ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಸಿದ ಪಾತ್ರಗಳಿಗೆ ಜೀವ ತುಂಬಲಿರುವ ಮಕ್ಕಳು

Last Updated 4 ಜನವರಿ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕೀಳರಿಮೆಯೆಂಬ ಸಂಕೋಲೆಯ ಕವಚವನ್ನು ಕಳಚಿಟ್ಟು, ಆತ್ಮವಿಶ್ವಾಸದ ರಂಗಿನ ಅಂಗಿ ತೊಟ್ಟು ನಾಟಕವೊಂದನ್ನು ಪ್ರದರ್ಶನ ಮಾಡಲು ರಾಮಗೊಂಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಯಾರಿ ಮಾಡಿಕೊಂಡಿದ್ದಾರೆ.

ಕನ್ನಡದ ನಲ್ನುಡಿಗಳು ಮತ್ತು ಇಂಗ್ಲಿಷ್‌ನ ಸ್ವಲ್ಪ ಸಂಭಾಷಣೆಗಳ ಸಾರ ಹೊಂದಿರುವ ಈ ನಾಟಕವನ್ನು ಮಕ್ಕಳೇ ರಚಿಸಿದ್ದಾರೆ. ಇದಕ್ಕೆ ‘ಟುಡು ಟುಡು–ಸ್ವೀಟಿ ವಾಟ್‌ ಟು ಡು’ ಎಂಬ ಸೊಗಸಾದ ಹೆಸರಿಟ್ಟಿದ್ದಾರೆ. ಮಕ್ಕಳ ಈ ಪ್ರಯತ್ನಕ್ಕೆ ‘ವೈಟ್‌ಫೀಲ್ಡ್‌ ರೆಡಿ’ ಸಂಸ್ಥೆ ಬೆನ್ನು ತಟ್ಟುತ್ತಿದೆ.

ಸಂಸ್ಥೆಯು ಸರ್ಕಾರಿ ಶಾಲಾ ಮಕ್ಕಳಿಗಾಗಿ ಆಯೋಜಿಸುವ ಹಾಡು, ನೃತ್ಯ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಮೂರ್ನಾಲ್ಕು ವರ್ಷಗಳಿಂದ ಭಾಗವಹಿಸುತ್ತಲೇ ಬಂದಿದ್ದಾರೆ. ಅವರಲ್ಲಿ ನಾಟಕದಲ್ಲಿ ಅಭಿನಯಿಸಬೇಕು ಎಂಬ ಹಂಬಲ ಹುಟ್ಟಿದ್ದನ್ನು ಹಂಚಿಕೊಂಡಿದ್ದಾರೆ. ಆ ಆಸೆಗೆ ಈ ಸಂಸ್ಥೆ ನೀರೆರೆಯುತ್ತಿದೆ.

ಸ್ಟೀಟಿ ಎಂಬ ಬಾಲೆಯು ಶಾಲೆಯಲ್ಲಿ ಹೆಚ್ಚು ಅಧೀರಳಾಗಿ ಇರುತ್ತಾಳಂತೆ. ಅದರಿಂದಾಗಿ ಅವಳು ಶಾಲೆ, ಮನೆ ಮತ್ತು ಊರ ವಾತಾವರಣದಲ್ಲಿ ಪಡೆಯುವುದು ಅಹಿತದ ಅನುಭವಗಳನ್ನು. ಆತ್ಮವಿಶ್ವಾಸದ ಟಾನಿಕ್‌ ಸೇರಿದ ಬಳಿಕ, ಅವಳಲ್ಲಿ ಆಗುವ ಧೈರ್ಯದ ಬದಲಾವಣೆಯೇ ಈ ರಂಗರೂಪದ ಕಥಾಹಂದರವಂತೆ.

ಮಕ್ಕಳು ನಿತ್ಯದ ಬದುಕಿನಲ್ಲಿ ಕಾಣುವ ತರಕಾರಿ ಮಾರುವವರು, ವೈದ್ಯ, ಪೊಲೀಸ್, ಶಿಕ್ಷಕ ವೃತ್ತಿಯ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅವುಗಳನ್ನು ತಮ್ಮಲ್ಲಿ ಆವಾಹಿಸಿಕೊಳ್ಳಲು ಸುಮಾರು 200 ಗಂಟೆಗಳಿಗಿಂತ ಹೆಚ್ಚು ಕಾಲ ತಾಲೀಮು ಮಾಡಿದ್ದಾರೆ. ಈ ಮಕ್ಕಳು ನಿದ್ದೆಗಣ್ಣಿನಿಂದ ಎದ್ದು ಬರುವ ಮುನ್ನವೇ ಹಾಜರಾಗಿ ರಂಗಕರ್ಮಿಗಳಾದ ಮೈತ್ರಿ ಗೋಪಾಲಕೃಷ್ಣ, ಅನಿತಾ ಸಂತಾನಮ್ ರಂಗ ಕಲಿಕೆಯ ಧ್ಯಾನ ಹೇಳಿಕೊಟ್ಟಿದ್ದಾರೆ. ಪೋಷಕರು ರಜೆಯಲ್ಲಿ ಊರಿಗೆ ಹೋಗಿದ್ದರೂ ಮಕ್ಕಳುರಂಗಪಾಠಕ್ಕಾಗಿ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದರಂತೆ. ಆ ಪರಿಯ ಆಸಕ್ತಿ ಅವರಲ್ಲಿ ಬೆಳೆದಿದೆ.

ಶಾಲೆಯ 6ನೇ ತರಗತಿಯ 12 ವಿದ್ಯಾರ್ಥಿಗಳು ಇದರಲ್ಲಿ ಪಾತ್ರಧಾರಿಗಳಾಗಿದ್ದಾರೆ. ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ರಂಗಸಜ್ಜಿಕೆಯಲ್ಲಿ ಕೈಜೋಡಿಸಿದ್ದಾರೆ. ನಾಟಕದಲ್ಲಿನ ಪುಟ್ಟ ಹಾಡುಗಳನ್ನು ಈ ಪುಟಾಣಿಗಳೇ ಬರೆದಿದ್ದಾರೆ.

‘ಈ ಮೊದಲು ಅಪರಿಚಿತರ ಹತ್ತಿರ ಮಾತನಾಡಲು ಭಯ ಆಗುತ್ತಿತ್ತು. ಗೊತ್ತಾಗದ ವಿಷಯಗಳ ಬಗ್ಗೆ ಟೀಚರ್‌ಗೆ ಪ್ರಶ್ನೆಗಳನ್ನು ಕೇಳಲು ಹೆದರಿಕೆ ಆಗುತ್ತಿತ್ತು. ನಾಟಕ ಕಲಿತಾ–ಕಲಿತಾ ನಮಗೆ ಈಗ ಸ್ವಲ್ಪ ಧೈರ್ಯ ಬಂದಿದೆ’ ಎನ್ನುತ್ತಾಳೆ ಮಂತ್ರವಾದಿಯ ಪಾತ್ರಧಾರಿ ನಾಗರತ್ನ.

ಒಂದು ಗಂಟೆಯ ಈ ನಾಟಕ ಪ್ರದರ್ಶನದಿಂದ ಸಂಗ್ರಹವಾಗುವ ದೇಣಿಗೆಯನ್ನು, ಮಕ್ಕಳ ಮುಂದಿನ ರಂಗ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.

***

20 ಶಾಲೆಗಳಲ್ಲಿ ಈ ನಾಟಕವನ್ನು ವಾರ್‍ಯಾಂತದಲ್ಲಿ ಪ್ರದರ್ಶನ ಮಾಡಿ, 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲುಪುವ ಗುರಿಯಿದೆ.

-ಸುಮೇಧಾ ರಾವ್, ಸಹ–ಸಂಸ್ಥಾಪಕಿ, ವೈಟ್‌ಫೀಲ್ಡ್‌ ರೆಡಿ

ಪ್ರದರ್ಶನ

ಜ.5 ಸಂಜೆ 6.30

ಜ.6 ಮಧ್ಯಾಹ್ನ 3 ಮತ್ತು ಸಂಜೆ 6.30

ಸ್ಥಳ: ಜಾಗೃತಿ ಥಿಯೇಟರ್, ವೈಟ್‌ಫೀಲ್ಡ್‌

ಸಂಪರ್ಕ: 9886536240

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT