ಭಾನುವಾರ, ಆಗಸ್ಟ್ 25, 2019
24 °C
ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡ (ದಕ್ಷಿಣ) ವಿಭಾಗದ ಮುಖ್ಯ ಎಂಜಿನಿಯರ್‌ ಹೊಣೆ

ವಿಶ್ವನಾಥ್‌ ಅಳಿಯನಿಗೆ ಆಯಕಟ್ಟಿನ ಹುದ್ದೆ

Published:
Updated:

ಬೆಂಗಳೂರು: ಹುಣಸೂರಿನ ಅನರ್ಹ ಶಾಸಕ ಎಚ್‌.ವಿಶ್ವನಾಥ್ ಅವರ ಅಳಿಯನಿಗೆ ಬಿಜೆಪಿ ಸರ್ಕಾರ ಆಯಕಟ್ಟಿನ ಹುದ್ದೆ ನೀಡಿದೆ.

ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಎಚ್‌.ಸಿ.ರಮೇಂದ್ರ ಅವರು ವಿಶ್ವನಾಥ್ ಅವರ ಅಳಿಯ. ಅವರನ್ನು ಸಂಪರ್ಕ ಮತ್ತು ಕಟ್ಟಡ (ದಕ್ಷಿಣ) ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಗೆ ನೇಮಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.

ಈವರೆಗೆ ಎಚ್‌.ಡಿ.ರೇವಣ್ಣ ಅವರ ಆಪ್ತ ಅಧಿಕಾರಿ ಬಿ.ಎಲ್‌.ರವೀಂದ್ರಬಾಬು ಈ ಹುದ್ದೆಯಲ್ಲಿದ್ದರು. ರವೀಂದ್ರಬಾಬು ಅವರು ಸೂಪರಿಂಟೆಂಡಿಂಗ್‌ ಎಂಜಿನಿಯರ್‌. ಮೈತ್ರಿ ಸರ್ಕಾರ ಅವಧಿಯಲ್ಲಿ ಅವರು ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ), ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್‌ ಹಾಗೂ ಪ್ರಾಮ್ಸಿಯ ಮುಖ್ಯ ಎಂಜಿನಿಯರ್ ಹುದ್ದೆ ನಿಭಾಯಿಸಿದ್ದರು.

ರಮೇಂದ್ರ ಅವರನ್ನು ಪ್ರಮುಖ ಹುದ್ದೆಗೆ ವರ್ಗಾವಣೆ ಮಾಡುವಂತೆ ವಿಶ್ವನಾಥ್‌ ಅವರು ಹಲವು ಸಲ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ.ರೇವಣ್ಣ ಅವರಿಗೆ ಮನವಿ ಮಾಡಿದ್ದರು. ಈ ವರ್ಗಾವಣೆಗೆ ರೇವಣ್ಣ ತಡೆ ಒಡ್ಡಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು. ಲೋಕೋಪಯೋಗಿ ಇಲಾಖೆಯ ಮೈಸೂರು ವೃತ್ತದಲ್ಲಿ ರಮೇಂದ್ರ ಕಾರ್ಯನಿರ್ವಹಿಸುತ್ತಿದ್ದರು.

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ವಿಶ್ವನಾಥ್‌ ಅವರು ಮುಂಬೈಗೆ ತೆರಳಿದ ಮರುದಿನವೇ ರಮೇಂದ್ರ ಅವರನ್ನು ಕಲಬುರ್ಗಿಯ ಗ್ರಾಮೀಣಾಭಿವೃದ್ಧಿ ಹಾಗೂ ಎಂಜಿನಿಯರಿಂಗ್‌ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರು ಹುದ್ದೆ ವಹಿಸಿಕೊಂಡಿರಲಿಲ್ಲ. ಇದೀಗ, ಬಿಜೆಪಿ ಸರ್ಕಾರ ಅವರಿಗೆ ಮಹತ್ವದ ಹುದ್ದೆ ನೀಡಿದೆ.

‘ಸಿದ್ದರಾಮಯ್ಯ ಸರ್ಕಾರದಲ್ಲಿ ಅಳಿಯನನ್ನು ಬಾಗಲಕೋಟೆಗೆ ವರ್ಗಾವಣೆ ಮಾಡಲಾಗಿತ್ತು. ಮೈತ್ರಿ ಸರ್ಕಾರದಲ್ಲಿ ಅಳಿಯನ ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.ಇದು ರಾಕ್ಷಸ ರಕ್ಷಸ. ಆ ಕಾರಣಕ್ಕೆ ಬಂಡಾಯ ಎದ್ದೆ’ ಎಂದು ವಿಶ್ವನಾಥ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ವೃಂದದ ಹುದ್ದೆಗೆ ಪದೋನ್ನತಿ ನೀಡಲು ಇದೇ 17ರಂದು ಸಂಜೆ 5.30ಕ್ಕೆ ಮುಖ್ಯ ಕಾರ್ಯದರ್ಶಿ ಅವರ ಕಚೇರಿಯಲ್ಲಿ ಮುಂಬಡ್ತಿ ಸಮಿತಿ ಸಭೆ ಆಯೋಜಿಸಲಾಗಿದೆ.

ಲೋಕೋ‍ಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳು ವಿಭಜನೆಯಾಗಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೂ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ಮುಖ್ಯ ಎಂಜಿನಿಯರ್‌ ಹುದ್ದೆ ಸೃಷ್ಟಿಗೆ ಸಭೆ ಕರೆದಿರುವುದು ಅಧಿಕಾರಿಗಳ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಇಬ್ಬರು ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

‘ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದ ಹೊತ್ತಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 37 ಎಂಜಿನಿಯರ್‌ಗಳ ಬಡ್ತಿಗೆ ಮುಂಬಡ್ತಿ ಸಭೆ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಇದಕ್ಕೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಡೆ ಒಡ್ಡಿದ್ದರು. ಈಗ ಅವರ ಕಚೇರಿಯಲ್ಲಿ ಮುಂಬಡ್ತಿ ಸಭೆ ನಡೆಯುತ್ತಿದೆ. ಇದು ಸರಿಯಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

Post Comments (+)