ಹಸಿ ಕಸವನ್ನು ತಗ್ಗಿಸಲು ‘ಭಗೀರಥ’ ಯತ್ನ

7
ಖಾಸಗಿ ಸಂಸ್ಥೆಯ ಮೂಲಕ ಜಾಗೃತಿ ಮೂಡಿಸುತ್ತಿರುವ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ

ಹಸಿ ಕಸವನ್ನು ತಗ್ಗಿಸಲು ‘ಭಗೀರಥ’ ಯತ್ನ

Published:
Updated:
Prajavani

ಹುಬ್ಬಳ್ಳಿ: ಪ್ರತಿ ದಿನ ಉತ್ಪತ್ತಿಯಾಗುವ ಕಸ ವಿಲೇವಾರಿಗೆ ಹಲವು ಕ್ರಮ ಕೈಗೊಂಡಿರುವ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ, ತ್ಯಾಜ್ಯದ ಪ್ರಮಾಣವನ್ನು ಮೂಲದಲ್ಲಿಯೇ ಕಡಿಮೆ ಮಾಡುವತ್ತ ಚಿತ್ತ ಹರಿಸಿದೆ. ಅದಕ್ಕಾಗಿ, ಮನೆಯಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆ ನೀಡುತ್ತಿದೆ. ಭಗೀರಥ ಎಂಬ ಖಾಸಗಿ ಸಂಸ್ಥೆಗೆ ಈ ಜವಾಬ್ದಾರಿ ವಹಿಸಲಾಗಿದ್ದು, ಈಗಾಗಲೇ 12 ಕಡೆ ಪ್ರಾತ್ಯಕ್ಷಿಕೆ ನೀಡಲಾಗಿದೆ.

ಸದ್ಯ ಮನೆ ಮನೆಯಿಂದ ಸಂಗ್ರಹಿಸುತ್ತಿರುವುದರಿಂದ ಒಟ್ಟು ಕಸದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಮನೆಗಳಲ್ಲಿ ಹಸಿ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಯಾದರೆ ಕಸದ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಲಿದೆ. ಲ್ಯಾಂಡ್ ಫಿಲ್ಲಿಂಗ್ ಪ್ರಮಾಣ ತಗ್ಗಲಿದೆ. ಸಂಗ್ರಹಣೆ, ಸಾಗಣೆಗಾಗಿ ವ್ಯಯಿಸುತ್ತಿರುವ ಶ್ರಮ– ಹಣ ಉಳಿಯಲಿದೆ.

‘ಮನೆಯಲ್ಲಿ ಉತ್ಪಾದನೆಯಾಗುವ ಹಸಿರು ಕಸವನ್ನು ಗೊಬ್ಬರವಾಗಿ ಪರಿವರ್ತಿಸಿದರೆ ತ್ಯಾಜ್ಯದ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಆದ್ದರಿಂದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವಿಧಾನ ಅಳವಡಿಸಿಕೊಳ್ಳಲು ಹೆಚ್ಚು ಖರ್ಚು ಮಾಡಬೇಕಾದ ಅಗತ್ಯವೂ ಇಲ್ಲ’ ಎನ್ನುತ್ತಾರೆ ಪಾಲಿಕೆಯ ಪರಿಸರ ಎಂಜಿನಿಯರ್ ನಯನ.
 
‘ಒಣ ಕಸವನ್ನು ಸಂಗ್ರಹಿಸಿ ಹತ್ತು ಹದಿನೈದು ದಿನಕ್ಕೊಮ್ಮೆ ವಿಲೇವಾರಿ ಮಾಡಬಹುದು. ಅದರಲ್ಲಿಯೂ ಬಾಟಲಿ, ಪ್ಲಾಸ್ಟಿಕ್, ಲೋಹದ ವಸ್ತು ಮುಂತಾದವುಗಳನ್ನು ಸಂಗ್ರಹಿಸಿಟ್ಟರೆ ಮಾರಾಟ ಮಾಡಿ ಹಣ ಗಳಿಸಬಹುದು. ಆದರೆ ಹಾಗೆ ಮಾಡದೆ ಮನೆಯಲ್ಲಿ ಉತ್ಪತ್ತಿಯಾಗುವ ಎಲ್ಲ ರೀತಿಯ ಕಸವನ್ನು ಒಟ್ಟಿಗೆ ಸಂಗ್ರಹಿಸುತ್ತಿದ್ದಾರೆ. ಈ ಧೋರಣೆಯನ್ನು ಬದಲಾಯಿಸಲು ಪ್ರಯತ್ನಿಸಲಾಗುತ್ತಿದೆ’ ಎನ್ನುತ್ತಾರೆ ಭಗೀರಥ ಸಂಸ್ಥೆಯ ನಿವೇದಿತಾ.

‘ಮನೆಯಲ್ಲಿ ಗೊಬ್ಬರ ತಯಾರಿಸಿದರೆ ಅದನ್ನು ಕೈತೋಟಕ್ಕೆ, ಕುಂಡದಲ್ಲಿ ಬೆಳೆಸುವ ಹೂ– ಅಲಂಕಾರಿಕ ಗಿಡಗಳಿಗೆ ಹಾಕಬಹುದು. ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮಾರಾಟ ಸಹ ಮಾಡಬಹುದು. ಹಸಿ ಕಸ ಈ ರೀತಿ ವಿಲೇವಾರಿಯಾದರೆ ಒಣ ಕಸವನ್ನು ಪ್ರತಿ ದಿನವೂ ಕಸದ ವಾಹನಕ್ಕೆ ನೀಡುವ ಅಗತ್ಯ ಇರುವುದಿಲ್ಲ. 10–15 ದಿನಕ್ಕೊಮ್ಮೆ ನಿರುಪಯೋಗಿ ಹಾಗೂ ಮಾರಾಟವಾಗದ ವಸ್ತುಗಳನ್ನು ಮಾತ್ರ ವಿಲೇವಾರಿ ಮಾಡಬಹುದು. ಆಯ್ದ ಕಡೆ ಇಂತಹ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಒಂದು ಸ್ಟಾಲ್ ಹಾಕಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !