ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಆರ್ಥಿಕ ಅಶಿಸ್ತು: ಚಾಟಿ ಬೀಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಹೊಸ ವಸತಿ ಯೋಜನೆಗಳಿಗೆ ಬ್ರೇಕ್‌!
Last Updated 4 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿರುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ. ಈ ಕುರಿತು ಬಿಡಿಎಗೆ ಇತ್ತೀಚೆಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಆರ್ಥಿಕ ಶಿಸ್ತು ರೂಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಅವರು ಬರೆದಿರುವ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನ ಇಲ್ಲದೇ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದೂ ಬಿಡಿಎ ಹಣಕಾಸು ಬಿಕ್ಕಟ್ಟು ಎದುರಿಸಲು ಕಾರಣ. ಇನ್ನುಮುಂದೆ ಹಣಕಾಸಿನ ಲಭ್ಯತೆಯನ್ನು ದೃಢಪಡಿಸಿಕೊಳ್ಳದೇ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಬಿಡಿಎ ವಸತಿ ಯೋಜನೆಗಳ ಬಗ್ಗೆಯೂ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದ್ದಾರೆ. ‘ಬಿಡಿಎ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿಮಾರಾಟವಾಗದ ಫ್ಲ್ಯಾಟ್‌ಗಳ ದೊಡ್ಡ ಪಟ್ಟಿಯೇ ಇದೆ. ಇಂತಹ ಪರಿಸ್ಥಿತಿಯಲ್ಲೂ ಅಧಿಕಾರಿಗಳು ಹೊಸ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು, ಈಗಾಗಲೇ ಹದಗೆಟ್ಟಿರುವ ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಬಿಡಿಎ ಹಿತದೃಷ್ಟಿಯಿಂದ ಇಂತಹ ಪ್ರಯತ್ನಗಳನ್ನು ಅತ್ಯಂತ ಕಠೋರವಾಗಿ ತಡೆಯಬೇಕಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಫ್ಲ್ಯಾಟ್‌ಗಳ ಮಾರಾಟಕ್ಕೆ ಆದ್ಯತೆ ನೀಡುವ ಮೂಲಕ ಹಣಕಾಸಿನ ಸ್ಥಿತಿಯನ್ನು ಬಲಪಡಿಸಲು ಕ್ರಮಕೈಗೊಳ್ಳಬೇಕು’ ಎಂದೂ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಅವರಿಂದ ಸೂಚನೆ ಬಂದ ಬಳಿಕ ಎಚ್ಚೆತ್ತ ಬಿಡಿಎ ಹೊಸ ವಸತಿ ಯೋಜನೆ ಕೈಗೆತ್ತಿಕೊಳ್ಳುವುದನ್ನು ಸ್ಥಗಿತಗೊಳಿಸಿದೆ.

‘ಇತ್ತೀಚೆಗೆ ಯಾವುದೇ ಹೊಸ ವಸತಿ ಯೋಜನೆಗಳನ್ನು ನಾವು ಕೈಗೆತ್ತಿಕೊಂಡಿಲ್ಲ. ನಿರ್ಮಾಣ ಹಂತದಲ್ಲಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿದ್ದೇವೆ. ಫ್ಲ್ಯಾಟ್‌ಗಳ ಮಾರಾಟಕ್ಕೆ ಉತ್ತೇಜನೆ ನೀಡಲು ಕ್ರಮಕೈಗೊಂಡಿದ್ದೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿಯಾಗಿದ್ದ ಎನ್‌.ಜಿ.ಗೌಡಯ್ಯ ಅವರು ವಸತಿ ಯೋಜನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವರ ಅವಧಿಯಲ್ಲಿ ಅನೇಕ ಹೊಸ ವಸತಿ ಯೋಜನೆಗಳನ್ನು ಬಿಡಿಎ ಕೈಗೆತ್ತಿಕೊಂಡಿತ್ತು. ಇತ್ತೀಚೆಗೆ ಅವರು ಭ್ರಷ್ಟಾಚಾರ ನಿಗ್ರಹ ದಳ ಅವರ ಮನೆಗೆ ಇತ್ತೀಚೆಗೆ ದಾಳಿ ನಡೆಸಿದಾಗ 18.2 ಕೆ.ಜಿ. ಚಿನ್ನ, 10 ಕೆ.ಜಿ ಬೆಳ್ಳಿ ಪತ್ತೆಯಾಗಿತ್ತು. ಅವರು 2 ಮನೆ, 8 ನಿವೇಶನ, 14 ಫ್ಲ್ಯಾಟ್‌, 3 ಕಾರು ಹಾಗೂ ಬ್ಯಾಂಕ್‌ಗಳಲ್ಲಿ ಠೇವಣಿ ಸೇರಿದಂತೆ ₹ 1.2 ಕೋಟಿ ನಗದು ಹೊಂದಿರುವುದು ಬೆಳಕಿಗೆ ಬಂದಿತ್ತು. ಬಳಿಕ ಅವರನ್ನು ಅಮಾನತು ಮಾಡಲಾಗಿತ್ತು.

ಬಿಡಿಎ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ 2,300ಕ್ಕೂ ಅಧಿಕ ಫ್ಲ್ಯಾಟ್‌ಗಳು ಇನ್ನೂ ಮಾರಾಟವಾಗಿಲ್ಲ. ಅವುಗಳ ಮಾರಾಟಕ್ಕೆ ವಿವಿಧ ಮಾರ್ಗೋಪಾಯಗಳನ್ನು ಬಿಡಿಎ ಹುಡುಕುತ್ತಿದೆ.

ಮೈಸೂರು ರಸ್ತೆಯ ಬಳಿ ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ 450ಕ್ಕೂ ಹೆಚ್ಚು 2 ಬಿಎಚ್‌ಕೆ ಫ್ಲ್ಯಾಟ್‌ಗಳು ಹಾಗೂ ಕಣಮಿಣಿಕೆಯಲ್ಲಿ ನಿರ್ಮಿಸಿರುವ 900ಕ್ಕೂ ಹೆಚ್ಚು2ಬಿಎಚ್‌ಕೆ ಫ್ಲ್ಯಾಟ್‌ಗಳು ಮಾರಾಟಕ್ಕೆ ಲಭ್ಯ ಇವೆ. ಇಲ್ಲಿ ವಸತಿ ಸಮುಚ್ಚಯಗಳಲ್ಲಿ ಪ್ಲ್ಯಾಟ್‌ ಖರೀದಿಸುವವರಿಗೆ ಪ್ರಾಧಿಕಾರವು ಶೇ 5ರಷ್ಟು ರಿಯಾಯಿತಿ ನೀಡುತ್ತಿದೆ. 10 ಅಥವಾ ಅದಕ್ಕಿಂತ ಹೆಚ್ಚು ಫ್ಲ್ಯಾಟ್‌ ಖರೀದಿಸುವವರಿಗೆ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಮನರಂಜನಾ ಕೇಂದ್ರ

ಖಾಸಗಿ ಬಿಲ್ಡರ್‌ಗಳು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಬಳಿ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಇದೇ ಮಾದರಿ ಅನುಸರಿಸಲು ಹೊರಟಿರುವ ಬಿಡಿಎ ಫ್ಲ್ಯಾಟ್‌ಗಳಿಗೆ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಬಳಿ ಮನರಂಜನಾ ಕೇಂದ್ರ ನಿರ್ಮಿಸಲು ಮುಂದಾಗಿದೆ.

ವಲಗೇರಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯದ ಬಳಿ ಮನರಂಜನಾ ಕೇಂದ್ರದ ನಿರ್ಮಾಣ ಪ್ರಗತಿಯಲ್ಲಿದೆ. ಕಣಮಿಣಿಕೆಯಲ್ಲೂ ನಿರ್ಮಿಸುವ ಪ್ರಸ್ತಾವವಿದೆ.

‘ವಲಗೇರಹಳ್ಳಿಯಲ್ಲಿ ಒಂದು ವ್ಯಾಯಾಮ ಕೇಂದ್ರ, ಗ್ರಂಥಾಲಯ, ಓದುವ ಕೊಠಡಿ ನಿರ್ಮಿಸಲಾಗುತ್ತಿದೆ. ಇಲ್ಲಿ ಶಟಲ್‌ ಬ್ಯಾಡ್ಮಿಂಟನ್‌ ಅಂಗಣವನ್ನೂ ನಿರ್ಮಿಸಲಿದ್ದೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT