ಪ್ರತಿ ತಿಂಗಳು ನಾಗರಿಕ ಸಮಿತಿ ಸಭೆ: ಎಂ.ಎನ್. ನಾಗರಾಜ

ಶುಕ್ರವಾರ, ಮಾರ್ಚ್ 22, 2019
27 °C
ಪೊಲೀಸ್ ಕಮಿಷನರ್ ಮೊದಲ ಫೋನ್ ಇನ್ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ

ಪ್ರತಿ ತಿಂಗಳು ನಾಗರಿಕ ಸಮಿತಿ ಸಭೆ: ಎಂ.ಎನ್. ನಾಗರಾಜ

Published:
Updated:
Prajavani

ಹುಬ್ಬಳ್ಳಿ: ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಕೇಳಿ ಪರಿಹಾರ ನೀಡುಲು ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ಅವರು ನಡೆಸಿದ ಮೊದಲ ಫೋನ್ ಇನ್‌ ಕಾರ್ಯಕ್ರಮಕ್ಕೆ ಶುಕ್ರವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಒಂದು ಗಂಟೆ ಹತ್ತು ನಿಮಿಷಗಳ ಅವಧಿಯಲ್ಲಿ 32 ಮಂದಿ ಕರೆ ಮಾಡಿ ಸಮಸ್ಯೆಗಳನ್ನು ಹೇಳಿ, ಸಹಾಯ ಕೋರಿದರು. ಕೆಲವು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸಂಬಂಧಿಸಿದ ಠಾಣೆ ಇನ್‌ಸ್ಪೆಕ್ಟರ್‌ಗಳಿಗೆ ನಾಗರಾಜ ಸ್ಥಳದಲ್ಲೇ ಸೂಚನೆ ನೀಡಿದರು.

ಗೋಕುಲ ರಸ್ತೆಯ ನಿವಾಸಿ ವಿವೇಕಾನಂದ ಎಂಬುವರು ನಾಗರಿಕ ಸಮಿತಿ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್, ‘ಈಗಾಗಲೇ ನಾಗರಿಕ ಸಮಿತಿಗಳನ್ನು ರಚಿಸಲಾಗಿದ್ದು, ಇನ್ನು ಮುಂದೆ ಪ್ರತಿ ತಿಂಗಳು ತಪ್ಪದೆ ಸಭೆ ಕರೆಯಲಾಗುವುದು. ನಿಮ್ಮಂತೆಯೇ ಯೋಚಿಸುವ ಸ್ಥಳೀಯರ ಹೆಸರು ನೀಡಿದರೆ ಅವರನ್ನು ಸಹ ಸಮಿತಿಗೆ ಸೇರಿಸಲಾಗುವುದು’ ಎಂದರು.

ಹೊಸ ಗಸ್ತು ಪದ್ಧತಿ ಸಮರ್ಪಕವಾಗಿ ಜಾರಿಯಾಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದರು. ‘ಹೊಸ ಗಸ್ತು ವ್ಯವಸ್ಥೆಯನ್ನು ಸಮಪರ್ಕವಾಗಿ ಜಾರಿ ಮಾಡುವುದು ಆಯಾ ಠಾಣಾಧಿಕಾರಿಗಳ ಕರ್ತವ್ಯ. ಈ ಪದ್ಧತಿಯಲ್ಲಿ ಪ್ರತಿ ಠಾಣೆಯಲ್ಲಿ 64 ಬೀಟ್‌ಗಳಿದ್ದು, ಎಲ್ಲರೂ ಜನರನ್ನು ಸಂಪರ್ಕಿಸಬೇಕು. ಈ ಬಗ್ಗೆ ವರದಿ ಪಡೆಯಲಾಗುವುದು. ಇದನ್ನು ಜಾರಿ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆಯನ್ನೂ ನೀಡಿದರು.

‘ಧಾರವಾಡದಲ್ಲಿ ನಾಗರಿಕರು ಸ್ವಯಂ ಆಸಕ್ತಿಯಿಂದ ರಾತ್ರಿ ಗಸ್ತಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದು ಯಾವ ಮಟ್ಟಿಗೆ ಯಶಸ್ಸು ಕಾಣುತ್ತದೆ ನೋಡಿಕೊಂಡು, ಹುಬ್ಬಳ್ಳಿಯಲ್ಲಿಯೂ ಜಾರಿ ಮಾಡಲಾಗುವುದು. ಅಲ್ಲದೆ ಅಂತಹವರಿಗೆ ಗುರುತಿನ ಚೀಟಿಯನ್ನು ಸಹ ನೀಡಲಾಗುವುದು’ ಎಂದು ತಿಳಿಸಿದರು.

‘ಚುನಾವಣೆ ಇರುವುದರಿಂದ ಅಧಿಕಾರಿಗಳು ಅಲ್ಲಲ್ಲಿ ಸಭೆಗಳನ್ನು ಸಹ ಆಯೋಜಿಸುತ್ತಿದ್ದಾರೆ. ನಾನೂ ಸಹ ಇಂತಹ ಕೆಲವು ಸಭೆಗಳಲ್ಲಿ ಭಾಗವಹಿಸುತ್ತೇನೆ’ ಎಂದು ಅವರು ತಿಳಿಸಿದರು.

ಸಂಚಾರ ಸಮಸ್ಯೆ ದೂರುಗಳೇ ಹೆಚ್ಚು: ಹಳೇ ಹುಬ್ಬಳ್ಳಿ, ಕೊಪ್ಪಿಕಾರ್ ರಸ್ತೆ ಹಾಗೂ ಚನ್ನಮ್ಮ ವೃತ್ತದ ಬಳಿ ವಾಹನ ದಟ್ಟಣೆ ಸಮಸ್ಯೆ ಹಾಗೂ ಪಾದಚಾರಿ ಮಾರ್ಗ ಆಕ್ರಮಿಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಹೆಚ್ಚಿನ ಮಂದಿ ದೂರು ಹೇಳಿದರು.

‘ಹಳೇ ಹುಬ್ಬಳ್ಳಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಆಗಿದೆ. ಅಲ್ಲಿ ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಸಮಸ್ಯೆ ಪರಿಹರಿಸಲಾಗುವುದು. ಪಾದಚಾರಿ ಮಾರ್ಗ ಅತಿಕ್ರಮಣ ಇದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕಮಿಷನರ್ ಹೇಳಿದರು.

‘ಪಾನಮತ್ತರಾಗಿ ವಾಹನ ಚಲಾಯಿಸುವವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಕುಡಿದು ವಾಹನ ಚಾಲನೆ ಮಾಡುವವರಿಗೆ ಧಾರವಾಡದಲ್ಲಿ ಈಗಾಗಲೇ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಅದನ್ನು ಹುಬ್ಬಳ್ಳಿಯಲ್ಲಿಯೂ ಜಾರಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಇನ್‌ಸ್ಪೆಕ್ಟರ್‌ಗೆ ₹2 ಸಾವಿರ ಬಹುಮಾನ: ಹಳೇ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಅವರು ಸ್ವಯಂ ಆಸಕ್ತಿ ವಹಿಸಿ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿರುವುದರಿಂದ ತುಂಬ ಅನುಕೂಲವಾಗಿದೆ ಎಂದು ಅಲ್ಲಿನ ವ್ಯಾಪಾರಿಯೊಬ್ಬರು ಹೇಳಿದರು.

ಇದಕ್ಕೆ ತುಂಬ ಮೆಚ್ಚುಗೆ ವ್ಯಕ್ತಪಡಿಸಿದ ಕಮಿಷನರ್, ಜನಮುಖಿಯಾಗಿ ಚಿಂತಿಸಿ ಕ್ರಮ ಕೈಗೊಂಡಿರುವ ಜಾಕ್ಸನ್‌ ಡಿಸೋಜಾ ಅವರಿಗೆ ₹2 ಸಾವಿರ ನಗದು ಬಹುಮಾನ ನೀಡಲಾಗುವುದು. ಉತ್ತಮ ಕೆಲಸ ಮಾಡುವ ಸಿಬ್ಬಂದಿಯನ್ನು ಮೊದಲಿನಿಂದಲೂ ಪ್ರೋತ್ಸಾಹಿಸಲಾಗುತ್ತಿದೆ. ಸುಮಾರು ₹1.98 ಲಕ್ಷ ಬಹುಮಾನವನ್ನು ಈ ವರೆಗೆ ನೀಡಲಾಗಿದೆ ಎಂದರು.

ಡಿಸಿಪಿಗಳಾದ ಡಿ.ಎಲ್. ನಾಗೇಶ್, ಡಾ. ಶಿವಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !