ಎಚ್‌.ಡಿ. ಕುಮಾರಸ್ವಾಮಿ ಪರ ಬಿ ರಿಪೋರ್ಟ್‌ಗೆ ಆಕ್ಷೇಪಣೆ

ಗುರುವಾರ , ಮಾರ್ಚ್ 21, 2019
25 °C
ಬನಶಂಕರಿ ಬಡಾವಣೆ ಜಮೀನು ಡಿನೋಟಿಫಿಕೇಶನ್‌

ಎಚ್‌.ಡಿ. ಕುಮಾರಸ್ವಾಮಿ ಪರ ಬಿ ರಿಪೋರ್ಟ್‌ಗೆ ಆಕ್ಷೇಪಣೆ

Published:
Updated:

ಬೆಂಗಳೂರು: ಇಲ್ಲಿನ ಬನಶಂಕರಿ ಬಡಾವಣೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸುಮಾರು 4 ಎಕರೆ ಜಮೀನನ್ನು ಡಿನೋಟಿಫಿಕೇಶನ್ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ‘ಬಿ ರಿಪೋರ್ಟ್‌’ ವಿರುದ್ಧ ಆಕ್ಷೇಪಣೆ ಸಲ್ಲಿಸಲಾಗಿದೆ.  

ಬನಶಂಕರಿ 5ನೇ ಹಂತದಲ್ಲಿರುವ ಹಲಗೆವಡೇರಹಳ್ಳಿಯ ಜಮೀನು ಡಿ ನೋಟಿಫಿಕೇಷನ್ ಸಂಬಂಧ ಪಿರ್ಯಾದಿ ಮಹಾದೇವ ಸ್ವಾಮಿ ಗುರುವಾರ ಆಕ್ಷೇಪಣೆ ಸಲ್ಲಿಸಿದ್ದಾರೆ.

ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ (2006–07ರಲ್ಲಿ) ಸಮಯದಲ್ಲಿ ಬಿಡಿಎ ಬಡಾವಣೆಗಾಗಿ ವಶಪಡಿಸಿಕೊಂಡಿದ್ದ  ಜಮೀನನ್ನು ಕಾನೂನುಬಾಹಿರವಾಗಿ ಪದ್ಮಾ, ಚೇತನ್‍ ಕುಮಾರ್ ಮತ್ತು ಶಾಂತಾ ಅವರ ಪರ ಡಿ ನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದ ಬಿಡಿಎ ಜಮೀನು ಮಾಲೀಕರಿಗೆ ಪರಿಹಾರ ನೀಡಿತ್ತು. ಆನಂತರ ಮಾಲೀಕರು ಡಿ ನೋಟಿಫಿಕೇಷನ್ ಮನವಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಮುಖ್ಯಮಂತ್ರಿ ಕಚೇರಿಯಿಂದ ಸಂದೇಶ ರವಾನೆಯಾಗಿತ್ತು. ನೋಟಿಫೈ ಆದ ಜಮೀನನ್ನು ಡಿನೋಟಿಫೈ ಮಾಡಲು ಬರುವುದಿಲ್ಲ ಎಂಬ ಅಭಿಪ್ರಾಯವನ್ನು ಇಲಾಖೆಗಳು ನೀಡಿದ್ದವು.

ಆದರೆ, ಕುಮಾರಸ್ವಾಮಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಇಲಾಖೆಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಡಿನೋಟಿಫೈ ಮಾಡಿದ್ದಾರೆಂದು ಆರೋಪಿಸಿ ಚಾಮರಾಜನಗರದ ಮಾಹಿತಿ ಹಕ್ಕು ಕಾರ್ಯಕರ್ತ ಮಹಾದೇವಸ್ವಾಮಿ  ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

 ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು. ಈ ನಡುವೆ ಎಫ್‍ಐಆರ್ ರದ್ದು ಕೋರಿ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಲೋಕಾಯುಕ್ತ ‍‍‍‍ಪೊಲೀಸರು ಈ ವರ್ಷದ ಜನವರಿಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಆರೋಪ ಸಾಬೀತಾಗಿಲ್ಲ ಎಂದು ವರದಿಯಲ್ಲಿ ಹೇಳಿದ್ದರು.

‘ಕುಮಾರಸ್ವಾಮಿ ಲೋಕಾಯುಕ್ತ ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆ. ಈ ವಿಚಾರವನ್ನು ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಮಾ.16ಕ್ಕೆ ನಿಗದಿಯಾಗಿದೆ’ ಎಂದು ಮಹಾದೇವಸ್ವಾಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !