ರಸ್ತೆ ಸ್ವಚ್ಛತೆಗೆ 34 ಯಂತ್ರ: ಬಿಬಿಎಂಪಿ ಪ್ರಸ್ತಾವಕ್ಕೆ ಸರ್ಕಾರದ ಅನುಮೋದನೆ

7

ರಸ್ತೆ ಸ್ವಚ್ಛತೆಗೆ 34 ಯಂತ್ರ: ಬಿಬಿಎಂಪಿ ಪ್ರಸ್ತಾವಕ್ಕೆ ಸರ್ಕಾರದ ಅನುಮೋದನೆ

Published:
Updated:
Prajavani

ಬೆಂಗಳೂರು: ರಸ್ತೆಗಳನ್ನು ಸ್ವಚ್ಛ ಮಾಡಲು ಬಿಬಿಎಂಪಿ ಮುಂದಿನ ಎರಡು ತಿಂಗಳೊಳಗೆ 34 ಸ್ವಯಂಚಾಲಿತ ಕಸ ಗುಡಿಸುವ ಯಂತ್ರಗಳನ್ನು ಬಳಸಲು ಮುಂದಾಗಿದೆ.

ಪಾಲಿಕೆ ಈಗಾಗಲೇ ಒಂದು ವಲಯಕ್ಕೆ ಇಂತಹ 8 ವಾಹನಗಳನ್ನು ಒದಗಿಸಿದೆ. 2017ರ ಮೇ ತಿಂಗಳಿನಿಂದ ಇವು ಬಳಕೆಯಲ್ಲಿವೆ. ಸದ್ಯ ಬಿಬಿಎಂಪಿ 17 ಯಂತ್ರಗಳನ್ನು ಖರೀದಿಸಲಿದೆ. 17 ಯಂತ್ರಗಳನ್ನು ಬಾಡಿಗೆಗೆ ಪಡೆಯಲಿದೆ. ನಗರದ 500 ಕಿ.ಮೀ ಉದ್ದ ಮುಖ್ಯರಸ್ತೆಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಇವುಗಳನ್ನು ಬಳಸಿಕೊಳ್ಳಲು ಪಾಲಿಕೆ ಯೋಜಿಸಿದೆ.

ಪಾಲಿಕೆಯ ಅಧಿಕಾರಿಗಳ ಪ್ರಕಾರ 100 ಮಂದಿ ಪೌರಕಾರ್ಮಿಕರು ಮಾಡುವ ಕೆಲಸವನ್ನು ಒಂದು ಯಂತ್ರ ನಿರ್ವಹಿಸುತ್ತದೆ. ಈ ಯಂತ್ರಗಳ ತಳ ಭಾಗದಲ್ಲಿ ಹೀರಿಕೊಳ್ಳುವ ತಂತ್ರಜ್ಞಾನ ಹೊಂದಿದ ದೊಡ್ಡ ಗಾತ್ರದ ಬ್ರಶ್‌ಗಳು ಇರಲಿವೆ. ಇವುಗಳಲ್ಲಿ ದೊಡ್ಡ ಯಂತ್ರಗಳು ಪ್ರತಿದಿನ 50 ಕಿ.ಮೀ ರಸ್ತೆಯನ್ನು ಸ್ವಚ್ಛ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಚಿಕ್ಕ ಯಂತ್ರಗಳು 30 ಕಿ.ಮೀ ರಸ್ತೆಯನ್ನು ಸ್ವಚ್ಛಗೊಳಿಸಲಿವೆ. ಇವುಗಳನ್ನು ಬಳಸಿ ನಿತ್ಯ 300 ಕಿ.ಮೀ ಉದ್ದದ ರಸ್ತೆ ಸ್ವಚ್ಛಗೊಳಿಸಲು ಸಾಧ್ಯವಿದೆ.

ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ. ರಂದೀಪ್‌, ‘ಪ್ರತಿಯೊಂದು ವಾಹನದ ಖರೀದಿಗೆ ₹70 ಲಕ್ಷ ವೆಚ್ಚವಾಗಲಿದೆ. 17 ಯಂತ್ರಗಳ ಖರೀದಿಗೆ ಹಾಗೂ 17 ಯಂತ್ರಗಳನ್ನು ಬಾಡಿಗೆ ತೆಗೆದುಕೊಳ್ಳಲು ಅನುಮೋದನೆ ಸಿಕ್ಕಿದೆ. ಖರೀದಿಸಿದ ಬಳಿಕ  ಅವುಗಳನ್ನು ವಲಯವಾರು ರಸ್ತೆ ಮೂಲಸೌಕರ್ಯ ವಿಭಾಗದ ಎಂಜಿನಿಯರ್‌ಗಳಿಗೆ ಒಪ್ಪಿಸಲಾಗುವುದು’ ಎಂದು ತಿಳಿಸಿದರು.

‘ಯಾವ ಯಂತ್ರ ಎಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿಯುವ ಸಲುವಾಗಿ ಅವುಗಳಲ್ಲಿ ಜಿಪಿಎಸ್‌ ಅಳವಡಿಸಲಾಗಿರುತ್ತದೆ. ವಿಡಿಯೊ ಸೌಲಭ್ಯದ ಮೂಲಕ ಅವುಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇಡಲಾಗುತ್ತದೆ. ಅದರ ಆಧಾರದ ಮೇಲೆ ಗುತ್ತಿಗೆದಾರರಿಗೆ ಹಣ ಪಾವತಿಸುತ್ತೇವೆ’ಎಂದು ಇನ್ನೊಬ್ಬರು ಅಧಿಕಾರಿ ತಿಳಿಸಿದರು.

‘ನಗರದ ರಸ್ತೆಗಳು ದೂಳುಮಯವಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗಳು ಮತ್ತಷ್ಟು ಮಾಲಿನ್ಯವನ್ನು ಉಂಟು ಮಾಡುತ್ತಿವೆ. ಯಂತ್ರಗಳು ಮಾಲಿನ್ಯವನ್ನು ತಡೆಗಟ್ಟಲು ಸಹಕಾರಿ. ರಸ್ತೆಯಲ್ಲಿ ಕಸ ಗುಡಿಸುವ ಪೌರಕಾರ್ಮಿಕರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಯಂತ್ರಗಳ ಬಳಕೆ ಆರಂಭಿಸಿದ ಪೌರಕಾರ್ಮಿಕರು ಅಪಾಯಕರ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸಬೇಕಾಗಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !