ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳನ್ನು ನಾಯಿ, ಮುಂಗುಸಿಗೆ ಹೋಲಿಸಿದ ಶಾ

Last Updated 6 ಏಪ್ರಿಲ್ 2018, 19:47 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಹಾವು, ಮುಂಗುಸಿ, ನಾಯಿ ಮತ್ತು ಬೆಕ್ಕುಗಳು ಒಂದಾಗುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ವಿರೋಧ ಪಕ್ಷಗಳನ್ನು ಟೀಕಿಸಿದ್ದಾರೆ.

ಪಕ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಅವರು ಶುಕ್ರವಾರ ಇಲ್ಲಿ ಮಾತನಾಡಿದರು.

‘2019ರ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಎದುರಾಳಿಗಳನ್ನು ಒಗ್ಗೂಡಿಸುವ ಯತ್ನ ನಡೆಯುತ್ತಿದೆ. ದೊಡ್ಡ ಪ್ರವಾಹ ಬಂದಾಗ ಎಲ್ಲವೂ ಕೊಚ್ಚಿಕೊಂಡು ಹೋಗುತ್ತವೆ. ಆದರೆ ಆಲದಮರ ಮಾತ್ರ ಉಳಿಯುತ್ತದೆ. ಜೀವ ಉಳಿಸಿಕೊಳ್ಳುವ ಸಲುವಾಗಿ ಹಾವು, ಮುಂಗುಸಿ, ನಾಯಿ, ಬೆಕ್ಕುಗಳು ಮರವನ್ನೇರುತ್ತವೆ’ ಎಂದು ಶಾ ಹೇಳಿದ್ದಾರೆ.

‘ಮೋದಿ ಎಂಬ ಪ್ರವಾಹದ ಕಾರಣದಿಂದಾಗಿ, ಬೆಕ್ಕು, ನಾಯಿ, ಮುಂಗುಸಿಗಳು ಒಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗುತ್ತಿವೆ’ ಎಂದಿದ್ದಾರೆ.‌

ಟಿಡಿಪಿ, ಟಿಆರ್‌ಎಸ್ ಹಾಗೂ ತೃಣಮೂಲ ಕಾಂಗ್ರೆಸ್‌ನಂತಹ ಪಕ್ಷಗಳು ಬಿಜೆಪಿ ಎದುರಿಸಲು ಮೈತ್ರಿಕೂಟ ರಚನೆಗೆ ಯತ್ನಿಸುತ್ತಿರುವುದನ್ನು ಉಲ್ಲೇಖಿಸಿ ಶಾ ಈ ರೀತಿ ಹೋಲಿಕೆ ಮಾಡಿದ್ದಾರೆ.

ಸ್ಪಷ್ಟನೆ: ತಮ್ಮ ಉದ್ದೇಶ ಪ್ರತಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸುವುದು ಆಗಿರಲಿಲ್ಲ ಎಂದು ಬಳಿಕ ಅವರು ಸ್ಪಷ್ಟನೆ ನೀಡಿದ್ದಾರೆ. ಸಮಾನ ಸೈದ್ಧಾಂತಿಕ ನಿಲುವು ಹೊಂದಿಲ್ಲದ ಪಕ್ಷಗಳು ಮೋದಿ ಅವರ ಭಯದಿಂದ ಒಗ್ಗೂಡುತ್ತಿವೆ ಎಂದು ಹೇಳುವುದಷ್ಟೇ ಉದ್ದೇಶವಾಗಿತ್ತು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮೋದಿ ಸರ್ಕಾರವು ಮೀಸಲಾತಿಯನ್ನು ವಿರೋಧಿಸುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ವಿರೋಧಪಕ್ಷಗಳ ಕುರಿತ ಶಾ ಅವರ ಹೇಳಿಕೆಯು ಅವರ ಆಲೋಚನಾ ರೀತಿಯನ್ನು ತೋರಿಸುತ್ತದೆ. ಇದು ನಾಚಿಕೆಗೇಡಿನದ್ದು ಎಂದು ಕಾಂಗ್ರೆಸ್‌ನ ಹಿರಿಯ ವಕ್ತಾರ ಆನಂದ್‌ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

‘ಇಂತಹ ಹೇಳಿಕೆ ಖಂಡನೀಯ. ಅವರಿಂದ ಇನ್ನೇನನ್ನೂ ನಾವು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT