ಹಲಗೆವಡೇರಹಳ್ಳಿ ಕೆರೆಗೆ ಕೊಳಚೆಯೇ ಕಂಟಕ

7
ಕೆರೆಗಳ ಕಣ್ಣೀರು–6

ಹಲಗೆವಡೇರಹಳ್ಳಿ ಕೆರೆಗೆ ಕೊಳಚೆಯೇ ಕಂಟಕ

Published:
Updated:
Deccan Herald

ಬೆಂಗಳೂರು: ನನ್ನ ಸುತ್ತ ನೂರಾರು ಮರಗಳಿವೆ. ಬೆರಳೆಣಿಕೆಯಷ್ಟು ಹಕ್ಕಿಗಳು ಇವೆ. ನನ್ನೊಡಲಲ್ಲಿ ನೀರೂ ಇದೆ. ಅಲ್ಲಲ್ಲಿ ಚರಂಡಿಯ ಕೊಳಚೆ ನನ್ನನ್ನು ಸೇರಿಕೊಳ್ಳುತ್ತದೆ. ನಾನು ಯಾರಿಗೂ ಬೇಡವಾಗಿರುವೆ...

ಹೀಗೆ, ಸದಾ ಬಿಕೋ ಎನ್ನುತ್ತಲೇ ಮರುಗುತ್ತಿದೆ ಆರ್‌‌.ಆರ್‌. ನಗರದ ಪಟ್ಟಣಗೆರೆ ಜಯಣ್ಣ ವೃತ್ತದ ಬಳಿಯ ಹಲಗೆವಡೇರಹಳ್ಳಿ ಕೆರೆ. 

ಪ್ರತಿದಿನ ಬೆಳಿಗ್ಗೆ 6ರಿಂದ 10 ಹಾಗೂ ಸಂಜೆ 4ರಿಂದ 6ರ ತನಕ ತೆರೆದಿರುವ ಈ ಕೆರೆಗೆ ಎರಡು ಗೇಟ್‌ಗಳಿದ್ದರೂ ತೆರೆಯೋದು ಒಂದು ಮಾತ್ರ. ಕೆರೆಯ ಕುರಿತು ಮಾಹಿತಿ ನೀಡುವ ಕಲ್ಲಿನ ಫಲಕ ಸಂಪೂರ್ಣ ಹಾಳಾಗಿದೆ.

‘ನಿತ್ಯ ಮೂರು ಪಾಳಿಗಳಲ್ಲಿ ನಾವು ಕಾವಲು ಕಾಯುತ್ತೇವೆ. ಒಂದನೇ ಗೇಟ್‌ನಲ್ಲಿ ಮಾತ್ರ ನಾವಿರುತ್ತೇವೆ. ಆದರೆ, ಎರಡನೇ ಗೇಟ್ ನೋಡಿ
ಕೊಳ್ಳಲು ಯಾರೂ ಇಲ್ಲ. ಹಾಗಾಗಿ ಎರಡು ವರ್ಷಗಳಿಂದ ಅದನ್ನು ಮುಚ್ಚಲಾಗಿದೆ’ ಎನ್ನುತ್ತಾರೆ ಅಲ್ಲಿನ ಭದ್ರತಾ ಸಿಬ್ಬಂದಿ.‌

‘ಎರಡನೇ ಗೇಟ್‌ ತೆರೆದ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಬೇಕಾಬಿಟ್ಟಿಯಾಗಿ ಯಾರ‍್ಯಾರೋ ಪ್ರವೇಶಿಸುವಂತಾಗಿತ್ತು. ನಿಯಂತ್ರಣ ಕಷ್ಟವಾಗಿತ್ತು’ ಎಂದು ಅವರು ವಿವರಿಸಿದರು.

ಕೆರೆಯ ಕಳೆ ಮಾಯ: ಕೆರೆಯ ಸುತ್ತಮುತ್ತ ವಿಪರೀತ ಕಳೆ ಗಿಡಗಳು ಬೆಳೆದು ನಿಂತಿವೆ. ಸಾರ್ವಜನಿಕರು ಓಡಾಡುತ್ತಿದ್ದರೆ ಕಾಣುವುದೇ ಇಲ್ಲ. ಅಷ್ಟೊಂದು ಎತ್ತರವಾಗಿ ಗಿಡಗಳು ಬೆಳೆದಿವೆ. ಹೀಗಾಗಿ ಈ ಜಲಮೂಲದ ಕಳೆಯೇ ಮಾಯವಾಗಿದೆ.

ಬೆಳಕಿಲ್ಲ, ರಸ್ತೆಗಳಿಲ್ಲ: ಸುತ್ತಮುತ್ತಲಿನ ನಿವಾಸಿಗಳು ವಾಯುವಿಹಾರಕ್ಕೆ ಬೆಳಗಿನ ಜಾವ ಹಾಗೂ ಸಂಜೆ ಹೊತ್ತು ಬರುತ್ತಾರೆ. ಆದರೆ, ಇಲ್ಲಿ ಸರಿಯಾದ ಪಾದಚಾರಿ ಮಾರ್ಗಗಳಿಲ್ಲ. ಮಣ್ಣಿನ ರಸ್ತೆಗಳಿವೆ. ಬೆಳಕಿನ ವ್ಯವಸ್ಥೆ ಇಲ್ಲ. ಬೀದಿನಾಯಿಗಳ ಕಾಟ ಸಹ ಇದೆ. ಕೆರೆಯಲ್ಲಿ ಹೂವಿನ ಕೊಳೆತ ಹಾರ, ಪ್ಲಾಸ್ಟಿಕ್‌ ಕಸವೇ ಎದ್ದು ಕಾಣುತ್ತದೆ.

‘ಮಳೆ ಬಂದಾಗ ಇಲ್ಲಿ ಓಡಾಡುವುದೇ ಕಷ್ಟ. ಕೆರೆಯ ಇಡೀ ಆವರಣವೆಲ್ಲ ರಾಡಿಯಿಂದ ತುಂಬಿರುತ್ತದೆ. ಸಂಜೆ ಹೊತ್ತು ವಿಹರಿಸುವಾಗ ಹುಳುಹುಪ್ಪಟೆಗಳ ಕಾಟ ಹೆಚ್ಚಾಗಿದೆ. ಕೆರೆಯ ಹಿಂಭಾಗದಲ್ಲಿ ಹಾವಿನ ಹುತ್ತವಿದೆ. ಓಡಾಡಲು ಭಯ ಎನಿಸುತ್ತದೆ. ಒಳ್ಳೆಯ ಪಾದಚಾರಿ ಮಾರ್ಗ, ಕುಳಿತುಕೊಳ್ಳಲು ಕಲ್ಲಿನ ಬೆಂಚ್‌ಗಳು, ಮೂಲಸೌಕರ್ಯ ಹಾಗೂ ಬೆಳಕಿನ ವ್ಯವಸ್ಥೆ ಮಾಡಿಕೊಟ್ಟರೆ ವಯಸ್ಸಾದವರಿಗೆ ಅನುಕೂವಾಗುತ್ತದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ರಂಗಮ್ಮ. 

ಒತ್ತುವರಿ ಕೇಳುವವರಿಲ್ಲ: ‘ಕೆರೆಯ ಹಿಂಬದಿಯಲ್ಲಿ ಪೊದೆಗಳಿವೆ. ಒಬ್ಬರೆ ಓಡಾಡಲು ಹೆದರಿಕೆಯಾಗುತ್ತದೆ. ಕೆಲವು ಮನೆಗಳು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿವೆ. ವಾಹನಗಳನ್ನು ನಿಲ್ಲಿಸುತ್ತಾರೆ. ಇನ್ನೂ ಕೆಲವರು ಕಾಂಪೌಂಡ್‌ ಕೂಡ ಕಟ್ಟಿಕೊಂಡಿದ್ದಾರೆ. ಅವರನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ’ ಎಂದು ಕೆಲವರು ದೂರುತ್ತಾರೆ.

ಬೇಲಿ ಮುರಿದ ಕಿಡಿಗೇಡಿಗಳು: ಕೆರೆಯ ಸುತ್ತಮುತ್ತ ಅಲ್ಲಲ್ಲಿ ಬೇಲಿಯೇ ಇಲ್ಲ. ಕುಡುಕರು, ಕಿಡಿಗೇಡಿಗಳು ಕೆರೆಯ ಒಂದು ಭಾಗದಲ್ಲಿನ ಬೇಲಿಯನ್ನು ಮುರಿದ್ದಾರೆ. ಯಾರು ಬೇಕಾದರೂ ಸುಲಭವಾಗಿ ಒಳ ಹೋಗಬಹುದಾಗಿದೆ. ಕೆರೆ ಸ್ವಚ್ಛ ಮಾಡಲು ಬೇಲಿಯ ನಡುವೆಯೇ ಪುಟ್ಟ ಗೇಟ್‌ ನಿರ್ಮಿಸಲಾಗಿದೆ. ಆದರೆ, ಸ್ವಚ್ಛತಾ ಕಾರ್ಯ ಮುಗಿಸಿದ ನಂತರ ಸಿಬ್ಬಂದಿ ಅದಕ್ಕೆ ಬೀಗ ಹಾಕುವುದೇ ಇಲ್ಲ. ಹಾಗಾಗಿ, ಯಾವಾಗ ಬೇಕಾದರೂ ಅನಾಹುತಗಳು ಸಂಭವಿಸಲು ಎಡೆ ಮಾಡಿಕೊಟ್ಟಂತಿದೆ‌. ಅಗೋ ಅಲ್ಲಿ ನೋಡಿ, ಕುಡುಕರು ಎಸೆದ ಬಾಟಲಿಗಳು ಕಾಣಿಸುತ್ತವೆ’ ಎಂದು ವಾಯು ವಿಹಾರಕ್ಕೆ ಬಂದ ಬಾಳಯ್ಯಜ್ಜ ಕೆರೆಯ ದಯನೀಯ ಸ್ಥಿತಿಯತ್ತ ಗಮನ ಸೆಳೆದರು.

ಇದು ಬಿಬಿಎಂಪಿ ವ್ಯಾಪ್ತಿಗೆ ಬರುವ ಕೆರೆ. ಹೂಳು ತೆಗೆದು ಅಭಿವೃದ್ಧಿಗೆ ₹ 1.70 ಕೋಟಿ ವೆಚ್ಚ ಮಾಡಲಾಗಿದೆ. ಇನ್ನೊಂದಿಷ್ಟು ಕಾಮಗಾರಿಗೆ ₹ 2.20 ಕೋಟಿ ಅಂದಾಜುಪಟ್ಟಿ ಸಿದ್ಧವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ, ಆ ಹಣ ಎಲ್ಲಿ ಹೋಯಿತು ಎಂದು ಕೇಳುತ್ತಿದೆ ಸೊರಗಿರುವ ಕೆರೆ.

‘ಕೆರೆಗೆ ಚರಂಡಿ ನೀರು’

ಮಳೆ ಬಂದಾಗ ರಸ್ತೆಯಲ್ಲಿ ಹರಿಯುವ ನೀರು ಕೆರೆಯ ಆವರಣ ಸೇರಲು ಕೆರೆಯ ಕಾಂಪೌಂಡ್‌ನ ಅಲ್ಲಲ್ಲಿ ಚಿಕ್ಕಚಿಕ್ಕ ಒಳ ಕಾಲುವೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಕಸ, ಪ್ಲಾಸ್ಟಿಕ್‌, ಮದ್ಯದ ಬಾಟಲಿಗಳು ಬಿದ್ದಿವೆ. ಅಕ್ಕಪಕ್ಕದ ನಿವಾಸಿಗಳು, ಗೂಡಂಗಡಿಕಾರರು ರಸ್ತೆಗೆ ಹರಿಬಿಟ್ಟ ನೀರೆಲ್ಲ ಕೆರೆಯ ಆವರಣವನ್ನು ಸೇರಿ, ನಿಧಾನವಾಗಿ ಕೆರೆಯನ್ನು ಸೇರಿಕೊಳ್ಳುತ್ತದೆ.

ಕೆರೆಗೆ ರಾಜಕಾಲುವೆ ನೀರು: ‘ಕೆರೆಯ ಎಡಭಾಗದಲ್ಲಿ ರಾಜಕಾಲುವೆ ಇದೆ. ವಾಯು ವಿಹಾರಕ್ಕೆ ಬರುವವರು ಮೂಗು ಮುಚ್ಚಿಕೊಂಡೇ ಓಡಾಡುತ್ತಾರೆ. ಹೂಳೆತ್ತಿ ಸುಮಾರು ವರ್ಷಗಳೇ ಕಳೆದಿವೆ. ಹಾಗಾಗಿ, ಜೋರಾಗಿ ಮಳೆ ಬಂದಾಗ ಅದು ತುಂಬುತ್ತದೆ. ಚಿಕ್ಕ ತಡೆಗೋಡೆ ಇದ್ದರೂ ಅದನ್ನು ದಾಟಿ ಕೊಳಚೆ ನೀರು ಕೆರೆಗೆ ನುಗ್ಗುತ್ತದೆ’ ಎಂದು ಪಕ್ಕದ ನಿವಾಸಿಯೊಬ್ಬರು ಮಾಹಿತಿ ನೀಡುತ್ತಾರೆ.
ಒತ್ತುವರಿಯಾದರೆ ಕೇಳುವವರಿಲ್ಲ

‘ಕೆರೆಯ ಮೊದಲ ಗೇಟಿನ ಪಕ್ಕದಲ್ಲಿ ಕಾರ್‌ ವಾಷಿಂಗ್‌, ಗ್ಯಾರೇಜ್‌ ಅಂಗಡಿಗಳಿವೆ. ಪಕ್ಕದ ಜಾಗದ ಮಾಲೀಕ ಅಂತ ಹೇಳಿಕೊಂಡ ಒಬ್ಬ ವ್ಯಕ್ತಿ, ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಯಾರಿಗೋ ಮಾರಾಟ ಮಾಡಿದ್ದಾರೆ. ಖರೀಸಿದವರು ಈ ತನಕ ಬಂದಿಲ್ಲ. ಈ ಬಗ್ಗೆ ಕೇಸ್‌ ಕೂಡ ನಡೆಯುತ್ತಿದೆ. ಹಾಗಾಗಿ, ಅಕ್ಕಪಕ್ಕದ ಅಂಗಡಿಯವರಿಗೆ ಇದು ಮತ್ತಷ್ಟು ಅನುಕೂಲವಾಗಿದ್ದು, ವಾಹನಗಳನ್ನು ಇಲ್ಲಿಯೇ ನಿಲ್ಲಿಸುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸ‌ದ ನಿವಾಸಿಯೊಬ್ಬರು ವಿವರಿಸುತ್ತಾರೆ.

‘ಕೆರೆಯ ಕಾಂಪೌಂಡ್‌ನ ಹೊರಭಾಗದದಲ್ಲಿ ಸಾಕಷ್ಟು ಗೂಡಂಗಡಿ, ಕೈಗಾಡಿ ಕ್ಯಾಂಟಿನ್‌, ಜೋಪಡಿಗಳು ಇವೆ. ವ್ಯಾಪಾರ ಮುಗಿದ ನಂತರ ಕಸವನ್ನೆಲ್ಲ ಇಲ್ಲಿಯೇ ಬಿಸಾಡಿ ಹೋಗುತ್ತಾರೆ. ಹಲವು ವರ್ಷಗಳಿಂದ ಕೆಲವು ಗುಜುರಿ ವಾಹನಗಳೂ ಇಲ್ಲೇ ನಿಂತಿವೆ’ ಎನ್ನುತ್ತಾರೆ.
ಹಲಗೆವಡೇರಹಳ್ಳಿ ಕೆರೆ ಮಾಹಿತಿ

17 ಎಕರೆ 10 ಗುಂಟೆ

ಒಟ್ಟು ವಿಸ್ತೀರ್ಣ

1 ಎಕರೆ 28 ಗುಂಟೆ

ರಸ್ತೆ ನಿರ್ಮಾಣಕ್ಕೆ ಬಳಕೆ

4 ಎಕರೆ 21 ಗುಂಟೆ

ಒತ್ತುವರಿಯಾದ ಪ್ರದೇಶ

78

ಕೆರೆ ಪಾತ್ರದಲ್ಲಿ ನಿರ್ಮಾಣವಾದ ಮನೆಗಳು

2

ಕೆರೆ ಪಾತ್ರದಲ್ಲಿರುವ ದೇವಸ್ಥಾನಗಳು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !