ಮಂಗಳವಾರ, ಅಕ್ಟೋಬರ್ 15, 2019
29 °C
ಬಸ್ ಚಾಲಕನಿಗೆ ಗ್ರಾಹಕರ ನ್ಯಾಯಾಲಯದಲ್ಲಿ ಸಿಕ್ತು ಪರಿಹಾರ

ವಾಪಸ್ ಬಂತು ಡೆಂಗಿ ಚಿಕಿತ್ಸೆಯ ಹಣ!

Published:
Updated:
Prajavani

ಹಾವೇರಿ: ಡೆಂಗಿಯಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಎಚ್.ಮಂಜುನಾಥ, ಆ ವೈದ್ಯಕೀಯ ವೆಚ್ಚ ಪಡೆಯಲು ಕಾನೂನು ಹೋರಾಟ ಮಾಡಬೇಕಾಯಿತು. ಕೊನೆಗೂ ಅವರ ಹೋರಾಟಕ್ಕೆ ಜಯ ಸಿಕ್ಕಿದ್ದು, ₹91 ಸಾವಿರ ಪರಿಹಾರ ಕೊಡುವಂತೆ ಗ್ರಾಹಕರ ನ್ಯಾಯಾಲಯ ಆದೇಶಿಸಿತು.

ರಾಣೆಬೆನ್ನೂರು ತಾಲ್ಲೂಕು ಹೊಳೆ ಆನವೇರಿಯ ಮಂಜುನಾಥ್, ಹಾವೇರಿ ಡಿಪೊದಲ್ಲಿ ಚಾಲಕರಾಗಿ 2011ರಿಂದ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಅವರ ಮಗಳು ಭೂಮಿಕಾ ಡೆಂಗಿ ಕಾಯಿಲೆಗೆ ಗುರಿಯಾಗಿದ್ದಳು. ವೈದ್ಯರ ಸಲಹೆ ಮೇರೆಗೆ ಆಕೆಯನ್ನು ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಿದ ಮಂಜುನಾಥ್, ಚಿಕಿತ್ಸೆಗೆ ₹91 ಸಾವಿರ ಖರ್ಚು ಮಾಡಿ ಮಗಳನ್ನು ರಕ್ಷಿಸಿಕೊಂಡರು. 

ಬಳಿಕ ಆ ಬಿಲ್‌ಗಳನ್ನು ಸಂಸ್ಥೆಗೆ ಸಲ್ಲಿಸಿದ ಅವರು, ವೈದ್ಯಕೀಯ ಖರ್ಚಿನ ಹಣ ಮರುಪಾವತಿ ಮಾಡುವಂತೆ ಮನವಿ ಸಲ್ಲಿಸಿದರು. ಆದರೆ, ಆ ಅರ್ಜಿಯನ್ನು ತಿರಸ್ಕರಿಸಿದ ಅಧಿಕಾರಿಗಳು ‘ಸೌಲಭ್ಯ ಸಿಗುವುದಿಲ್ಲ’ ಎಂದು ಹಿಂಬರಹ ಬರೆದುಕೊಟ್ಟಿದ್ದರು. ಹೀಗಾಗಿ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು (ಹುಬ್ಬಳ್ಳಿ) ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ (ಹಾವೇರಿ) ವಿರುದ್ಧ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದರು.

ನೋಟಿಸ್‌ಗೂ ಜಗ್ಗಲಿಲ್ಲ:

‘ನನ್ನ ಕಕ್ಷಿದಾರನಿಗೆ ವೈದ್ಯಕೀಯ ವೆಚ್ಚ ಭರಿಸಲು ನೀವು ವಿಫಲರಾಗಿದ್ದೀರಿ. ಈ ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದು ಮಂಜುನಾಥ್ ಪರ ವಕೀಲರಾದ ನಂದಿನಿ ಎಸ್.ಜೋಶಿ ಸಹ ನೋಟಿಸ್ ನೀಡಿದ್ದರು. ಅದಕ್ಕೂ ಅಧಿಕಾರಿಗಳು ಪ್ರತಿಕ್ರಿಯಿಸಿರಲಿಲ್ಲ.  

ಸಾಲ ಮಾಡಿ ಚಿಕಿತ್ಸೆ:

‘ಕುಟುಂಬ ಸದಸ್ಯರಿಗೆ ವೈದ್ಯಕೀಯಕ್ಕೆ ಖರ್ಚು ಮಾಡಿದ ಹಣವನ್ನು ಮರುಪಾವತಿ ಮಾಡಿಕೊಳ್ಳಲು ಕಾನೂನಿನಲ್ಲಿ ಹಾಗೂ ಕೆಸಿಎಸ್‌ಆರ್‌ ನಿಯಮಾವಳಿಯಲ್ಲಿ ಅವಕಾಶವಿದೆ. ಆದರೂ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದರು. ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯವನ್ನು ತಡೆಹಿಡಿದು, ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದರು’ ಎಂದು ಮಂಜುನಾಥ್ ದೂರಿದ್ದರು.  

‘ನಾನು ಪರಿಚಿತರ ಬಳಿ ಸಾಲ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದೆ. ಸಾಲ ಕೊಟ್ಟವರು ನಿತ್ಯ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದರು. ಇತ್ತ ಸಂಸ್ಥೆ ಸಹ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿತ್ತು. ಮರ್ಯಾದೆ ಕಳೆದುಕೊಂಡು ಮಾನಸಿಕ ಯಾತನೆ ಅನುಭವಿಸಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಚಿಕಿತ್ಸಾ ವೆಚ್ಚ ₹91 ಸಾವಿರದ ಜತೆಗೆ ಯಾತನೆ ಅನುಭವಿಸಿದ್ದಕ್ಕೆ ಪರಿಹಾರವಾಗಿ ₹5 ಲಕ್ಷ ಕೊಡಿಸಬೇಕು. ದಾವೆ ಹೂಡಲು ತಗುಲಿದ ವೆಚ್ಚವನ್ನು ಹಾಗೂ ತಮ್ಮ ಸೇವಾ ನ್ಯೂನತೆ ಇದ್ದರೂ ಅಧಿಕಾರಿಗಳು ವಿನಾ ಕಾರಣ ನನ್ನನ್ನು ಕೋರ್ಟ್‌ಗೆ ಬರುವಂತೆ ಮಾಡಿದ್ದಕ್ಕೆ ₹20 ಸಾವಿರವನ್ನು ಪರಿಹಾರವಾಗಿ ಕೊಡಿಸಬೇಕು’ ಎಂದೂ ಮಂಜುನಾಥ್ ದೂರಿನಲ್ಲಿ ಮನವಿ ಮಾಡಿದ್ದರು.

ತಿಂಗಳೊಳಗೆ ಪರಿಹಾರ

‘ತಿಂಗಳ ಒಳಗಾಗಿ ₹91 ಸಾವಿರ ವೈದ್ಯಕೀಯ ವೆಚ್ಚ ಮರಳಿಸಬೇಕು. ಅದರ ಜತೆಗೆ ₹10 ಸಾವಿರ ಪರಿಹಾರ ಹಾಗೂ ದಾವೆ ವೆಚ್ಚ ₹3 ಸಾವಿರವನ್ನೂ ನೀಡಬೇಕು. ವಿಳಂಬ ಮಾಡಿದರೆ ಪರಿಹಾರ ಒದಗಿಸುವವರೆಗೂ ಶೇ 12ರ ಬಡ್ಡಿ ದರದಂತೆ ಹಣ ಪಾವತಿಸಬೇಕು‌’ ಎಂದು ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷೆ ಸುನಂದಾ ದುರಗೇಶ ಆದೇಶಿಸಿದರು.

Post Comments (+)