ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಬೇಟೆಗೆ ತಟ್ಟಲಿದೆ ಜಲಕ್ಷಾಮದ ಬಿಸಿ..!

ಎರಡು ದಶಕ ಕಳೆದರೂ ತಪ್ಪದ ಕುಡಿಯುವ ನೀರಿನ ಗೋಳು; ಪ್ರಸಕ್ತ ಚುನಾವಣೆಯ ಮೇಲೆ ಪ್ರಭಾವ ಸಾಧ್ಯತೆ
Last Updated 12 ಏಪ್ರಿಲ್ 2018, 8:30 IST
ಅಕ್ಷರ ಗಾತ್ರ

ಗದಗ: ಜೆ.ಎಚ್‌.ಪಟೇಲ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ಏಳು ಜಿಲ್ಲೆಗಳ ಪೈಕಿ ಗದಗ ಕೂಡ ಒಂದು. ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು 2 ದಶಕಗಳು ಕಳೆದರೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ತಪ್ಪಿಲ್ಲ. ಸತತ ಬರ ಮತ್ತು ಮಳೆ ಕೊರತೆ ಎದುರಿಸುತ್ತಿರುವ ಇಲ್ಲಿ ನೀರಿನದ್ದೇ ದೊಡ್ಡ ವೇದನೆ.

ಜಿಲ್ಲೆಯ ಒಂದು ಬದಿ ತುಂಗಭದ್ರಾ ಮತ್ತೊಂದು ಬದಿ ಮಲಪ್ರಭಾ ನದಿ ಹರಿಯುತ್ತಿದ್ದರೂ ನೀರಿನ ಬವಣೆ ತಪ್ಪಿಸಲು ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ. ಪ್ರಮುಖ ನೀರಾವರಿ ಯೋಜನೆಗಳಾದ ಕಳಸಾ ಬಂಡೂರಿ, ಮಹದಾಯಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ನೀರಿನ ಬವಣೆಯೇ ಈ ಬಾರಿಯೂ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅಭ್ಯರ್ಥಿಗಳಿಗೂ ಇದರ ಬಿಸಿ ನೇರವಾಗಿ ತಟ್ಟುವ ಸಾಧ್ಯತೆಗಳಿವೆ.

ಜಿಲ್ಲೆಯ ಒಟ್ಟು ಜನಸಂಖ್ಯೆ 11.36 ಲಕ್ಷ. 122 ಗ್ರಾಮ ಪಂಚಾಯ್ತಿಗಳು 309 ಕಂದಾಯ ಗ್ರಾಮಗಳನ್ನು ಹೊಂದಿರುವ ಜಿಲ್ಲೆಯಲ್ಲಿ 8.30 ಲಕ್ಷ ಮತದಾರರಿದ್ದಾರೆ. ಎರಡು ನದಿ ಮತ್ತು ಒಂದು ಪ್ರಮುಖ ಹಳ್ಳ ಜಿಲ್ಲೆಯಲ್ಲಿ ಹರಿಯುತ್ತಿದ್ದರೂ ಜಲಕ್ಷಾಮ ಎಲ್ಲ ತಾಲ್ಲೂಕುಗಳಲ್ಲಿ ಸಾಮಾನ್ಯ. ಜಿಲ್ಲೆಯು ಸಂಪೂರ್ಣ ಒಣಬೇಸಾಯವನ್ನೇ ಅವಲಂಬಿಸಿದೆ. ಪ್ರತಿ ಹಳ್ಳಿಯಲ್ಲೂ ಕೊಳವೆಬಾವಿ ಇದೆ. ಆದರೆ, ಕೊಳವೆಬಾವಿಯಿಂದ ಬರುವ ಫ್ಲೋರೈಡ್‌ಯುಕ್ತ ನೀರು ಕುಡಿಯಲು ಯೋಗ್ಯವಲ್ಲ. ತುಂಗಭದ್ರಾ ಮತ್ತು ಮಲಪ್ರಭಾ ನದಿ ಮೂಲವೇ ಕುಡಿಯುವ ನೀರಿಗೆ ಏಕೈಕ ಆಧಾರ. ಆದರೆ, ಪ್ರತಿ ಬೇಸಿಗೆಯಲ್ಲಿ ತುಂಗಭದ್ರಾ ನದಿಪಾತ್ರದಲ್ಲಿ ನೀರು ಬತ್ತುತ್ತದೆ. ಆಗ, ಗದಗ–ಬೆಟಗೇರಿ ಸೇರಿದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚುತ್ತದೆ.

ಗದಗ–ಬೆಟಗೇರಿ ಅವಳಿ ನಗರದ ಜನತೆಗೆ ನಿರಂತರ ಕುಡಿಯುವ ನೀರು ಪೂರೈಸುವಾಗ ಸಲುವಾಗಿ ₨107 ಕೋಟಿ ವೆಚ್ಚದಲ್ಲಿ 24X7 ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮುಂಡರಗಿ ತಾಲ್ಲೂಕಿನ ಹಮ್ಮಿಗೆ ಬ್ಯಾರೇಜ್‌ನಿಂದ ತುಂಗಭದ್ರಾ ನದಿ ನೀರನ್ನು ನೇರವಾಗಿ ಗದುಗಿಗೆ ಪೂರೈಸುವ ಯೋಜನೆ ಇದು. ಇದಕ್ಕಾಗಿ 302 ಕಿ.ಮೀ. ಪೈಪ್‌ಲೈನ್‌ ಅಳವಡಿಸಲಾಗಿದೆ. ಕಳೆದ 3 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ನಗರದ 35 ವಾರ್ಡ್‌ಗಳ ಪೈಕಿ ಕೆಲವು ವಾರ್ಡ್‌ಗಳಿಗೆ ನೀರಿನ ಭಾಗ್ಯ ಲಭಿಸಿದೆ. ಆದರೆ, ಬ್ಯಾರೇಜ್‌ನಲ್ಲಿ ನೀರು ಖಾಲಿಯಾಗುತ್ತಿದ್ದಂತೆ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಪ್ರತಿ ಬೇಸಿಗೆಯಲ್ಲಿ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಜನರು ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುವುದು ಅನಿವಾರ್ಯ.

‘ನಗರ ಪ್ರದೇಶದಲ್ಲಿ ₨350ರಿಂದ ₨400ಕ್ಕೆ ಒಂದು ಟ್ಯಾಂಕರ್‌ ನೀರು ಲಭಿಸುತ್ತದೆ. ಆದರೆ, ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಹಗಲು ಹೊತ್ತು ವಿದ್ಯುತ್‌ ಇರುವುದಿಲ್ಲ. ರಾತ್ರಿ ವಿದ್ಯುತ್‌ ಬಂದಾಗ ಗ್ರಾಮಸ್ಥರು ಖಾಸಗಿ ಬೋರ್‌ವೆಲ್‌ ಮಾಲೀಕರ ಮೊರೆ ಹೋಗಬೇಕಾಗಿದೆ.ಅವರು ಪೂರೈಸುವ ನೀರಿಗಾಗಿ ಜನರು ಮಧ್ಯರಾತ್ರಿಯಲ್ಲಿ ಸರದಿಯಲ್ಲಿ ನಿಲ್ಲಬೇಕಾಗಿದೆ’ ಎನ್ನುತ್ತಾರೆ ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮಸ್ಥ ಬಸವರಾಜ ಭಜಂತ್ರಿ.

ಜಿಲ್ಲೆಯ 343 ಜನವಸತಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 20 ದಿನಗಳ ಹಿಂದಷ್ಟೇ ಗದುಗಿನಲ್ಲಿ ಚಾಲನೆ ನೀಡಿದ್ದಾರೆ. ದೇಶದ ದೊಡ್ಡ ಕುಡಿವ ನೀರಿನ ಯೋಜನೆಗಳಲ್ಲಿ ಒಂದಾದ ಇದನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ₨1,050 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಿದೆ. ತುಂಗಭದ್ರಾ ನದಿಯಿಂದ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲ್ಲೂಕಿನ 212 ಗ್ರಾಮಗಳಿಗೆ ಹಾಗೂ ಮುಂಡರಗಿ ಪಟ್ಟಣಕ್ಕೆ ನೀರು ಪೂರೈಕೆ ಆಗಲಿದೆ. ಮಲಪ್ರಭಾ ನದಿಯಿಂದ ನರಗುಂದ, ರೋಣ, ಗಜೇಂದ್ರಗಡ ತಾಲ್ಲೂಕುಗಳ 131 ಗ್ರಾಮಗಳಿಗೆ ನೀರು ಪೂರೈಕೆಯಾಗಲಿದೆ. ಈ ಯೋಜನೆಯೇನೋ ನಿಗದಿತ ಅವಧಿಯಲ್ಲೇ ಉದ್ಘಾಟನೆಗೊಂಡಿದೆ. ಆದರೆ, ನದಿಪಾತ್ರದಲ್ಲಿ ನೀರಿನ ಕೊರತೆಯಿಂದ, ಉದ್ಘಾಟನೆ ದಿನ ನೀರು ಬಂದಿದ್ದು ಬಿಟ್ಟರೆ, ನಂತರ ಈ ಪೈಪ್‌ಲೈನ್‌ ಮೂಲಕ ನೀರು ಹರಿದಿಲ್ಲ. ಕೆಲವೆಡೆ ಕಾಮಗಾರಿ ಇನ್ನೂ ನಡೆಯುತ್ತಿದೆ.

ಕುಡಿಯುವ ನೀರಿನ ಬವಣೆ ನೀಗಿಸಲು ಜಾರಿಗೆ ತಂದಿರುವ 24x7 ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಮುಂದಿಟ್ಟು ಕಾಂಗ್ರೆಸ್‌ ಮತಯಾಚನೆ ಮಾಡುತ್ತಿದೆ. ಜಿಲ್ಲೆಯಲ್ಲಿನ ನೀರಿನ ಸಮಸ್ಯೆಯನ್ನೇ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಪ್ರಚಾರ ನಡೆಸುತ್ತಿದೆ. ಒಟ್ಟಿನಲ್ಲಿ ನೀರು ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಕುಡಿಯುವ ನೀರಿಗೆ ತತ್ವಾರ

ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ, ಗುಡ್ಡದಬೂದಿಹಾಳ, ಹೈತಾಪುರ, ಯಕ್ಲಾಸಪುರ, ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪೂರ, ಹಿರೇವಡ್ಡಟ್ಟಿ. ಲಕ್ಷ್ಮೇಶ್ವರ ತಾಲ್ಲೂಕಿನ ಯಲ್ಲಾಪುರ, ರೋಣ ತಾಲ್ಲೂಕಿನ ಮೆಣಸಗಿ, ಬೆಳವಣಿಕೆ, ಯಾವಗಲ್‌, ಲಕ್ಕಲಕಟ್ಟಿ, ಹೊಳೆ ಆಲೂರು, ಗಜೇಂದ್ರಗಡ ತಾಲ್ಲೂಕಿನ ಲಕ್ಕಲಕಟ್ಟಿ, ನರಗುಂದ ತಾಲ್ಲೂಕಿನ ಬನಹಟ್ಟಿ, ಮೂಗನೂರು, ಶಿರೋಳ, ಹಿರೇಕೊಪ್ಪ, ಕುರಗೋವಿನ ಕೊಪ್ಪ, ಗ್ರಾಮಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ.

**

ನೀರಿನ ಬವಣೆಯಿಂದ ಬಳಲುತ್ತಿದ್ದ ಜಿಲ್ಲೆಗೆ ತುಂಗಭದ್ರಾ ನದಿ ಹಾಗೂ ರೇಣುಕಾ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗಿದೆ. ಜಿಲ್ಲೆಯ ಕಟ್ಟಕಡೆಯ ಹಳ್ಳಿಗಳಿಗೂ ಕುಡಿಯುವ ನೀರು ಒದಗಿಸಲಾಗಿದೆ – ಎಚ್‌.ಕೆ ಪಾಟೀಲ, ಸಚಿವ.

**

ನಮ್ಮೂರಿನಿಂದಲೇ ಮಲಪ್ರಭಾ ನದಿ ಹರಿಯುತ್ತಿದ್ದರೂ, ನಮಗೆ ಕುಡಿಯವ ನೀರಿನ ಸಮಸ್ಯೆ ತಪ್ಪಿಲ್ಲ. ಮಳೆ ಕೊರತೆಯಿಂದ ನದಿಯಲ್ಲಿ ನೀರಿಲ್ಲ. ಸರ್ಕಾರ ನೀರಿನ ಯೋಜನೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದರೂ ಅದರ ಪ್ರಯೋಜನ ಜನರಿಗೆ ಲಭಿಸಿಲ್ಲ – ಡಿ.ಎಸ್‌. ಶೆಲ್ಲಿಕೇರಿ, ವರ್ತಕ, ಹೊಳೆ ಆಲೂರು.

**

ನೀರಿನ ಸಮಸ್ಯೆ ಗಂಭೀರವಾಗಿದೆ. ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳಲು ಒಂದು ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ ₨2 ರಿಂದ 3 ಸಾವಿರ ಖರ್ಚಾಗುತ್ತದೆ. ದುಡಿಮೆ ಬಿಟ್ಟು ಕುಡಿಯುವ ನೀರಿಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕು – ವಿಶ್ವನಾಥ ಖಾನಾಪುರ, ಗದಗ.

**

ಕುಡಿಯುವ ನೀರಿನ ಏಕೈಕ ಮೂಲವಾಗಿರುವ ಗ್ರಾಮದ ಕೆರೆ ನೀರು ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಬತ್ತಲಿದೆ. ಗ್ರಾಮದಲ್ಲಿ ಕೊಳವೆಬಾವಿಯೂ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳೂ ಇಲ್ಲ – ಅಣ್ಣಪ್ಪಗೌಡ ಪಾಟೀಲ, ನರಗುಂದ ತಾಲ್ಲೂಕಿನ, ಮೂಗನೂರ ಗ್ರಾಮಸ್ಥ

**

ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮವು ಹಲವು ವರ್ಷಗಳಿಂದ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಎಲ್ಲ ಜನಪ್ರತಿನಿಧಿಗಳು,ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ – ಬಸವರಾಜ ಭಜಂತ್ರಿ, ಚಿಕ್ಕವಡ್ಡಟ್ಟಿ ಗ್ರಾಮಸ್ಥ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT