪಾಧ್ಯಕ್ಷ ಬಂಧನ

Published:
Updated:
Prajavani

ಬೆಂಗಳೂರು: ಮಾರತ್ತಹಳ್ಳಿಯ ‘ಗೋಲ್ಡ್‌ಮನ್‌ ಸಾಚ್‌’ ಕಂಪನಿಗೆ ಸೇರಿದ ₹ 38 ಕೋಟಿ ಅನ್ನು ಅನ್ಯ  ಬ್ಯಾಂಕ್‌ನ ಖಾತೆಗೆ ವರ್ಗಾಯಿಸಿ ವಂಚಿಸಿದ ಆರೋಪದಡಿ, ಕಂಪನಿ ಉಪಾಧ್ಯಕ್ಷ  ಅಶ್ವನಿ ಜುಂಜುವಾಲ್ (36), ಮಾಜಿ ಉದ್ಯೋಗಿ ವೇದಾಂತ್ ರುಂಗ್ಟಾ (28) ಅವರನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಂಚನೆ ಸಂಬಂಧ ಕಂಪನಿ ಕಾನೂನು ತಂಡದ ಮುಖ್ಯಸ್ಥ ಅಭಿಷೇಕ್ ಪರ್ಷಿರಾ ಇದೇ 8ರಂದು ದೂರು ನೀಡಿದ್ದರು. ಅಪರಾಧ ಸಂಚು (ಐಪಿಸಿ 34), ನಂಬಿಕೆ ದ್ರೋಹ (ಐಪಿಸಿ 408), ವಂಚನೆ (ಐಪಿಸಿ 420) ಆರೋಪದಡಿ ಅಶ್ವನಿ ಜುಂಜುವಾಲ್ ಹಾಗೂ ವೇದಾಂತ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು’ ಎಂದು ವೈಟ್‌ಫೀಲ್ಡ್ ಉಪವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್ ಹೇಳಿದರು. 

ಲಾಗಿನ್ ಐ.ಡಿ ಪಡೆದು ಕೃತ್ಯ: ‘ಎಂಬಿಎ ಪದವೀಧರನಾದ ಅಶ್ವನಿ ಜುಂಜುವಾಲ್, ಕಂಪನಿ ಉಪಾಧ್ಯಕ್ಷರಾಗಿ ಸಿಬ್ಬಂದಿ ತರಬೇತಿ, ಇತರೆ ಕೆಲಸಗಳ ಉಸ್ತುವಾರಿ ವಹಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಹಣ ಹೂಡಿಕೆ ಕಂಪನಿಯಾಗಿದ್ದರಿಂದ ನಿತ್ಯವೂ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿತ್ತು. ಅದನ್ನು ತಿಳಿದುಕೊಂಡಿದ್ದ ಆರೋಪಿ, ಕಿರಿಯ ಉದ್ಯೋಗಿಗಳಾದ ಗೌರವ್ ಮಿಶ್ರಾ, ಅಭಿಷೇಕ್ ಯಾದವ್ ಹಾಗೂ ಸುಜಿತ್ ಅಪ್ಪಯ್ಯ ಅವರನ್ನು ಪರಿಚಯ ಮಾಡಿಕೊಂಡಿದ್ದ. ತರಬೇತಿ ನೆಪದಲ್ಲಿ ಮೂವರ ಲಾಗಿನ್ ಐ.ಡಿಗಳನ್ನು ತಿಳಿದುಕೊಂಡಿದ್ದ. ಈ ಬಗ್ಗೆ ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ವಿವರಿಸಿದರು.

‘ನೀರು ಹಾಗೂ ಟೀ–ಕಾಫಿ ತರಲು ಉದ್ಯೋಗಿಗಳನ್ನು ಹೊರಗಡೆ ಕಳುಹಿಸಿ ಲಾಗಿನ್ ಐ.ಡಿ ಬಳಸಿ ಕಂಪ್ಯೂಟರ್ ಆನ್‌ ಮಾಡುತ್ತಿದ್ದ. ಆ ಮೂಲಕವೇ ಕಂಪನಿಗೆ ಸಂಬಂಧಪಟ್ಟ ₹ 38 ಕೋಟಿ ಅನ್ನು ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೈನಾ (ಏಸಿಯಾ) ಲಿಮಿಟೆಡ್ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದ’ ಎಂದರು.

ಆಂತರಿಕ ತನಿಖೆ: ‘ಹಣ ವರ್ಗಾವಣೆ ಬಗ್ಗೆ ಅನುಮಾನಗೊಂಡಿದ್ದ ಹಣಕಾಸು ವಿಭಾಗದ ಸಿಬ್ಬಂದಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆಂತರಿಕ ತನಿಖೆ ಕೈಗೊಂಡಾಗ ಗೌರವ್ ಮಿಶ್ರಾ, ಅಭಿಷೇಕ್ ಯಾದವ್ ಹಾಗೂ ಸುಜಿತ್ ಅಪ್ಪಯ್ಯ ಲಾಗಿನ್ ಐ.ಡಿಯಿಂದ ಹಣ ವರ್ಗಾವಣೆ ಆಗಿದ್ದು ಗಮನಕ್ಕೆ ಬಂದಿತ್ತು’ ಎಂದು ಪೊಲೀಸರು ಹೇಳಿದರು.

‘ಮೂವರನ್ನೂ ವಿಚಾರಣೆಗೆ ಒಳಪಡಿಸಿದಾಗ, ತಮಗೂ ಪ್ರಕರಣಕ್ಕೂ ಸಂಬಂಧ ಇಲ್ಲ. ಅಶ್ವನಿ ಜುಂಜುವಾಲ್ ಅವರಿಗೆ ಲಾಗಿನ್ ಐ.ಡಿ ನೀಡಿರುವುದಾಗಿ ತಿಳಿಸಿದರು. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಕೆಲ ಸುಳಿವು ಸಿಕ್ಕಿತ್ತು. ಆಂತರಿಕ ತನಿಖೆ ಆರಂಭ ಆದಂತೆ ತಲೆಮರೆಸಿಕೊಂಡಿದ್ದರು. ಪತ್ತೆ ಮಾಡಿ ವಶಕ್ಕೆ ಪಡೆದು ತನಿಖೆ ಮಾಡಿ ದಾಗ ತಪ್ಪೊಪ್ಪಿಕೊಂಡರು’ ಎಂದರು.

₹ 47 ಲಕ್ಷ ಕಳೆದುಕೊಂಡಿದ್ದ: ’ಹಣ ಕಟ್ಟಿ ಆನ್‌ಲೈನ್‌ ಗೇಮ್‌ ಆಡುತ್ತಿದ್ದ ಅಶ್ವನಿ ಜುಂಜುವಾಲ್, ಅದರಿಂದಾಗಿ ₹ 47 ಲಕ್ಷ ಕಳೆದುಕೊಂಡಿದ್ದ. ವಿವಿಧ ಬ್ಯಾಂಕ್‌ಗಳಿಂದ ವೈಯಕ್ತಿಕ ಸಾಲ ಸಹ ಪಡೆದಿದ್ದ. ಅದನ್ನು ಮರಳಿಸಲಾಗದ ಸ್ಥಿತಿಗೆ ಬಂದು ತಲುಪಿದ್ದ’ ಎಂದು ಪೊಲೀಸರು ಹೇಳಿದರು.

 

ಪ್ರತಿಕ್ರಿಯಿಸಿ (+)