ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಕೆರೆಗಳು; ಬದುಕಿದ ಮೀನುಗಾರರು

Last Updated 9 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹಾವೇರಿ:‌ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಕೆರೆ–ಕಟ್ಟೆಗಳು ಭರ್ತಿಯಾಗಿದ್ದು, ಮೀನುಗಾರಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಭೀಕರ ಬರಗಾಲವಿತ್ತು. ಕೆರೆ–ಕಟ್ಟೆಗಳು, ಕೃತಕ ಹೊಂಡಗಳು ಬತ್ತಿ ಹೋಗಿ, ಮೀನುಗಾರರು ಕುಲಕಸುಬನ್ನೇ ಬಿಟ್ಟುಬಿಡುವ ನಿರ್ಧಾರಕ್ಕೆ ಬಂದಿದ್ದರು. ಪುರುಷರು ಕೂಲಿ ಅರಸಿ ಬೇರೆ ಬೇರೆ ಊರುಗಳಿಗೆ ತೆರಳಿದರೆ, ಮಹಿಳೆಯರು ಸಹ ಗುಳೆ ಹೋಗಲಾರಂಭಿಸಿದ್ದರು.ಈಗ ತುಂಬಿರುವ ಜಲಮೂಲಗಳು, ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿವೆ.

ಜಿಲ್ಲೆಯಲ್ಲಿ ಒಟ್ಟು 8,833 ಹೆಕ್ಟೇರ್‌ ವಿಸ್ತೀರ್ಣದ ಜಲ ಸಂಪನ್ಮೂಲವಿದ್ದು, ಉತ್ತಮ ಮಳೆಯಾದರೆ 80 ಲಕ್ಷ ಮೀನಿನ ಮರಿಗಳ ಬೇಡಿಕೆ ಇರುತ್ತದೆ. ಈ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿಯೇ ಮೀನುಗಾರಿಕೆ ಉತ್ಪಾದನೆಗೆ ಹೆಚ್ಚು ಅವಕಾಶವಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಹಾವೇರಿ ಪಾತ್ರವಾಗಿದೆ.

ಈ ವರ್ಷ ಜುಲೈವರೆಗೆ ವಾಡಿಕೆಯ ಅರ್ಧದಷ್ಟೂಮಳೆಯಾಗಿರಲಿಲ್ಲ. ಬಳಿಕ ಆಗಸ್ಟ್‌ ತಿಂಗಳಲ್ಲಿಯೇ ವಾರ್ಷಿಕ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿ ಪ್ರವಾಹವೇ ಸೃಷ್ಟಿಯಾಗಿತ್ತು. ಆ ನಂತರದ ದಿನಗಳಲ್ಲೂ ಬಿಟ್ಟೂ ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಕೆರೆಗಳ ತಿಳಿ ನೀರಿನಿಂದ ಕಂಗೊಳಿಸುತ್ತಿವೆ.

‘ಮೀನು ಕೃಷಿ ನಡೆಯದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂಘಗಳು, ‘ನವೀಕರಣ ಪ್ರಕ್ರಿಯೆಗೆ ಇದೊಂದು ಬಾರಿ ವಿನಾಯ್ತಿ ನೀಡಿ’ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದವು. ಅದಕ್ಕೆ ಸ್ಪಂದಿಸಿದ್ದ ಸರ್ಕಾರ, ವಿನಾಯಿತಿಯನ್ನೂ ನೀಡಿತ್ತು. ಈಗ ಮತ್ತೆ ಮೀನುಗಾರಿಕೆ ಕೃಷಿ ಗರಿಗೆದರಿರುವುದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಬೇಕಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಜಿಲ್ಲೆಯಲ್ಲಿ ಇಲಾಖೆ ಅಧೀನದಲ್ಲಿ 196 ಕೆರೆಗಳಿದ್ದು, ಟೆಂಡರ್‌ನಲ್ಲಿ 159 ಕೆರೆಗಳ ಹರಾಜು ಹಾಗೂ ನವೀಕರಣ ಮಾಡಲಾಗಿದೆ. ಇನ್ನುಳಿದಕೆರೆಗಳ ಹರಾಜು ಪ್ರಕ್ರಿಯೆ ಇದೇ ತಿಂಗಳಲ್ಲಿ ನಡೆಯಲಿದೆ. ವಿವಿಧ ಕೆರೆ, ನದಿಭಾಗದಲ್ಲಿ ಈವರೆಗೆ 57 ಲಕ್ಷಕ್ಕೂ ಹೆಚ್ಚು ಕಾಟ್ಲಾ, ರಹೂ, ಸಾಮಾನ್ಯ ಗೆಂಡೆ, ಹುಲ್ಲು ಗೆಂಡೆಹಾಗೂ ಮೃಗಲ ತಳಿಯ ಮೀನಿನ ಮರಿಗಳನ್ನು ಬಿತ್ತನೆ ಮಾಡಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿನಾಯಕ ಬಿ. ತಿಳಿಸಿದರು.

‘ಕೆರೆಗಳಿಗೆ ಬಿಡಲು ಮೀನುಗಳನ್ನು ಶಿವಮೊಗ್ಗ, ಹೊಂಕಣ, ಶೇಷಗಿರಿಯಿಂದ ತರಲಾಗುತ್ತದೆ. ಹಾವೇರಿಯ ಹೆಗ್ಗೇರಿ, ಕೆರಿಮತ್ತಿಹಳ್ಳಿ, ನೆಗಳೂರು, ಗುತ್ತಲ ಶಿಗ್ಗಾವಿಯ ನಾಗನೂರು ಕೆರೆಗಳಿಗೂ ಮೀನು ಮರಿಗಳನ್ನು ಬಿಡಲಾಗಿದೆ’ ಎಂದು ಅವರು ತಿಳಿಸಿದರು.

‘ಕಳೆದ ಕೆಲವು ವರ್ಷದಿಂದ ಆದಾಯವೇ ಇಲ್ಲದಂತಾಗಿತ್ತು. ಈಗ ಹೊಸ ಟೆಂಡರ್‌ ಹಾಗೂ ನವೀಕರಣದಿಂದ ₹18.5 ಲಕ್ಷ ಆದಾಯ ಬಂದಿದೆ. ಮುಂದಿನ ದಿನದಲ್ಲಿ ಮತ್ತೆ ಟೆಂಡರ್‌ ನಡೆಯುವುದರಿಂದ ಆದಾಯ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.ನದಿ ಭಾಗದ ಜಲ ಸಂಪನ್ಮೂಲಗಳನ್ನು ಮೀನುಗಾರಿಕಾ ಸಹಕಾರಿ ಸಂಘಕ್ಕೆ ಗುತ್ತಿಗೆ ನೀಡುತ್ತೇವೆ. ಜಿಲ್ಲೆಯಲ್ಲಿ 31 ಮೀನುಗಾರರ ಸಹಕಾರ ಸಂಘಗಳೂ ಇವೆ’ ಎಂದು ಸಹಾಯಕ ನಿರ್ದೇಶಕ ಎಸ್‌.ಪಿ.ದಂದೂರ ತಿಳಿಸಿದರು.

ಹುದ್ದೆಗಳೂ ಖಾಲಿ

‘ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಗೆ ಒಟ್ಟು 26 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಸದ್ಯ 9 ಮಂದಿಯಷ್ಟೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿವರ್ಷ ನೌಕರರು ನಿವೃತ್ತಿ ಹಾಗೂ ವರ್ಗಾವಣೆ ಹೊಂದುತ್ತಿದ್ದು ಅವರ ಸ್ಥಾನಗಳೂ ಭರ್ತಿ ಆಗುತ್ತಿಲ್ಲ. ಲಭ್ಯ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ’ ಎಂದು ಬಿ.ವಿನಾಯಕ ಹೇಳಿದರು.

ಕೋಡಿ ಬಿದ್ದು ನಷ್ಟ

‘ಚಿಗಳ್ಳಿ ಜಲಾಶಯಗಳಲ್ಲಿ ನೀರು ತುಂಬಿದ್ದರಿಂದ ಸುಮಾರು 10 ಲಕ್ಷ ಮೀನಿನ ಮರಿಗಳನ್ನು ಬೀಡಲಾಗಿತ್ತು. ಕೋಡಿ ಬಿದ್ದು ಎಲ್ಲ ಮರಿಗಳೂ ಕೊಚ್ಚಿಹೋಗಿವೆ. ಇದರೊಟ್ಟಿಗೆ ಬಲೆ, ಬುಟ್ಟಿ ಇನ್ನಿತರ ವಸ್ತುಗಳೂ ನಾಶವಾಗಿವೆ’ ಎಂದು ಹಾನಗಲ್‌ ಮೀನು ಸಹಕಾರ ಸಂಘದ ಅಧ್ಯಕ್ಷ ಸುಭಾಷ್‌ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT