ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರೇ ಎಚ್1ಎನ್1 ಪೀಡಿತರು

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಹೆಚ್ಚಿದ ಸೋಂಕು * 39 ಪ್ರಕರಣಗಳು ಪತ್ತೆ
Last Updated 28 ಫೆಬ್ರುವರಿ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ ಸಿಟಿ ಸುತ್ತಲಿನ ಪ್ರದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಎಚ್‌1ಎನ್‌1 ಪ್ರಕರಣಗಳು ಪತ್ತೆಯಾಗಿದ್ದು, ವಲಸೆ ಬಂದಿರುವ ಕಾರ್ಮಿಕರೇ ಹೆಚ್ಚಾಗಿ ಇದರಿಂದ ಬಳಲುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು ಗಾರ್ಮೆಂಟ್‌ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ.

ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಕಳೆದ ವರ್ಷ ನಗರದಲ್ಲಿ 64 ಪ್ರಕರಣಗಳು ಪತ್ತೆಯಾಗಿದ್ದವು. ನಾಲ್ವರು ಈ ಕಾಯಿಲೆಗೆ ಬಲಿಯಾಗಿದ್ದರು. ಪ್ರಸಕ್ತ ಸಾಲಿನ ಮೊದಲ ಎರಡು ತಿಂಗಳುಗಳ ಅವಧಿಯಲ್ಲಿ 39 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಶೇ 70ರಷ್ಟು ಪೀಡಿತರು ಎಲೆಕ್ಟ್ರಾನಿಕ್‌ ಸಿಟಿ ಸುತ್ತಲಿನ ಪ್ರದೇಶಗಳಲ್ಲಿ ವಲಸೆ ಬಂದು ನೆಲೆಸಿದ ಮಹಿಳಾ ಕಾರ್ಮಿಕರೇ ಆಗಿದ್ದಾರೆ.

‘ನಗರದಲ್ಲಿ ಎಚ್1ಎನ್1 ಜ್ವರ ವ್ಯಾಪಿಸದಂತೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್.ಪ್ರಕಾಶ್ ತಿಳಿಸಿದರು. ‘ಇದುವರೆಗೆ ನಗರದ 1.90 ಲಕ್ಷ ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತ ಪ್ರತಿದಿನ 20 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದು, ಅಗತ್ಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಎಚ್1ಎನ್1 ಜ್ವರ ಕಾಣಿಸಿಕೊಂಡ ರೋಗಿಗಳಿಗೆ 48 ಗಂಟೆಯೊಳಗೆ ಟ್ಯಾಮಿ ಫ್ಲೂ ಚಿಕಿತ್ಸೆ ನೀಡುವಂತೆ ತಿಳಿಸಲಾಗಿದೆ. ರೋಗಿ ದಾಖಲಾದ ತಕ್ಷಣವೇ ದೈನಂದಿನ ವರದಿ ಸಲ್ಲಿಸುವಂತೆ ಖಾಸಗಿ ಆಸ್ಪತ್ರೆಗಳಿಗೂ ಸೂಚಿಸಲಾಗಿದೆ’ ಎಂದರು.

ಆರೋಗ್ಯ ಮೇಳ: ‘ಬಿಪಿಎಲ್ ಕಾರ್ಡ್‌ ಉಳ್ಳವರಿಗೆ ಆರೋಗ್ಯ ಸೇವೆಗಳ ಕುರಿತು ಜಾಗೃತಿ ಮೂಡಿಸಲು ಮಾರ್ಚ್‌ 3, 5 ಹಾಗೂ 7ರಂದು ಆರೋಗ್ಯ ಮೇಳ ಆಯೋಜಿಸಲಾಗಿದೆ. ಕ್ರಮವಾಗಿ ಬಸವನಗುಡಿ, ಸರ್.ಸಿ.ವಿ.ರಾಮನ್‌ ನಗರ ಹಾಗೂ ದಾಸರಹಳ್ಳಿಯಲ್ಲಿ ಮೇಳ ನಡೆಯಲಿದೆ’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪಿ.ಕೆ.ಸುನಂದಾ, ‘ನಗರದಲ್ಲಿ 6 ಡೆಂಗ್ಯೂ ಹಾಗೂ 7 ಚಿಕೂನ್‍ ಗುನ್ಯಾ ಪ್ರಕರಣಗಳು ದಾಖಲಾಗಿವೆ. ಎಚ್1ಎನ್1 ಜ್ವರ ವಲಸಿಗರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ನಗರದ 12 ಸರ್ಕಾರಿ ವೈದ್ಯಕೀಯ ಕಾಲೇಜು, ಖಾಸಗಿ ಕಾಲೇಜುಗಳು ಸೇರಿದಂತೆ ಒಟ್ಟು 1,658 ವೈದ್ಯರಿಗೆ ಈ ಕುರಿತು ಅರಿವು ಮೂಡಿಸಲಾಗಿದೆ’ ಎಂದರು. ಮಾರ್ಚ್‌ 10ರಂದು ರಾಜ್ಯದಾದ್ಯಂತ ಪಲ್ಸ್‌ ಪೊಲೀಯೋ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT