ಸುಗಮ ಸಂಚಾರಕ್ಕೆ ಸೇತುವೆ ಪರಿಹಾರವಲ್ಲ

7
* ಐಐಎಸ್‌ಸಿ ತಜ್ಞ ಆಶಿಶ್‌ ವರ್ಮಾ ಅಭಿಮತ * ಮೆಟ್ರೊ ವ್ಯವಸ್ಥೆ ಕಲ್ಪಿಸಲು ಸಲಹೆ

ಸುಗಮ ಸಂಚಾರಕ್ಕೆ ಸೇತುವೆ ಪರಿಹಾರವಲ್ಲ

Published:
Updated:

ಬೆಂಗಳೂರು: ಉಕ್ಕಿನ ಸೇತುವೆ ನಿರ್ಮಾಣ ಸಂಚಾರ ವ್ಯವಸ್ಥೆಯನ್ನು ಸರಾಗವಾಗುವಂತೆ ಮಾಡುವುದಿಲ್ಲ. ಒಂದು ವೇಳೆ ನಿರ್ಮಾಣಗೊಂಡರೆ ಅಲ್ಲಿಯೂ ವಿಪರೀತ ಪ್ರಮಾಣದ ವಾಹನ ದಟ್ಟಣೆ ಉಂಟಾಗಲಿದೆ. 

– ಇದು ಭಾರತೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕ ಆಶಿಶ್‌ ವರ್ಮಾ ಅವರ ಅಧ್ಯಯನದಲ್ಲಿರುವ ಅಂಶ. 

ವರ್ಮಾ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿರುವ ವಾಹನ ಸಂಚಾರ ಪ್ರಮಾಣವನ್ನು ಅಧ್ಯಯನ ನಡೆಸಿದ್ದಾರೆ. ಉಕ್ಕಿನ ಸೇತುವೆಯು ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಈ ಮಾರ್ಗದಲ್ಲಿ ನಾಲ್ಕು ಪಥಗಳ (ತಲಾ ಎರಡು ಹೋಗುವ–ಬರುವ) ಮೆಟ್ರೊ ಮಾರ್ಗ ನಿರ್ಮಾಣವೇ ಸರಿಯಾದ ಆಯ್ಕೆ. ಈ ಮಾರ್ಗ 2044ರವರೆಗೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ ಎನ್ನುತ್ತದೆ ಅಧ್ಯಯನ ವರದಿ.

ಭವಿಷ್ಯದ ಸನ್ನಿವೇಶ 

ಅಧ್ಯಯನವು ಭವಿಷ್ಯದ ಮೂರು ವಿದ್ಯಮಾನಗಳನ್ನು ಗುರುತಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಸದ್ಯ ವಾರ್ಷಿಕ ವಾಹನ ಸಂಖ್ಯೆ ಹೆಚ್ಚಳದ ದರ ಶೇ 4.5ರಷ್ಟು ಇದೆ. ಉದ್ದೇಶಿತ ಉಕ್ಕಿನ ಸೇತುವೆಯ (ವಿಮಾನ ನಿಲ್ದಾಣ ಮಾರ್ಗ) ಪ್ರದೇಶದಲ್ಲಿ ಈ ಪ್ರಮಾಣ ವಾರ್ಷಿಕ ಶೇ 10.6ರಷ್ಟು ಇದೆ ಎಂದು ವಿವರವಾದ ಯೋಜನಾ ವರದಿ ಹೇಳಿದೆ. 9 ವರ್ಷಗಳಿಂದ ಈ ಬೆಳವಣಿಗೆ ದರ ಪುನರಾವರ್ತನೆ ಆಗುತ್ತಲೇ ಇದೆ. ನಗರದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಕಾರುಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎಂದು ಡಿಪಿಆರ್‌ ವಿವರಿಸಿದೆ. 

ಮೇಖ್ರಿ ವೃತ್ತದ ಬಳಿಯ ಸಂಚಾರ ದಟ್ಟಣೆ ವಾರ್ಷಿಕ ಶೇ 4.5ರ ಪ್ರಮಾಣದಲ್ಲಿ ಏರುತ್ತಿದೆ. ಯೋಜನೆ ಕೈಗೆತ್ತಿಕೊಂಡು ಪೂರ್ಣಗೊಳ್ಳುವ ಎರಡು ವರ್ಷಗಳಲ್ಲಿ ಪರಿಸ್ಥಿತಿ ತೀರಾ ಹದಗೆಡಲಿದೆ. ಆ ಹೊತ್ತಿಗೆ ವಾಹನ ಸಂಚಾರ ಪ್ರಮಾಣ ಅಂದಾಜು ಲೆಕ್ಕವನ್ನು ಮೀರಿ ಬೆಳೆಯಲಿದೆ. ಆದರೆ, ಈಗ ಇರುವ ಕಾರಿಡಾರ್‌ನ ಬಳಿಯೇ ಮೆಟ್ರೊ ಮಾರ್ಗವನ್ನೂ ನಿರ್ಮಿಸಿದರೆ ಅರ್ಧದಷ್ಟು ಪ್ರಯಾಣಿಕರು ಮೆಟ್ರೊಗೆ ವರ್ಗಾವಣೆಗೊಳ್ಳುತ್ತಾರೆ. ಹೀಗಾದಾಗ ಈಗಿನ ಕಾರಿಡಾರ್‌ 2048ರವರೆಗೆ ದಟ್ಟಣೆ ನಿಭಾಯಿಸಬಲ್ಲದು ಎಂದು ಪ್ರೊ.ವರ್ಮಾ ಅಭಿಪ್ರಾಯಪಡುತ್ತಾರೆ.

ಭಾರತದ ನಗರಗಳು ವಿಪರೀತ ಪ್ರಮಾಣದಲ್ಲಿ ಸಂಚಾರ ದಟ್ಟಣೆಯ ವಿಷ ವರ್ತುಲವನ್ನು ಎದುರಿಸುತ್ತಿವೆ. ಕಾರು ಖರೀದಿ ಪ್ರಮಾಣ ಏರಿಕೆ ಆಗುತ್ತಿರುವುದು ಈ ದಟ್ಟಣೆಗೆ ಕೊಡುಗೆ ನೀಡುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ಹಿಂದೆಯೇ ಈ ಸಮಸ್ಯೆಯನ್ನು ಎದುರಿಸಿದ್ದವು. ಅಮೆರಿಕ 50 ವರ್ಷಗಳ ಹಿಂದೆ, ಯೂರೋಪ್‌ 40 ವರ್ಷಗಳ ಹಿಂದೆ ಈ ಸಮಸ್ಯೆ ಎದುರಿಸಿದ್ದವು ಎಂದು ವಿವರಿಸುತ್ತಾರೆ.

ಸುಸ್ಥಿರ ಸಾರಿಗೆ ವ್ಯವಸ್ಥೆ ಇಂದಿನ ಆದ್ಯತೆ ಆಗಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಳಕೆ, ಮೋಟಾರೇತರ ಸಾರಿಗೆ (ರೈಲು, ಸೈಕಲ್‌) ಬಳಕೆಯಿಂದ ಇದು ಸಾಧ್ಯ. ನೆದರ್ಲೆಂಡ್‌ನಂತಹ ದೇಶಗಳು ಈ ವಿಷಯದಲ್ಲಿ ಮಾದರಿಯಾಗಿವೆ ಎಂದು  ಹೇಳುತ್ತಾರೆ.

ಪ್ರಬಲವಾದ ವಿರೋಧದ ಧ್ವನಿ

ಉಕ್ಕಿನ ಸೇತುವೆ ವಿರೋಧಿ ಧ್ವನಿ ಮತ್ತಷ್ಟು ಪ್ರಬಲವಾಗಿ ಕೇಳಿಬರತೊಡಗಿದೆ. ವಿವಿಧ ನಾಗರಿಕ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗತೊಡಗಿವೆ.

‘ಯೋಜನೆಯನ್ನು ರಾಷ್ಟ್ರೀಯ ಹಸಿರು ಪೀಠವೇ ನಿಷೇಧಿಸಿತ್ತು. ಅದನ್ನು ಮತ್ತೆ ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂನ ಸಂಸ್ಥಾಪಕ ಅಧ್ಯಕ್ಷ ಎನ್‌.ಎಸ್‌. ಮುಕುಂದ್‌ ಹೇಳಿದರು. 

‘ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಉಕ್ಕಿನ ಸೇತುವೆ ಅನಗತ್ಯ. ಒಂದು ವೇಳೆ ನಿರ್ಮಿಸಿದಲ್ಲಿ ಅಲ್ಲೂ ವಾಹನ ದಟ್ಟಣೆ ಉಂಟಾಗುತ್ತದೆ. ಇದಕ್ಕೆ ಪರಿಹಾರ ಎಂದರೆ ವೈಟ್‌ಫೀಲ್ಡ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣದವರೆಗೆ ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು’ ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು. 

‘ಸಹಕಾರ ನಗರದ ಬಳಿ ಫ್ಲೈ ಓವರ್‌ ನಿರ್ಮಿಸಿದರೆ ದಟ್ಟಣೆ ನಿವಾರಣೆಗೆ ನೆರವಾಗಲಿದೆ. ನಾವು ಫ್ಲೈ ಓವರ್‌ಗಳ ವಿರೋಧಿಗಳಲ್ಲ. ನಗರದ ವಿವಿಧ ಭಾಗಗಳಲ್ಲಿ ಸಣ್ಣ ಸಣ್ಣ ಫ್ಲೈ ಓವರ್‌ಗಳ ಅಗತ್ಯವಿದೆ. ಅವುಗಳನ್ನು ನಿರ್ಮಿಸಲು ನಾವು ಸಲಹೆ ಮಾಡಿದ್ದೇವೆ. ಈಗ ಉಕ್ಕಿನ ಸೇತುವೆ ಏಕೆ ಬೇಡ ಎಂಬ ಬಗ್ಗೆ ವೈಜ್ಞಾನಿಕ ಕಾರಣಗಳ ಸಹಿತ ನಿರೂಪಿಸಿ ನಾವು ಆಕ್ಷೇಪ ಸಲ್ಲಿಸುತ್ತೇವೆ. ಇದಕ್ಕೆ ವಿವಿಧ ನಾಗರಿಕ ಸಂಘಟನೆಗಳೂ ಕೈಜೋಡಿಸಲಿವೆ’ ಎಂದು ಅವರು ಹೇಳಿದರು. 

‘ಈ ಯೋಜನೆಯ ವಿರುದ್ಧ ನಾಗರಿಕರು ಆನ್‌ಲೈನ್‌ ಮೂಲಕ ಪ್ರತಿಭಟನೆ ದಾಖಲಿಸಲಿದ್ದಾರೆ. ವಿಮಾನ ನಿಲ್ದಾಣಕ್ಕೆ ರೈಲು ಸೌಲಭ್ಯ ಕಲ್ಪಿಸುವತ್ತ ಗಮನಹರಿಸಬೇಕು’ ಎಂದು ಸಲಹೆ ಮಾಡಿದ್ದಾರೆ. 

ಸ್ಟೀಲ್ ಫ್ಲೈಓವರ್‌ ಬೇಡ ಎಂಬ ಹ್ಯಾಷ್‌ಟ್ಯಾಗ್‌ ಆಂದೋಲನ ಟ್ವಿಟರ್‌ನಲ್ಲಿ ಆರಂಭವಾಗಿದೆ. ಸಿಟಿಜನ್‌ ಫಾರ್‌ ಬೆಂಗಳೂರು ಸ್ಥಾಪಕ ಸದಸ್ಯ ಶ್ರೀನಿವಾಸ್‌ ಅಲವಿಲ್ಲಿ ಅವರು, ‘ ₹ 1,800 ಕೋಟಿ ವೆಚ್ಚದ ಈ ಯೋಜನೆಯು ವ್ಯಾಪಕ ಪ್ರತಿಭಟನೆಯನ್ನು ಎದುರಿಸಿದೆ. ಮಾನವ ಸರಪಣಿಯನ್ನೂ ನಿರ್ಮಿಸಲಾಗಿತ್ತು. 42 ಸಾವಿರ ನಾಗರಿಕರು ಈ ಯೋಜನೆ ವಿರುದ್ಧ ಮತದಾನ ಮಾಡಿದ್ದರು’ ಎಂದು ಸ್ಮರಿಸಿದರು.

‘ಕಳೆದ ಬಾರಿ ನಡೆದ ಪ್ರತಿಭಟನೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು, ಮಧ್ಯಮವರ್ಗದವರು, ಮೇಲು ಮಧ್ಯಮ ವರ್ಗದವರು, ಕಾರ್ಮಿಕರು ಈ ಯೋಜನೆ ವಿರುದ್ಧ ಪ್ರಬಲವಾದ ಧ್ವನಿ ಎತ್ತಿದ್ದರು. ಈ ಬಾರಿಯೂ ಸಮಾಜದ ಎಲ್ಲ ಸ್ತರದ ಜನರೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ. ಗಾರ್ಮೆಂಟ್‌ ಕಾರ್ಮಿಕರು, ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಸದಸ್ಯರು ಧ್ವನಿಗೂಡಿಸಲಿದ್ದಾರೆ’ ಎಂದು ಹೇಳಿದರು. 

‘ಈ ಯೋಜನೆ ಜಾರಿಗೆ ಬಂದಲ್ಲಿ 2,224 ಮರಗಳು ನಾಶವಾಗಲಿವೆ. ನಾವು ಈ ಮರಗಳ ಮೌಲ್ಯಮಾಪನವನ್ನೂ ಮಾಡಿದ್ದೇವೆ. ಎಲ್ಲ ಮರಗಳನ್ನು ಬೇರೆಡೆ ಮರುನಾಟಿ ಮಾಡುವುದೂ ಅಸಾಧ್ಯ’ ಎಂದು ವಿಜಯ್‌ ನಿಶಾಂತ್‌ 
ಅಭಿಪ್ರಾಯಪಟ್ಟರು.

ಉಕ್ಕಿನ ಸೇತುವೆ ಅಲ್ಲ, ಎತ್ತರಿಸಿದ ರಸ್ತೆ: ಪರಮೇಶ್ವರ

‘ಚಾಲುಕ್ಯ ವೃತ್ತದಿಂದ ಎಸ್ಟೀಮ್‌ ಮಾಲ್‌ವರೆಗೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊಸ ಯೋಜನೆ ಕೈಗೆತ್ತಿಕೊಳ್ಳುವುದು ಅನಿವಾರ್ಯ. ಆದರೆ, ನಾವು ನಿರ್ಮಾಣ ಮಾಡುವುದು ಉಕ್ಕಿನ ಸೇತುವೆ ಅಲ್ಲ, ಎತ್ತರಿಸಿದ ರಸ್ತೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ. 2031ರ ವೇಳೆಗೆ ನಗರದ ಜನಸಂಖ್ಯೆ 2 ಕೋಟಿ ದಾಟಲಿದೆ. ಅದಕ್ಕೆ ತಕ್ಕಂತೆ ಈಗಿನಿಂದಲೇ ಯೋಜನೆ ಕೈಗೆತ್ತಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ. ಉಪನಗರ ರೈಲು ಯೋಜನೆ, ನಮ್ಮ ಮೆಟ್ರೊ ಎರಡು ಹಾಗೂ ಮೂರನೇ ಹಂತ, ಪರ್ಯಾಯ ಮಾರ್ಗಗಳ ಅಭಿವೃದ್ಧಿ ಮಾಡಬೇಕಿದೆ’ ಎಂದರು. ‘ನಾವು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಪರಿಸರ ಹೋರಾಟಗಾರರ ಮುಂದೆ ಈ ಯೋಜನೆಯನ್ನು ಇಡುತ್ತೇವೆ. ಅವರ ಸಲಹೆಗಳನ್ನು ಪಡೆಯುತ್ತೇವೆ’ ಎಂದರು.

***

ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧವಿದ್ದರೂ ಉಪ ಮುಖ್ಯಮಂತ್ರಿ ಮತ್ತೆ ಪ್ರಸ್ತಾವ ಮಾಡಿದ್ದಾರೆ. ಜನರಿಗೆ ಬೇಡವಾದ ಯೋಜನೆ ಏಕೆ ಕೈಗೆತ್ತಿಕೊಳ್ಳುತ್ತಾರೆ

ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿರೋಧಪಕ್ಷದ ನಾಯಕ 

***

ಜನರು ಏನು ಹೇಳುತ್ತಾರೆ?

* ತೆರಿಗೆ ಹಣದ ಲೂಟಿ: ಆಡಳಿತ ನಡೆಸುವವರು ಅಭಿವೃದ್ಧಿ ಮತ್ತು ಸಾರ್ವಜನಿಕ ಸಮಸ್ಯೆಗಳ ಹೆಸರಿನಲ್ಲಿ ಹಣ ಲೂಟಿ ಮಾಡುವುದು ಸಾಮಾನ್ಯವಾಗಿದೆ. ಈ ಯೋಜನೆಯ ವಿಷಯದಲ್ಲೂ ಅಷ್ಟೆ. ಉಕ್ಕಿನ ಸೇತುವೆ ನಿರ್ಮಾಣ ನಗರದ ಸಮಸ್ಯೆಗೆ ಶಾಶ್ವತ ಪರಿಹಾರ ಅಲ್ಲ. ತೆರಿಗೆ ಹಣದ ಲೂಟಿ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ.

–ಕೆ.ಜಿ.ಹಾಲಸ್ವಾಮಿ, ಅಮೃತನಗರ

* ಯೋಜನೆಯೇ ಅಸಮಂಜಸ: ಪರಿಸರ ಜಾಗೃತಿಯ ಕುರಿತು ಪಾಠ ಮಾಡುವ ಸರ್ಕಾರ, ಜನರ ವಿರೋಧದ ನಡುವೆಯೂ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಎಷ್ಟು ಸರಿ? ಇದನ್ನು ಕೈಬಿಟ್ಟು ಯೋಜನೆಯ ವೆಚ್ಚವನ್ನು ಬೇರೆ ಕೆಲಸಗಳಿಗೆ ಉಪಯೋಗಿಸಲಿ.

–ಪ್ರಥಮೇಶ್‌, ರೇವಾ ವಿಶ್ವವಿದ್ಯಾಲಯ

* ಉಕ್ಕಿನ ಸೇತುವೆ ಅಗತ್ಯವಿಲ್ಲ: ನಗರಕ್ಕೆ ಉಕ್ಕಿನ ಸೇತುವೆ ಅಗತ್ಯವಿಲ್ಲ. ಅದರ ಬದಲಿಗೆ ಹೆಬ್ಬಾಳ ಮೇಲ್ಸೇತುವೆ ಹಾಗೂ ಮೇಖ್ರಿ ಸರ್ಕಲ್ ಹತ್ತಿರದ ರಸ್ತೆಯನ್ನು ವಿಸ್ತರಿಸಿ ವಾಹನ ದಟ್ಟಣೆ ಸಮಸ್ಯೆಯನ್ನು ಪರಿಹರಿಸಬಹುದು.

–ಕೆ. ಪ್ರಭಾಕರ, ತಲಕಾವೇರಿ ಬಡಾವಣೆ

* ಸಂಚಾರ ದಟ್ಟಣೆ ಕಡಿಮೆ: ಸಂಚಾರ ದಟ್ಟಣೆ ಕಡಿಮೆ ಮಾಡಲು ಮೇಲ್ಸೇತುವೆ ನಿರ್ಮಾಣ ಅಗತ್ಯ. ಇದರ ಮಹತ್ವ ನಗರದಲ್ಲಿ ಸಂಚರಿಸುವವರಿಗೆ ಗೊತ್ತು. ಆದರೆ, ಇದರಿಂದ ಮಾಲಿನ್ಯ ಹಾಗೂ ಶಾಖವನ್ನು ಸಹಿಸಿಕೊಳ್ಳಬೇಕಾಗುತ್ತದೆ. 

–ಲಕ್ಷ್ಮೀನಾರಾಯಣ, ನ್ಯಾಯಾಂಗ ಬಡಾವಣೆ

* ಪರ್ಯಾಯದ ಕಡೆ ಗಮನಹರಿಸಿ: ಎಷ್ಟೇ ಯೋಜನೆಗಳನ್ನು ತಂದರೂ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಉಕ್ಕಿನ ಸೇತುವೆಗಿಂತ ಶುದ್ಧ ಗಾಳಿ ಕೊಡುವ ಮರಗಳ ಅಗತ್ಯವಿದೆ. ಆದ್ದರಿಂದ ಸರ್ಕಾರ ಪರ್ಯಾಯ ಮಾರ್ಗಗಳ ಕಡೆ ಗಮನಹರಿಸಬೇಕು.

–ಕೆ.ಎನ್‌.ನವೀನ್‌ ಕುಮಾರ್‌, ಕಾಮಾಕ್ಷಿಪಾಳ್ಯ

* ಸೇತುವೆ ಯಾವ ಪುರುಷಾರ್ಥಕ್ಕೆ?: ಉಕ್ಕಿನ ಸೇತುವೆ ನಿರ್ಮಾಣದಿಂದ ಸುತ್ತಲಿನ ವಾತಾವರಣದಲ್ಲಿ ಶಾಖ ಹೆಚ್ಚಾಗಲಿದೆ. ಜನರ ತೆರಿಗೆ ದುಡ್ಡಿನ ಅಪವ್ಯಯವಾಗಲಿದೆ. ಅಲ್ಲದೆ ನೂರಾರು ಮರಗಳ ಮಾರಣ ಹೋಮವಾಗಲಿದೆ. ನೂರಾರು ಜನರ ವಿರೋಧದ ನಡುವೆ ಸೇತುವೆ ನಿರ್ಮಾಣ ಯಾವ ಪುರುಷಾರ್ಥಕ್ಕಾಗಿ?

–ಸುಲೋಚನ ಜೆ. ರಾವ್, ಮಲ್ಲೇಶ್ವರ

* ಖಾಸಗಿ ವಾಹನಗಳನ್ನು ನಿಯಂತ್ರಿಸಿ: ಉಕ್ಕಿನ ಸೇತುವೆ ನಿರ್ಮಾಣದಿಂದ ಪರಿಸರ ನಾಶವಾಗಲಿದೆ. ಇದರ ಬದಲು ಖಾಸಗಿ ವಾಹನಗಳ ನಿಯಂತ್ರಣದ ಕುರಿತು ಸರ್ಕಾರ ಯೋಚಿಸಬೇಕು. ವಾರದಲ್ಲಿ 5 ದಿನ ದ್ವಿಚಕ್ರ ವಾಹನ ಮತ್ತು ವಾರಾಂತ್ಯದಲ್ಲಿ ಮಾತ್ರ ನಾಲ್ಕು ಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.

–ಎಂ.ವತ್ಸಲ, ವಿಜಯನಗರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !